ಕೈಗಾರಿಕಾ ಸಂಸ್ಕೃತಿಯ ಜಿಲ್ಲೆ ಮಾಡುವ ಸಂಕಲ್ಪ

| Published : Jan 27 2025, 12:49 AM IST

ಕೈಗಾರಿಕಾ ಸಂಸ್ಕೃತಿಯ ಜಿಲ್ಲೆ ಮಾಡುವ ಸಂಕಲ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಿಜಯಪುರ ಜಿಲ್ಲೆ ಈಗ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಪ್ರಸಿದ್ಧವಾಗಿದೆ. ಕೈಗಾರಿಕಾ ಸಂಸ್ಕೃತಿಯ ಜಿಲ್ಲೆಯನ್ನಾಗಿ ಮಾಡಬೇಕೆಂಬುದು ಸರ್ಕಾರದ ಸಂಕಲ್ಪವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ್ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರ ಜಿಲ್ಲೆ ಈಗ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಪ್ರಸಿದ್ಧವಾಗಿದೆ. ಕೈಗಾರಿಕಾ ಸಂಸ್ಕೃತಿಯ ಜಿಲ್ಲೆಯನ್ನಾಗಿ ಮಾಡಬೇಕೆಂಬುದು ಸರ್ಕಾರದ ಸಂಕಲ್ಪವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ್ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ೭೬ನೇ ಗಣರಾಜ್ಯೋತ್ಸವ ದಿನದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ಅವರು, ವಿಜಯಪುರನ್ನು ಕೈಗಾರಿಕಾ ಸಂಸ್ಕೃತಿಯ ಜಿಲ್ಲೆಯನ್ನಾಗಿ ಮಾಡವುದಕ್ಕಾಗಿ ಇಂಧನ ಕ್ಷೇತ್ರಗಳ ಸಾಧನಗಳು, ಯಂತ್ರಗಳು ಮತ್ತು ಉಪಕರಣಗಳು, ನಾನ್-ಮೆಟಾಲಿಕ್ ಖನಿಜೋತ್ಪನ್ನಗಳು, ಕೃಷಿ ಮತ್ತು ಕೃಷಿ ಆಧಾರಿತ ಉತ್ಪನ್ನಗಳು, ನ್ಯೂಟಾಸುಟಿಕಲ್ಸ್ ಮೆಡಿಸಿನಲ್ ಮತ್ತು ಬೊಟಾನಿಕಲ್ ಉತ್ಪನ್ನಗಳು, ವಿಶೇಷ ಅಲಾಯ್ ಮತ್ತು ಲೋಹೋತ್ಪನ್ನಗಳು ಹೀಗೆ ಒಟ್ಟು ೬ ವಲಯಗಳ ಕೈಗಾರಿಕಾ ತಾಣವನ್ನಾಗಿ ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದರು.

ಮುಳವಾಡ ಗ್ರಾಮದಲ್ಲಿ ಕೆಐಎಡಿಬಿ ವ್ಯಾಪ್ತಿಯಲ್ಲಿ ಉತ್ಪಾದನಾ ಕ್ಲಸ್ಟರ್ ಸ್ಥಾಪನೆಗೆ ಕ್ರಮ ವಹಿಸಲಾಗುವುದು. ಪವನ ಮತ್ತು ಸೌರ ವಿದ್ಯುತ್ ಉತ್ಪಾದನೆಗೆ ಸೂಕ್ತವಾಗಿರುವ ಹಿನ್ನಲೆಯಲ್ಲಿ ಎರಡು ವಲಯಗಳ ಉದಯೋನ್ಮುಖ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಈ ನಿಟ್ಟಿನಲ್ಲಿ ಸುಜ್ಞಾನ್ ಪವನ ವಿದ್ಯುತ್ ಘಟಕ ನಮ್ಮ ಜಿಲ್ಲೆಯಲ್ಲಿ ೫.೦೦೦ ಮೆಗಾವ್ಯಾಟ್ ಸಾಮರ್ಥ್ಯದ ಘಟಕ ಪ್ರಾರಂಭಿಸಲು ತೀರ್ಮಾನಿಸಿದ್ದು, ಇದಕ್ಕಾಗಿ ೧೦೦ ಎಕರೆ ಭೂಮಿ ನೀಡಲಾಗುವುದು.

ರೆನೈಸಾನ್ಸ್ ಕಂಪನಿಯು ಸೋಲಾರ್ ಫ್ಯಾನಲ್ ಬಿಡಿಭಾಗಗಳ ತಯಾರಿಕಾ ಘಟಕವನ್ನು ಜಿಲ್ಲೆಯಲ್ಲಿ ₹ ೬೦೦೦ ಕೋಟಿ ಬಂಡವಾಳ ಹೂಡಿಕೆ ಮಾಡಿ, ಸ್ಥಾಪಿಸಲಿದೆ. ಇದು ಮುಂದಿನ ದಿನಗಳಲ್ಲಿ ೨೦ ಸಾವಿರ ಮೆಗಾವ್ಯಾಟ್ ಮಟ್ಟವನ್ನು ಮುಟ್ಟಲಿದ್ದು, ಇದರಿಂದ ಗರಿಷ್ಟ ೩ ಸಾವಿರ ಸೃಷ್ಟಿಯಾಗಲಿದೆ ಎಂದರು.

ಅಲ್ಲದೇ, ಐತಿಹಾಸಿಕ ಮಮದಾಪುರ ಕೆರೆಯನ್ನು ಆಕರ್ಷಕ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಜೈವಿಕ ಉದ್ಯಾನವನಕ್ಕೆ ಸಿದ್ದೇಶ್ವರ ಸ್ವಾಮೀಜಿಗಳ ಹೆಸರಿಡಲಾಗುವುದು. ೨೦೨೩ರಿಂದ ರಾಜ್ಯಕ್ಕೆ ಫಾಕ್ಸ್-ಕಾನ್, ಜಿಂದಾಲ್, ಟೊಯೊಟಾ, ಏರ್ ಇಂಡಿಯಾ ಮುಂತಾದ ಪ್ರತಿಷ್ಠಿತ ಕಂಪನಿಗಳಿಂದ ಏನಿಲ್ಲವೆಂದರೂ ₹ ೧.೧೫ ಲಕ್ಷ ಕೋಟಿ ಬಂಡವಾಳ ಹೂಡಿಕೆ ಹರಿದುಬಂದಿದೆ. ಐ-ಫೋನ್ ಬಿಡಿಭಾಗಗಳ ತಯಾರಿಕೆ, ಪವನ ವಿದ್ಯುತ್, ಕಾರು ಉತ್ಪಾದನೆ ಮತ್ತು ವಿಮಾನಗಳ ದುರಸ್ತಿ ಹಾಗೂ ನಿರ್ವಹಣೆ ಇತ್ಯಾದಿ ಕ್ಷೇತ್ರಗಳಲ್ಲಿ ಈ ಹೂಡಿಕೆ ಆಗಿದೆ. ಇದರ ಜೊತೆಗೆ ಇನ್ನೂ ₹ ೧ ಲಕ್ಷ ಕೋಟಿಗೂ ಹೆಚ್ಚಿನ ಹೂಡಿಕೆಯ ಖಾತ್ರಿ ರಾಜ್ಯಕ್ಕೆ ಸಿಕ್ಕಿದೆ ಎಂದು ಮಾಹಿತಿ ನೀಡಿದರು.

ಮಹಾನಗರ ಪಾಲಿಕೆ ಹಾಗೂ ಸುತ್ತಮುತ್ತಲಿನ ವ್ಯಾಪ್ತಿಯ ಭೂತನಾಳ ಕೆರೆ, ಬೇಗಂ ತಲಾಬ್, ಗೋಲಗುಂಬಜ್, ಇಬ್ರಾಹಿಂ ರೋಜಾ, ಕುಮಟಗಿ ಕೆರೆ ಬೇಸಿಗೆ ಅರಮನೆ ಹಾಗೂ ಕರಾಡ ದೊಡ್ಡ ಮಾನವ ನಿರ್ಮಿತ ಅರಣ್ಯ ಪ್ರದೇಶ ಇವುಗಳನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ಮತ್ತು ಸಿ.ಎಸ್.ಆರ್ ಅನುದಾನದಲ್ಲಿ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿ ಪಡಿಸುವ ಕಾರ್ಯ ಪ್ರಗತಿಯಲ್ಲಿವೆ. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಪಾಲಿಕೆಗೆ ₹ ೧೫೦ ಕೋಟಿ ಅನುದಾನ ಹಂಚಿಕೆ ಮಾಡಿದ್ದಾಗಿ ತಿಳಿಸಿದರು.

ಇನ್ನು, ಬಬಲೇಶ್ವರ ಹಾಗೂ ತಿಕೋಟಾ ತಾಲೂಕುಗಳನ್ನು ಮಾಡೆಲ್ ತಾಲೂಕುಗಳೆಂದು ಆಯ್ಕೆ ಮಾಡಿ ಸಿ.ಎಸ್.ಆರ್ ಘಟಕಗಳ ಸಹಯೋಗದೊಂದಿಗೆ ಶಾಲೆಗಳ ಕಟ್ಟಡ ದುರಸ್ಥಿ, ನಿರ್ಮಾಣ ಹಾಗೂ ಸ್ಮಾರ್ಟ್ ಕ್ಲಾಸ್ ಅಳವಡಿಕೆ ಮಾಡುತ್ತಿದ್ದು, ಜಿಲ್ಲೆಯಾದ್ಯಂತ ಕೆಲವು ಸ್ಥಳಗಳಲ್ಲಿ ವಿಸ್ತರಣೆ ಮಾಡಲು ಯೋಜಿಸಲಾಗಿದೆ ಎಂದರು.

ಜಿಲ್ಲಾಸ್ಪತ್ರೆ ಆವರಣದಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸಾ ಘಟಕ:ಜಿಲ್ಲಾಸ್ಪತ್ರೆ ಆವರಣದಲ್ಲಿ ೧೦ ಹಾಸಿಗೆಯ ಕಣ್ಣಿನ ಶಸ್ತ್ರ ಚಿಕಿತ್ಸಾ ಘಟಕ, ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಘಟಕ, ಐ.ಪಿ.ಎಚ್.ಎಲ್ ಪ್ರಯೋಗಶಾಲೆ, ಧೋಬಿಘಾಟ ಹಾಗೂ ಶವಾಗೃಹ ಪ್ರಾರಂಭಗೊಂಡಿದೆ. ೫೦ ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಹಾಗೂ ನಾಗರಿಕ ಸೌಲಭ್ಯ ವಸತಿ ನಿಲಯಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ,ಬಿ.ಪಾಟೀಲ ಪ್ರಕಟಿಸಿದರು.

ಸಂಸದ ರಮೇಶ ಜಿಗಜಿಣಗಿ, ನಗರ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್, ವಿಧಾನ ಪರಿಷತ್ ಶಾಸಕ ರವಿಕುಮಾರ.ಎನ್, ಕೇಶವ ಪ್ರಸಾದ.ಎಸ್, ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮೇಯರ್ ಮಹೇಜಬಿನ ಹೊರ್ತಿ, ಉಪ ಮೇಯರ್ ದಿನೇಶ ಹಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕನಾನ್ ಅಬ್ದುಲ್ ಹಮೀದ ಮುಶ್ರೀಪ್, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಪಂ ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮುಂತಾದವರು ಇದ್ದರು.