ತಾಲೂಕಿನ ಜನಸಾಮಾನ್ಯರು ತಮ್ಮ ವೈಯುಕ್ತಿಕ ಅಥವಾ ಗ್ರಾಮದ ಸಮಸ್ಯೆ ಹೊತ್ತು ತಮ್ಮ ಕಚೇರಿಗೆ ಬಂದು ಅರ್ಜಿ ಕೊಟ್ಟರೆ ಕಾಲಮಿತಿಯೊಳಗೆ ಅರ್ಜಿಗಳನ್ನು ವಿಲೇವಾರಿ ಮಾಡಿ ಸಮಸ್ಯೆಗೆ ಪರಿಹಾರ ಒದಗಿಸಬೇಕು. ವಿನಾ ಕಾರಣ ಜನರನ್ನು ಕಚೇರಿಗಳಿಗೆ ಅಲೆದಾಡಿಸಬಾರದು. ಅಧಿಕಾರಿಗಳೇ ಬಗೆಹರಿಸಬಹುದಾದ ಸಣ್ಣ ಪುಟ್ಟ ಸಮಸ್ಯೆಗಳಿಗೂ ಜನರು ನನ್ನ ಬಳಿ ಬಂದು ನಿಲ್ಲುವಂತಾಗಬಾರದು. ಕಚೇರಿ ಸಿಬ್ಬಂದಿಯನ್ನು ಹಿಡಿತದಲ್ಲಿಟ್ಟುಕೊಂಡು ಎಲ್ಲಾ ಇಲಾಖೆಗಳ ಅಧಿಕಾರಿಗಳು ಜನಸ್ನೇಹಿ ಆಡಳಿತ ನೀಡಬೇಕು ಎಂದು ಸೂಚಿಸಿದರು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಬರುವ ಸಮಸ್ಯೆಗಳನ್ನು ಆ ತಿಂಗಳ ಅಂತ್ಯದೊಳಗೆ ಇತ್ಯರ್ಥಪಡಿಸಬೇಕು ಅಥವಾ ಬಗೆಹರಿಸುವ ಹಂತಕ್ಕೆ ಹೋಗಿರಬೇಕು. ಮುಂದಿನ ಸಭೆಯಲ್ಲಿ ಅದೇ ಸಮಸ್ಯೆಗೆ ಸ್ಪಂದಿಸಿಲ್ಲವೆಂದು ದೂರು ಕೇಳಿಬಂದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಜರುಗಿಸಲಾಗುವುದು ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಶನಿವಾರ ನಡೆಸಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಕಂದಾಯ, ಪಂಚಾಯತ್ ರಾಜ್, ಸೆಸ್ಕಾಂ, ಅರಣ್ಯ ಸೇರಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆ ಹೊತ್ತು ಬಂದಿದ್ದ ನೂರಾರು ಜನರಿಂದ ಅಹವಾಲು ಅರ್ಜಿ ಸ್ವೀಕರಿಸಿ ಮಾತನಾಡಿದರು.
ಕೆಲ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿ ಇನ್ನುಳಿದ ದೂರು ಅರ್ಜಿಗಳನ್ನು ಆಯಾ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿ ಕಾನೂನಾತ್ಮಕವಾಗಿದ್ದರೆ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಬೇಕೆಂದು ತಾಕೀತು ಮಾಡಿದರು.ಕುಂದು ಕೊರತೆ ಸಭೆಯಲ್ಲಿ ಪೌತಿ ಖಾತೆ, ಜಮೀನು ಸರ್ವೇ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳೇ ಅತಿ ಹೆಚ್ಚು ಕೇಳಿ ಬಂದವು. ಇನ್ನುಳಿದಂತೆ ಹೇಮಾವತಿ ನಾಲಾ ದುರಸ್ಥಿಯಾಗಬೇಕು, ಅರಣ್ಯ ಇಲಾಖೆಯಲ್ಲಿ ಎನ್‌ಒಸಿ ನೀಡುತ್ತಿಲ್ಲ. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಕಾಲೇಜಿನಲ್ಲಿ ದಾಖಲಾತಿಗೆ ಅವಕಾಶ ಕೊಡಿಸಿ, ಕಾಮಗಾರಿ ಮುಗಿದಿದ್ದರೂ ಬಿಲ್ ಪಾವತಿ ಮಾಡುತ್ತಿಲ್ಲ ಎಂಬಿತ್ಯಾದಿ ಸಮಸ್ಯೆಗಳನ್ನು ಸಚಿವರ ಬಳಿ ಹೇಳಿಕೊಂಡರು.
ಎಲ್ಲಾ ಜನರ ಸಮಸ್ಯೆಗಳನ್ನು ಸಮಚಿತ್ತದಿಂದಲೇ ಆಲಿಸಿದ ಸಚಿವರು, ಸಮಸ್ಯೆಗಳ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿ ಮುಂದಿನ ಶನಿವಾರದ ಸಭೆಗೆ ಈ ಸಮಸ್ಯೆಗಳು ಬಗೆಹರಿದಿವೆಯೇ ಅಥವಾ ಯಾವ ಹಂತದಲ್ಲಿವೆ ಎಂಬುದರ ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ಕಾನೂನು ಮೀರಿದ ಕೆಲಸ ಬೇಡ:
ಎಲ್ಲಾ ಸಮಸ್ಯೆಗಳನ್ನು ಪರಾಮರ್ಶಿಸಿ ಕಾನೂನಾತ್ಮಕವಾಗಿ ಇತ್ಯರ್ಥಪಡಿಸಿ. ಕಾನೂನಿಗೆ ವಿರುದ್ಧವಾಗಿದ್ದರೆ ಅಂತಹ ಅರ್ಜಿದಾರರಿಗೆ ಇರುವ ಸಮಸ್ಯೆ ಬಗ್ಗೆ ಅರಿವು ಮೂಡಿಸಬೇಕು. ಆದಾಗ್ಯೂ ಅರ್ಜಿದಾರ ಸಮಾಧಾನವಾಗದಿದ್ದರೆ ನನ್ನ ಗಮನಕ್ಕೆ ತಂದರೆ ನಾನು ಅರ್ಜಿದಾರನಿಗೆ ಮನವರಿಕೆ ಮಾಡಿಕೊಡುತ್ತೇನೆ. ನಮ್ಮ ಪಕ್ಷದ ಮುಖಂಡರೇ ಆಗಿರಲಿ ಅಥವಾ ಸತ್ಯಾಂಶ ಗೊತ್ತಿರದೆ ಸಮಸ್ಯೆ ಬಂದಾಗ ಇತ್ಯರ್ಥಪಡಿಸಲು ನಾನೇ ಸೂಚಿಸಿದರೂ ಕೂಡ ಅದು ಕಾನೂನುಬಾಹಿರವಾಗಿದ್ದರೆ ಅಂತಹ ಕೆಲಸವನ್ನು ಮಾಡಬೇಡಿ ಎಂದರು.ತಾಲೂಕಿನ ಜನಸಾಮಾನ್ಯರು ತಮ್ಮ ವೈಯುಕ್ತಿಕ ಅಥವಾ ಗ್ರಾಮದ ಸಮಸ್ಯೆ ಹೊತ್ತು ತಮ್ಮ ಕಚೇರಿಗೆ ಬಂದು ಅರ್ಜಿ ಕೊಟ್ಟರೆ ಕಾಲಮಿತಿಯೊಳಗೆ ಅರ್ಜಿಗಳನ್ನು ವಿಲೇವಾರಿ ಮಾಡಿ ಸಮಸ್ಯೆಗೆ ಪರಿಹಾರ ಒದಗಿಸಬೇಕು. ವಿನಾ ಕಾರಣ ಜನರನ್ನು ಕಚೇರಿಗಳಿಗೆ ಅಲೆದಾಡಿಸಬಾರದು. ಅಧಿಕಾರಿಗಳೇ ಬಗೆಹರಿಸಬಹುದಾದ ಸಣ್ಣ ಪುಟ್ಟ ಸಮಸ್ಯೆಗಳಿಗೂ ಜನರು ನನ್ನ ಬಳಿ ಬಂದು ನಿಲ್ಲುವಂತಾಗಬಾರದು. ಕಚೇರಿ ಸಿಬ್ಬಂದಿಯನ್ನು ಹಿಡಿತದಲ್ಲಿಟ್ಟುಕೊಂಡು ಎಲ್ಲಾ ಇಲಾಖೆಗಳ ಅಧಿಕಾರಿಗಳು ಜನಸ್ನೇಹಿ ಆಡಳಿತ ನೀಡಬೇಕು ಎಂದು ಸೂಚಿಸಿದರು.
ಈ ವೇಳೆ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಡಾ.ಅಶೋಕ್, ತಾಪಂ ಇಒ ಬಿ.ಎಸ್.ಸತೀಶ್, ಪುರಸಭೆ ಮುಖ್ಯಾಧಿಕಾರಿ ವೀಣಾ, ಡಿವೈಎಸ್‌ಪಿ ಬಿ.ಚಲುವರಾಜು, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬಿ.ಪ್ರಶಾಂತ್ ಕುಮಾರ, ಎಸ್.ಸಂಪತ್ ಪಟೇಲ್, ಸಿಡಿಪಿಒ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.