ಮಾಗಡಿ: ತಾಲೂಕಿನಲ್ಲಿ ಕೆಲ ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಹಾನಿ ಕುರಿತು ಯಾವುದೇ ದೂರು ಬಂದರು ಕೂಡಲೇ ಸ್ಪಂದಿಸಿ ಮಳೆ ಹಾನಿ ಪ್ರದೇಶಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಿ ತ್ವರಿತಗತಿಯಲ್ಲಿ ಪರಿಹರಿಸಲು ಮುಂದಾಗಬೇಕು, ನಿರ್ಲಕ್ಷ್ಯ ತೋರಿದರೆ ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ತಹಸೀಲ್ದಾರ್ ಶರತ್ ಕುಮಾರ್‌ಗೆ ಶಾಸಕ ಎಚ್.ಸಿ.ಬಾಲಕೃಷ್ಣ ಸೂಚಿಸಿದರು.

ಮಾಗಡಿ: ತಾಲೂಕಿನಲ್ಲಿ ಕೆಲ ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಹಾನಿ ಕುರಿತು ಯಾವುದೇ ದೂರು ಬಂದರು ಕೂಡಲೇ ಸ್ಪಂದಿಸಿ ಮಳೆ ಹಾನಿ ಪ್ರದೇಶಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಿ ತ್ವರಿತಗತಿಯಲ್ಲಿ ಪರಿಹರಿಸಲು ಮುಂದಾಗಬೇಕು, ನಿರ್ಲಕ್ಷ್ಯ ತೋರಿದರೆ ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ತಹಸೀಲ್ದಾರ್ ಶರತ್ ಕುಮಾರ್‌ಗೆ ಶಾಸಕ ಎಚ್.ಸಿ.ಬಾಲಕೃಷ್ಣ ಸೂಚಿಸಿದರು.

ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಮಳೆ‌ ಹಾನಿಗೆ ಸಂಬಂಧಿಸಿದ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಮಳೆಗಾಲ ಮುಗಿಯುವವರೆಗೂ ತಹಸೀಲ್ದಾರ್ ಮತ್ತು ತಾಪಂ ಇಒ, ಪುರಸಭಾ ಮುಖ್ಯಾಧಿಕಾರಿ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು ಮಳೆಹಾನಿ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು.‌ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಸಭೆ‌ ನಡೆಸಿ ಅಗತ್ಯ ನಿರ್ದೇಶನಗಳನ್ನು ನೀಡಬೇಕು. ಪ್ರತಿದಿನ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿ ಮಳೆ ಹಾನಿ ತಪ್ಪಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.

3 ಕಂಟ್ರೋಲ್ ರೂಂ ತೆರೆಯಲು ಆದೇಶ:

ಪಟ್ಟಣದ ಪುರಸಭಾ, ತಾಲ್ಲೂಕು ಕಛೇರಿ, ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಮಳೆ ಹಾನಿ ಸಂಬಂಧಿಸಿದ ಕಂಟ್ರೋಲ್ ರೂಂ ತೊರೆಯುವಂತೆ ಶಾಸಕರು ಆದೇಶಿಸಿದರು.

ತಾಲೂಕಾದ್ಯಂತ ಮಳೆಹಾನಿ:

ಕ್ಷೇತ್ರದಲ್ಲಿ ಇಲ್ಲಿಯವರೆಗೆ ಮಳೆಯಿಂದ 22 ಚರಂಡಿ, 16 ಮನೆ, 8 ಸಣ್ಣ ಕಟ್ಟೆಗಳು, 34 ರಸ್ತೆಗಳು, 6 ಸೇತುವೆ, 7 ನಾಲೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ತಹಸೀಲ್ದಾರ್, ತಾಪಂ ಇಒ ಹಾನಿಯಾದ ಸ್ಥಳಕ್ಕೆ ತೆರಳಿ ಸರ್ಕಾರಕ್ಕೆ ನಿಖರವಾದ ವರದಿ‌ ಸಲ್ಲಿಸಬೇಕು. ನಂತರ ಅಂದಾಜು ಪಟ್ಟಿ ತಯಾರಿಸಿ ಸರ್ಕಾರದಿಂದ ಅನುದಾನ ತಂದು ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು.

ಪುರಸಭೆ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು‌‌ ಕೆಲಸ‌ ಮಾಡಬೇಕು.‌ ಮೊಬೈಲ್ ಫೋನ್‌ಗಳನ್ನು ಚಾಲ್ತಿಯಲ್ಲಿ ಇಟ್ಟುಕೊಂಡಿರಬೇಕು. ಸಾರ್ವಜನಿಕರಿಂದ‌ ಬರುವ ಎಲ್ಲ ಕರೆಗಳಿಗೆ ಸ್ಪಂದಿಸಬೇಕೆಂದು ಎಚ್ಚರಿಕೆ ನೀಡಿದರು.

ಮಳೆ ಹಾನಿ ಸಂಭವನೀಯ ಪ್ರದೇಶಗಳನ್ನು ಮೊದಲೇ ಗುರುತಿಸಬೇಕು. ಹಾನಿ ಪ್ರದೇಶಗಳಿಗೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮುಂದಿನ ದಿನಗಳಲ್ಲಿ ಹಾನಿ ಸಂಭವಿಸದಂತೆ ಎಚ್ಚರಿಕೆ‌ ವಹಿಸಬೇಕು. ತಂತಿ ಕಡಿತದಂತಹ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ ವಿದ್ಯುತ್ ಪೂರೈಕೆಗೆ ಅಡಚಣೆಯಾಗದಂತೆ ನೋಡಿಕೊಳ್ಳಬೇಕೆಂದು ಶಾಸಕ ಹೆಚ್.ಸಿ.ಬಾಲಕೃಷ್ಣ ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್ ಶರತ್ ಕುಮಾರ್, ತಾಪಂ ಇಒ ಜೈಪಾಲ್, ಪುರಸಭಾ ಮುಖ್ಯಾಧಿಕಾರಿ ಶಿವರುದ್ರಯ್ಯ, ಪುರಸಭಾಧ್ಯಕ್ಷೆ ರಮ್ಯಾ ನರಸಿಂಹಮೂರ್ತಿ, ಉಪಾಧ್ಯಕ್ಷ ರಿಯಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಪುರಸಭಾ ಸದಸ್ಯರು ಭಾಗವಹಿಸಿದ್ದರು.

(ಫೋಟೋ ಕ್ಯಾಪ್ಷನ್‌)

ಮಾಗಡಿ ಪುರಸಭೆ ಸಭಾಂಗಣದಲ್ಲಿ ಮಳೆ‌ ಹಾನಿಗೆ ಸಂಬಂಧಿಸಿದ ತುರ್ತು ಸಭೆ ಶಾಸಕ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆಯಿತು.