ಶಿರಹಟ್ಟಿ: ಜಾತಿ, ಧರ್ಮ, ಭಾಷೆಗಳನ್ನು ಮೀರಿ ಸುಖ, ಶಾಂತಿ ಹಾಗೂ ಸಮೃದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ನಾವೆಲ್ಲರೂ ಸಂಕಲ್ಪ ಮಾಡೋಣ ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವು ಹೇಳಿದರು.ಶನಿವಾರ ಪಟ್ಟಣದ ಎಸ್.ಎಂ. ಡಬಾಲಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ೮೦ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.

ರಾಷ್ಟ್ರದ ಸರ್ವತೋಮುಖ ಪ್ರಗತಿಗೆ ನಮ್ಮ ಯುವಶಕ್ತಿ, ವಿದ್ಯಾರ್ಥಿಗಳು ದೇಶಭಕ್ತಿ, ನಿಷ್ಠೆ, ಶಿಸ್ತು, ಪ್ರಜ್ಞೆ, ವಿಶ್ವಾಸ ಹಾಗೂ ಸ್ವಾವಲಂಬನೆಯಂತಹ ಗುಣಗಳನ್ನು ರೂಢಿಸಿಕೊಳ್ಳಬೇಕು. ಸಹಸ್ರ ವರ್ಷಗಳ ಗುಲಾಮಗಿರಿಯನ್ನು ಕೊಡವಿಕೊಂಡು ಲಕ್ಷಾಂತರ ಜೀವಗಳ ತ್ಯಾಗ ಬಲಿದಾನದಿಂದ ದೊರೆತ ಸ್ವಾತಂತ್ರ್ಯವನ್ನು ರಕ್ಷಿಸಿಕೊಂಡು ಅದನ್ನು ಬಲವರ್ಧನೆಗೊಳಿಸಲು ಪ್ರತಿಯೊಬ್ಬರೂ ಮುಂದಾಗುವಂತೆ ಕರೆ ನೀಡಿದರು.ಶಾಸಕ ಚಂದ್ರು ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಬಿ.ವಿ. ನ್ಯಾಮಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಸಿಮಿಕೇರಿ, ತಾಲೂಕು ಪಂಚಾಯಿತಿ ಕಾರ್ಯನಿವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ, ಪಪಂ ಮುಖ್ಯಾಧಿಕಾರಿ ಎನ್.ಎಂ. ಹಾದಿಮನಿ, ವಿ.ಎ. ಮುಳಗುಂದಮಠ, ಬಸವರಾಜ ಕಾತರಾಳ, ಸಂತೋಷ ಅಸ್ಕಿ, ಎಚ್‌.ಜೆ. ಬಾವಿಕಟ್ಟಿ, ವೀರಯ್ಯ ಮಠಪತಿ, ಗಿರಿಜಾ ಪೂಜಾರ ಇತರರು ಇದ್ದರು.ಸಂಗೊಳ್ಳಿ ರಾಯಣ್ಣ ದೇಶಪ್ರೇಮದ ಸಂಕೇತ

ನರಗುಂದ: ಬ್ರಿಟಿಷರ ವಿರುದ್ಧ ಹೋರಾಡಿದ ಸಂಗೊಳ್ಳಿ ರಾಯಣ್ಣ ಮಹಾನ್ ಸ್ವಾತಂತ್ರ‍್ಯ ಹೋರಾಟಗಾರ. ಸಂಗೊಳ್ಳಿ ರಾಯಣ್ಣನವರ ಹೆಸರು ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ. ಕಿತ್ತೂರು ರಾಣಿ ಚೆನ್ನಮ್ಮನ ನಿಷ್ಠಾವಂತ ಸೇನಾನಿಯಾಗಿ, ಸ್ವಾಭಿಮಾನ ಮತ್ತು ಸ್ವಾತಂತ್ರ‍್ಯಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ರಾಯಣ್ಣನ ಬದುಕು ದೇಶಭಕ್ತಿಯ ಅಧ್ಯಾಯವಾಗಿದೆ ಎಂದು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು.ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಹಮ್ಮಿಕೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಭಾವಚಿತ್ರಕ್ಕೆ ಪುಷ್ಟವೃಷ್ಟಿಯನ್ನು ಮಾಡಿ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲಿ ವೀರತ್ವ, ತ್ಯಾಗ, ಸ್ವಾಭಿಮಾನ ಮತ್ತು ದೇಶಪ್ರೇಮದ ಸಂಕೇತವಾಗಿ ಗುರುತಿಸಿಕೊಂಡಿರುವ ಹೆಸರು ಸಂಗೊಳ್ಳಿ ರಾಯಣ್ಣ. ಬ್ರಿಟಿಷ್ ಈಸ್ಟ್‌ ಇಂಡಿಯಾ ಕಂಪನಿಯ ಆಳ್ವಿಕೆಯ ವಿರುದ್ಧ ಹೋರಾಡಿದ ರಾಯಣ್ಣ, ಕಿತ್ತೂರು ಸಂಸ್ಥಾನದ ಸ್ವಾತಂತ್ರ‍್ಯವನ್ನು ಕಾಪಾಡಲು ಕೊನೆಯ ಉಸಿರಿನವರೆಗೂ ಹೋರಾಡಿದ್ದಾರೆಂದರು.ಶರಣಯ್ಯ ಕೊಣ್ಣೂರಮಠ ಮಾತನಾಡಿ, ಭಾರತ ಸ್ವಾತಂತ್ರ‍್ಯದ ಇತಿಹಾಸದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಹೋರಾಟ ಅತ್ಯಂತ ಮಹತ್ವದ ಅಧ್ಯಾಯ. ರಾಣಿ ಚೆನ್ನಮ್ಮ ಅವರನ್ನು ಬ್ರಿಟಿಷರು ಬಂಧಿಸಿದ ನಂತರವೂ ರಾಯಣ್ಣ ಶರಣಾಗಲಿಲ್ಲ. ಕಿತ್ತೂರಿನ ಸ್ವಾತಂತ್ರ‍್ಯವನ್ನು ಮರಳಿ ಪಡೆಯುವ ಸಂಕಲ್ಪದೊಂದಿಗೆ ಹೋರಾಟ ಮುಂದುವರಿಸಿ ಗ್ರಾಮೀಣ ಪ್ರದೇಶದ ಜನರನ್ನು ಸಂಘಟಿಸಿವುದರ ಜತೆಗೆ ಸಣ್ಣ ಸಣ್ಣ ಪಡೆಗಳನ್ನು ರಚಿಸಿ ಬ್ರಿಟಿಷರ ವಿರುದ್ಧ ಗೆರಿಲ್ಲಾ ಮಾದರಿಯ ಯುದ್ಧ ನಡೆಸಿದ ಹೋರಾಟ ಮಾಡಿದರು ಎಂದರು.

ಈ ಸಂದರ್ಭದಲ್ಲಿ ಶಿಕ್ಷಕ ಮಹಾಂತೇಶ ಹಿರೇಮಠ, ಭೀಮಪ್ಪ ಮನೇನಕೊಪ್ಪ, ಸುರೇಶ ಐನಾಪೂರ, ಶಿಕ್ಷಕ ಹರೀಶ ಪಾಟೀಲ ಇದ್ದರು.