ಸಾರಾಂಶ
ಕೊಪ್ಪಳ:
ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಮಹನೀಯರು ಪ್ರಾಣ ತ್ಯಾಗ ಮಾಡಿದ್ದು ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇಂದು ನಾವು ಸ್ವಾತಂತ್ರ್ಯ ಅನುಭವಿಸುತ್ತೇವೆ ಎಂದರೇ ಅದರ ಹಿಂದೆ ಹಲವರ ಪರಿಶ್ರಮವೇ ಕಾರಣವಾಗಿದೆ. ಜಾತಿ, ಧರ್ಮ, ಭೇದ-ಭಾವ ಮಾಡದೇ ಎಲ್ಲರೂ ಸಮಾನರಾಗಿ ಶಾಂತಿಯಿಂದ ಬಾಳಬೇಕು. ದೇಶಪ್ರೇಮ ಬೆಳೆಸಿಕೊಳ್ಳಲು ಪ್ರೇರಣೆಯಾದ ಈ ದಿನದಂದು ಸಮ ಸಮಾಜ ಕಟ್ಟಲು ಸಂಕಲ್ಪ ಮಾಡಬೇಕು ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಹೋರಾಟಗಾರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮುಂಡರಗಿ ಭೀಮರಾಯರು, ಹಮ್ಮಿಗೆ ಕೆಂಚನಗೌಡರು, ಇಟಗಿಯ ವೀರಭದ್ರಯ್ಯನವರು, ಶಿರೂರು ವೀರಭದ್ರಪ್ಪ, ಶಿವಮೂರ್ತಿಸ್ವಾಮಿ ಅಳವಂಡಿ, ಜನಾರ್ದನರಾಯ ದೇಸಾಯಿ, ಎಲ್.ಕೆ. ಷರೀಫ್, ಬಿಂದು ಮಾಧವರಾವ್, ಬಿ.ಕೆ. ಪ್ರಾಣೇಶಾಚಾರ್ಯರು, ಮುರಡಿ ಭೀಮಜ್ಜ ಸೇರಿದಂತೆ ಮೊದಲಾದವರನ್ನು ಸ್ಮರಿಸಬೇಕಿದೆ ಎಂದು ಹೇಳಿದರು.ದುರ್ಬಲರಿಗೆ ಗ್ಯಾರಂಟಿ ವರ:
ಪಂಚ ಗ್ಯಾರಂಟಿ ಯೋಜನೆಯಡಿ ಆರ್ಥಿಕ ದುರ್ಬಲರಿಗೆ ಸೌಲಭ್ಯ ಒದಗಿಸಲಾಗುತ್ತಿದೆ. ಮಹಿಳೆಯರು, ಪಡಿತರ ಚೀಟಿದಾರರು, ಯುವಕರು ಈ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆಗಳಿಂದ ಜನರ ಆರ್ಥಿಕ ಜೀವನ ಮಟ್ಟ ಸುಧಾರಣೆಯಾಗಿದೆ ಎಂದು ಸಚಿವರು ಹೇಳಿದರು.ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ೮.೩೭ ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು ₹ ೩೦೩.೪೫ ಕೋಟಿ, ಗೃಹ ಜ್ಯೋತಿ ಯೋಜನೆಯಡಿ ೨,೮೩,೯೮೮ ಗ್ರಾಹಕರ ಪೈಕಿ ೨,೭೬,೬೫೩ ಫಲಾನುಭವಿಗಳು ನೋಂದಾಯಿಸಿದ್ದು, ಶೇ. ೯೭.೪೨ರಷ್ಟು ಪ್ರಗತಿಯಾಗಿದೆ. ೩೭,೨೨೪ ಅಂತ್ಯೋದಯ, ೨,೯೧,೨೬೫ ಪಿಎಚ್‌ಎಚ್ ಪಡಿತರ ಚೀಟಿಗಳಿದ್ದು, ೧೨,೩೩,೯೯೮ ಸದಸ್ಯರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಂತೆ ಪ್ರತಿ ಸದಸ್ಯರಿಗೆ ೧೦ ಕೆಜಿ ಆಹಾರ ಧಾನ್ಯ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಕನಕಗಿರಿ ತಾಲೂಕಿನ ಸಿರಿವಾರದಲ್ಲಿ ೨೦೦ ಎಕರೆ ಪ್ರದೇಶದಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ನಿರ್ಮಾಣಕ್ಕೆ ವಿಸ್ಕೃತ ವರದಿ ಸಲ್ಲಿಸಿದ್ದು ಅನುಷ್ಠಾನವಾದರೆ ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕದ ರೈತರಿಗೆ ವರವಾಗಲಿದೆ ಎಂದರು.ಜಿಲ್ಲೆಯ ಇಟಗಿ, ಟಣಕನಕಲ್, ತಳುವಗೇರಾ ಹಾಗೂ ಕನಕಗಿರಿ ಸೇರಿ ಜಿಲ್ಲೆಯಲ್ಲಿ ಒಟ್ಟು ೪ ಸರ್ಕಾರಿ ಆದರ್ಶ ಪದವಿ ಪೂರ್ವ ಕಾಲೇಜುಗಳನ್ನು ೨೦೨೫-೨೬ನೇ ಸಾಲಿನಿಂದ ಪ್ರಾರಂಭಿಸಲಾಗಿದೆ. ೨೦೨೪-೨೫ನೇ ಸಾಲಿಗೆ ಕೆಕೆಆರ್‌ಡಿಬಿ ಅನುದಾನದಿಂದ ಕುಕನೂರು ತಾಲೂಕಿನ ರಾಜೂರು-ಆಡೂರು ಹಾಗೂ ಯಲಬುರ್ಗಾ ತಾಲೂಕಿನ ಮುಧೋಳ-ಕರಮುಡಿ ಸೇರಿ ಜಿಲ್ಲೆಯಲ್ಲಿ ೨ ಹೊಸ ಪದವಿ ಪೂರ್ವ ಕಾಲೇಜುಗಳು ಮಂಜೂರಾಗಿರುತ್ತವೆ ಎಂದು ಶಿವರಾಜ ತಂಗಡಗಿ ಹೇಳಿದರು.
ಪಥಸಂಚಲನ:ಧ್ವಜಾರೋಹಣದ ಬಳಿಕ ಆಕರ್ಷಕ ಪಥಸಂಚಲ, ಸ್ತಬ್ಧಚಿತ್ರ ಪ್ರದರ್ಶನ ನಡೆಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಸಿಎಂ ಪದಕ ಪುರೃಸ್ಕೃತರಿ, ಸಾಧಕರನ್ನು ಸನ್ಮಾನಿಸಲಾಯಿತು.
ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಎಸ್ಪಿ ಡಾ. ರಾಮ ಎಲ್. ಅರಸಿದ್ದಿ ಇದ್ದರು.