ಸಾರಾಂಶ
ತಾಲೂಕಿನ ಕಲ್ಲಪಲ್ಲಿ ಗ್ರಾಮದಿಂದ ಬಿಳ್ಳೂರು ರಸ್ತೆಯನ್ನು ಸುಮಾರು 1 ಕೋಟಿ ರು.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ತಾಲೂಕು ಕೇಂದ್ರಗಳಿಗೆ ಸಂರ್ಪಕ ಕಲ್ಪಿಸುವ ಕ್ಷೇತ್ರದ ಎಲ್ಲಾ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.ತಾಲೂಕಿನ ಅಗಟಮಡಗು ಗ್ರಾಮದಲ್ಲಿ 60 ಲಕ್ಷ ರು.ಗಳ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ರಸ್ತೆಗಳು ನಗರ, ಪಟ್ಟಣಗಳನ್ನು ಒಗ್ಗೂಡಿಸುವಲ್ಲಿ ಹಾಗೂ ಸರಕು- ಸಾಗಣಿಕೆ, ವಾಹನಗಳ ಸುಗಮ ಸಂಚಾರಕ್ಕೆ ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ ಕ್ಷೇತ್ರದ ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲೂಕು ಕೇಂದ್ರಗಳಿಗೆ ಸಂರ್ಪಕ ಕಲ್ಪಿಸುವ ಗ್ರಾಮೀಣ ಪ್ರದೇಶಗಳ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದರು.
ಈಗಾಗಲೇ ಕ್ಷೇತ್ರದ ಬಹುತೇಕ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಉಳಿದ ರಸ್ತೆಗಳ ಅಭಿವೃದ್ಧಿಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದ ಅವರು, ತಾಲೂಕಿನ ಕಲ್ಲಪಲ್ಲಿ ಗ್ರಾಮದಿಂದ ಬಿಳ್ಳೂರು ರಸ್ತೆಯನ್ನು ಸುಮಾರು 1 ಕೋಟಿ ರು.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲದೆ ಬಿಳ್ಳೂರು ಗ್ರಾಮದಿಂದ ಅಗಟಮಡಗು ಗ್ರಾಮದ ರಸ್ತೆ ಅಭಿವೃದ್ಧಿಗೆ 60 ಲಕ್ಷ ರು.ಗಳ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗಿದೆ. ಚೇಳೂರು ಮುಖ್ಯ ರಸ್ತೆಯಿಂದ ಬೈರೇಗೊಲ್ಲಪಲ್ಲಿ ಗ್ರಾಮಕ್ಕೆ 60 ಲಕ್ಷ ರು.ಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ನಡೆಯುತ್ತಿರುವುದಾಗಿ ತಿಳಿಸಿದರು.ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿ, ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಳಪೆ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ನನಗೆ ದೂರು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಸುಜ್ಞಾನಂಪಲ್ಲಿ ಗ್ರಾಮದಲ್ಲಿ ನೂತನ ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡವನ್ನು ಹಾಗೂ ಅಗಟಮಡಗು ಗ್ರಾಮದಲ್ಲಿ ನಿರ್ಮಿಸಲಾಗಿರುವ ನೂತನ ಶಾಲಾ ಕಟ್ಟಡವನ್ನು ಶಾಸಕರು ಉದ್ಘಾಟಿಸಿದರು.
ಮುಖಂಡರಾದ ಪಿ.ಮಂಜುನಾಥರೆಡ್ಡಿ, ಕೆ.ಸಿ.ಚಂದ್ರಶೇಖರರೆಡ್ಡಿ, ರಮೇಶ್ ಬಾಬು, ಶಂಕರರೆಡ್ಡಿ, ಕಲ್ಲಿಪಲ್ಲಿ ವೆಂಕಟೇಶ್, ಲಕ್ಷ್ಮೀಪತಿರೆಡ್ಡಿ, ಲಕ್ಷ್ಮೀನಾರಾಯಣರೆಡ್ಡಿ, ಗಂಗುಲಪ್ಪ, ಶ್ರೀನಿವಾಸ್, ವೇಣುಗೋಪಾಲ್, ರಾಮಚಂದ್ರ, ನಂಜಿರೆಡ್ಡಿ ಮತ್ತಿತರರು ಇದ್ದರು.