ಸಾರಾಂಶ
ಅಲೆಮಾರಿಗಳ ನೋವು ಸಮಸ್ಯೆ ಅಲಿಸಿದ ಅಲೆಮಾರಿ ನಿಗಮದ ಅಧ್ಯಕ್ಷೆ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿನಮಗ ನಿಲ್ಲಲು ನೆಲೆ ಇಲ್ಲ, ಜೋಪಡಿ ಕಟ್ಟಿಕೊಂಡು ಗೇಣು ಜಾಗದಲ್ಲಿ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಜೀವ್ನ ಮಾಡುತ್ತಿದ್ದೇವೆ. ಮನೆಯ ಯಜಮಾನ ತೀರಿಕೊಂಡು ಹೋದಾಗಿನಿಂದ ನಮಗ ಬಹಳ ಕಷ್ಟ ಬಂದೈತಿ, ನಮಗ್ಯಾರು ದಿಕ್ಕು ಇಲ್ರೀ ಎಂದು ಕಣ್ಣೀರಿಟ್ಟ ಅಲೆಮಾರಿ ಮಹಿಳೆಯನ್ನು, ನೋಡಿದ ಕ್ಷಣದಲ್ಲೇ ಅಲೆಮಾರಿ ನಿಗಮ ಅಧ್ಯಕ್ಷೆ ಜಿ.ಪಲ್ಲವಿ ಮಹಿಳೆಯನ್ನು ತಬ್ಬಿಕೊಂಡು ಕಣ್ಣೀರು ಒರೆಸಿದ ದೃಶ್ಯ ಮನ ಕಲಕುವಂತಿತ್ತು.
ಹೌದು, ಪಟ್ಟಣದ ಕಾಯಕ ನಗರದಲ್ಲಿ ತಾತ್ಕಾಲಿಕ ಟೆಂಟ್ ಹಾಕಿಕೊಂಡು ಜೀವನ ಮಾಡುತ್ತಿರುವ ವಿವಿಧ ಜಾತಿಗಳ ಅಲೆಮಾರಿ ಜನಾಂಗ ವಾಸವಾಗಿರುವ ಸ್ಥಳಕ್ಕೆ ಭೇಟಿ ನೀಡಿ ಅವರ ಅಹವಾಲು ಸ್ವೀಕರಿಸಿ ಮಾತನಾಡಿದ ಕರ್ನಾಟಕ ರಾಜ್ಯ ಪ.ಜಾ, ಪ.ಪಂ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ನಿಮ್ಮನ್ನ ನೋಡಿದರೇ ಯಾರೋ ಏನೋ ಹೇಳಲು ಬಂದಿದ್ದಾರೆ, ನಮಗೆ ಸೂರು ಕಲ್ಪಿಸುತ್ತಾರೆಂಬ ನಿರೀಕ್ಷೆಯಲ್ಲಿ ನಿಮ್ಮ ಮುಖದಲ್ಲಿದೆ. ಅದನ್ನು ನಾನು ಹುಸಿ ಮಾಡುವುದಿಲ್ಲ, ಶಾಶ್ವತವಾಗಿ ಅಲೆಮಾರಿಗಳು ನೆಲೆ ನಿಲ್ಲಲು ಸೂರು ಕಲ್ಪಿಸಲು ಬಂದಿದ್ದೇನೆ. ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗಿರುವ ಈ ಸಮಾಜಕ್ಕೆ ನ್ಯಾಯ ಒದಗಿಸಲು ಸರ್ಕಾರ ಮಟ್ಟದಲ್ಲಿ ವರದಿ ನೀಡಿ ನಿಮಗೆ ಅನುಕೂಲ ಮಾಡುತ್ತೇನೆಂದು ಹೇಳಿದರು.ಅಲೆಮಾರಿಗಳ ಸೂರು, ಜೀವನ ಕ್ರಮ ಹಾಗೂ ಅವರ ಸಮಸ್ಯೆ ಆಲಿಸಿದ ಅಧ್ಯಕ್ಷೆ, ನೀವು ಯಾವುದೇ ಕಾರಣಕ್ಕೂ ತಲೆ ತಗ್ಗಿಸಬಾರದು, ಸ್ವಾಭಿಮಾನದಿಂದ ಬದುಕುತ್ತಿದ್ದೀರಿ, ನಿಮ್ಮ ಮಕ್ಕಳಿಗೆ ಶಿಕ್ಷಣ, ನಿಮಗೆ ಶಾಶ್ವತ ಸೂರು ಸೇರಿದಂತೆ ನಿಮ್ಮ ಬದುಕಿನ ಬದಲಾವಣೆಗೆ ನಾನು ಇಲ್ಲಿಗೆ ಬಂದಿದ್ದೇನೆಂದು ಹೇಳಿದಾಗ, ಅಲೆಮಾರಿ ಮಹಿಳೆಯರು ಅಧ್ಯಕ್ಷರಿಗೆ ಕೈ ಮುಗಿದರು.
ನಿಗಮದ ಜಂಟಿ ನಿರ್ದೇಶಕ ಆನಂದ ಕುಮಾರ ಏಕಲವ್ಯ ಮಾತನಾಡಿ, ಕಾಯಕ ನಗರವನ್ನು ಅರೆಬರೆಯಾಗಿ ಅಭಿವೃದ್ಧಿ ಮಾಡಿ ಫಲಾನುಭವಿಗಳಿಗೆ ಹಂಚಿಕೆಯಾದ ಉದ್ದೇಶವೇ ಅರ್ಥವಾಗುತ್ತಿಲ್ಲ, ಈವರೆಗೂ ಪುರಸಭೆಗೂ ಹಸ್ತಾಂತರವಾಗಿಲ್ಲ, ಅಭಿವೃದ್ಧಿಯೂ ಇಲ್ಲ, ಇದು ಕೇವಲ ಅಧಿಕಾರಿಗಳ ಮಧ್ಯೆ ಪತ್ರ ವ್ಯವಹಾರ ಮಾಡಿದ್ದೀರಿ, ಸರ್ಕಾರ ಮಟ್ಟದಲ್ಲಿ ಕೈಗಾರಿಕೆ ಪ್ರದೇಶವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿ, ನಿವೇಶನ ರಹಿತ ಕುಟುಂಬಗಳಿಗೆ ಸರ್ಕಾರದ ನಿಯಮಾವಳಿಯಂತೆ ನಿವೇಶನ ಹಂಚಿಕೆಯಾಗಬೇಕಿದೆ. ಈಗ ಕೈಗಾರಿಕೆ ಇಲಾಖೆಯಿಂದ ₹90 ಲಕ್ಷ ಅನುದಾನ ಬಂದಿದೆ, ನಿಗಮದಿಂದ ಅಭಿವೃದ್ಧಿ ಮಾಡಲು ಅವಕಾಶವಿದೆ. ಆದರಿಂದ ಈ ಅಲೆಮಾರಿಗಳಿಗೆ ಶಾಶ್ವತ ಸೂರು ಕಲ್ಪಿಸಬೇಕಿದೆ. ಈ ಕುರಿತು ಜಿಲ್ಲಾಧಿಕಾರಿ ಬಳಿ ಚರ್ಚಿಸಲಾಗುವುದು ಎಂದು ಹೇಳಿದರು.ಭೂಮಿ ಅಲೆಮಾರಿಗಳ ಹಕ್ಕು ಇದರಿಂದ ತಾವು ವಂಚಿತರಾಗಬಾರದು, ಇಲ್ಲಿರುವ 17 ಎಕರೆ ಪ್ರದೇಶದಲ್ಲಿ ಈಗಾಗಲೇ ಕೆಲವರಿಗೆ ಹಕ್ಕುಪತ್ರ ನೀಡಲಾಗಿದೆ. ಉಳಿದ ಭೂಮಿಯಲ್ಲಿ ಅಧಿಕಾರಿಗಳು ಸರ್ವೇ ಮಾಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಇಮಾಮ್ ಸಾಹೇಬ್ ಮಾತನಾಡಿ, ಕಾಯಕ ನಗರದಲ್ಲಿ 2001ರಲ್ಲಿ 89 ಜನರಿಗೆ ಹಕ್ಕು ಪತ್ರ ನೀಡಿದ್ದಾರೆ. ಉಳಿದ ಜಾಗ ಇನ್ನು ಅಭಿವೃದ್ಧಿ ಮಾಡಿಲ್ಲ, ನಿಮಗೆ ಹಣ ನೀಡುತ್ತೇವೆ ನೀವೇ ಅಭಿವೃದ್ಧಿ ಮಾಡಿ ಎಂದು ಕೈಗಾರಿಕೆ ಇಲಾಖೆ ಪತ್ರ ಮುಖೇನ ತಿಳಿಸಿದೆ. ನಮಗೆ ಈವರೆಗೂ ನಿವೇಶನಗಳು ಹಸ್ತಾಂತರವಾಗಿಲ್ಲ ಹಾಗಾಗಿ ನಾವೇನು ಕ್ರಮ ಕೈಗೊಳ್ಳಲು ಬರುವುದಿಲ್ಲವೆಂದು ಹೇಳಿದರು.ನಮಗೆ ನಿಲ್ಲಲು ನೆಲೆ ಕೊಡಿ:ನಮಗೆ ಸೂರು ಕೂಡಿ ಅಕ್ಷರ ಜ್ಞಾನವೇ ಇಲ್ಲದೇ ಊರೂರು ಅಲೆದು ಬೀಕ್ಷೆ ಬೇಡಿ ಬಂದ ಆಹಾರದಲ್ಲಿ ಮನೆ ಮಂದಿ ಹಂಚಿಕೊಂಡು ತಿನ್ನುತ್ತೇವೆ. ಈ ಹಿಂದೆ ನಮಗೆ ಸ್ಮಶಾನ ಇಲ್ಲದ ಸಂದರ್ಭದಲ್ಲಿ ಹಳ್ಳದ ಕೆಸರಿನಲ್ಲಿ ಶವಗಳನ್ನು ಹೂತಿದ್ದೇವೆ, ನಮಗೆ ಸೂರು ನೀಡದಿದ್ದರೇ ಪೆಟ್ರೋಲ್ ಹಾಕಿಕೊಂಡು ಸುಟ್ಟುಕೊಂಡು ಸಾಯುತ್ತೇವೆ. ಅಷ್ಟೊಂದು ಹಿಂಸೆ ಅನುಭವಿಸುತ್ತಿದ್ದೇವೆ. ಯಾವ ಅಧಿಕಾರಿಗಳು ನಮ್ಮ ಸಮಸ್ಯೆ ಆಲಿಸಿಲ್ಲ, ಇಲಾಖೆಗೆ ಮನವಿ ಕೊಟ್ಟು ರೋಸಿ ಹೋಗಿದ್ದೇವೆ, ನಿಮ್ಮಿದಾದರೂ ನಮಗೆ ನಿಲ್ಲಲು ನೆಲೆ ಕೊಡಿ ಎಂದು ಸಿಂದೋಳಿ ಜನಾಂಗದ ಹನುಮಂತಪ್ಪ ತಮ್ಮ ನೋವು ಹೇಳಿಕೊಂಡರು.
ಇದೇ ಸಂದರ್ಭದಲ್ಲಿ ಪಪಂ, ಬುಡ್ಗಾ ಜಂಗಮ, ಮೇದಾರ, ಹಂದಿ ಜೋಗಿ, ಅಲೆಮಾರಿ ಸೇರಿದಂತೆ ಇತರರು ವಿವಿಧ ಬೇಡಿಕೆ ಈಡೇರಿಸುವಂತೆ ಅರ್ಜಿ ಸಲ್ಲಿಸಿದರು.ಈ ಸಂದರ್ಭ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಲ್ಲೇಶ ಆನಂದ ಕಾಳೆ, ತಹಸೀಲ್ದಾರ್ ಜಿ.ಸಂತೋಷಕುಮಾರ, ತಾಪಂ ಇಒ ಜಿ.ಪರಮೇಶ್ವರಪ್ಪ, ಪುರಸಭೆ ಅಧ್ಯಕ್ಷೆ ಗಂಟಿ ಜಮಾಲ್ ಬೀ, ಉಪಾಧ್ಯಕ್ಷ ಮಂಜುನಾಥ ಸೊಪ್ಪಿನ, ಸಮಾಜ ಕಲ್ಯಾಣಾಧಿಕಾರಿ ಆನಂದ್ ಡೊಳ್ಳಿನ್, ಬಿಇಒ ಮಹೇಶ ಪೂಜಾರ್, ಜೆಸ್ಕಾಂ ಎಇಇ ಕೇದಾರನಾಥ, ನಿಗಮದ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ ಸದಸ್ಯ ಕೆ.ಸಿ. ಪರಶುರಾಮ, ಪುರಸಭೆ ಸದಸ್ಯರು ಸೇರಿದಂತೆ ಇತರರಿದ್ದರು.