ಮತ್ತೊಮ್ಮೆ ಮೋದಿ ಪ್ರಧಾನಿಯಾಗಲು ಸಂಕಲ್ಪಿಸಿ: ದೇವೇಗೌಡ ಮನವಿ

| Published : Jan 26 2024, 01:51 AM IST

ಮತ್ತೊಮ್ಮೆ ಮೋದಿ ಪ್ರಧಾನಿಯಾಗಲು ಸಂಕಲ್ಪಿಸಿ: ದೇವೇಗೌಡ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಲೂರು ತಾಲೂಕಿನಿಂದ ಹೆಚ್ಚಿನ ಮತಗಳನ್ನು ಪ್ರಜ್ವಲ್ ರೇವಣ್ಣ ಅವರಿಗೆ ನೀಡುವ ಮೂಲಕ ಲೋಕಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿ ಮತ್ತೊಮ್ಮೆ ಈ ದೇಶದಲ್ಲಿ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲು ದೃಢ ಸಂಕಲ್ಪ ಮಾಡಿ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. ಆಲೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಜೆಡಿಎಸ್‌ ಕಾರ್ಯಕರ್ತರ, ಮುಖಂಡರ ಸಭೆ । ಪ್ರಜ್ವಲ್‌ ರೇವಣ್ಣರನ್ನು ಲೋಕಸಭೆಯಲ್ಲಿ ಆರಿಸಿಕನ್ನಡಪ್ರಭ ವಾರ್ತೆ ಆಲೂರು

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಲೂರು ತಾಲೂಕಿನಿಂದ ಹೆಚ್ಚಿನ ಮತಗಳನ್ನು ಪ್ರಜ್ವಲ್ ರೇವಣ್ಣ ಅವರಿಗೆ ನೀಡುವ ಮೂಲಕ ಲೋಕಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿ ಮತ್ತೊಮ್ಮೆ ಈ ದೇಶದಲ್ಲಿ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲು ದೃಢ ಸಂಕಲ್ಪ ಮಾಡಿ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ಪಟ್ಟಣದಲ್ಲಿ ಗುರುವಾರ ನಡೆದ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ದೇಶಕ್ಕೆ ಮೋದಿ ಅವರ ನಾಯಕತ್ವ ಅವಶ್ಯಕವಾಗಿದ್ದು ಎನ್.ಡಿ.ಎ ಮೈತ್ರಿಕೂಟದ ಮಿತ್ರ ಪಕ್ಷವಾಗಿರುವ ನಾವು ಅವರ ಕೈ ಬಲಪಡಿಸುವ ಅವಶ್ಯಕತೆ ಇದೆ’ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

‘ನಾನು ನನ್ನ ರಾಜಕೀಯ ಜೀವಿತಾವಧಿಯಲ್ಲಿ 15 ಚುನಾವಣೆಗಳನ್ನು ಎದುರಿಸಿದ್ದೇನೆ. ಅದರಲ್ಲಿ ಸೋಲು ಗೆಲುವು ಎರಡನ್ನೂ ಕಂಡಿದ್ದೇನೆ. ರಾಜಕಾರಣದಲ್ಲಿ ಅಭಿವೃದ್ಧಿ ಮತ್ತು ಕೆಲಸ ಮಾಡುವುದು ಮುಖ್ಯವಲ್ಲ. ಕೆಲಸದ ಜೊತೆಗೆ ಜನರ ವಿಶ್ವಾಸ ಗಳಿಸುವುದು ಮುಖ್ಯ, ಯಗಚಿ ಅಣೆಕಟ್ಟು ನಿರ್ಮಿಸಿ ಹಾಸನ ತಾಲೂಕಿನ 45 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿಯನ್ನು ಕಲ್ಪಿಸಿ ಕೊಟ್ಟೆ, ಅದೇ ರೀತಿ ಹಾಸನದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಕಟ್ಟಾಯ ಭಾಗದ ಜನರು ನಮ್ಮ ಹೋಬಳಿಗೆ ಕೈಗಾರಿಕೆಗಳನ್ನು ತಂದು ಯುವಕರ ನಿರುದ್ಯೋಗ ಹೋಗಲಾಡಿಸುವಂತೆ ಮನವಿ ಮಾಡಿದ್ದರು, ಕೆಲವೇ ತಿಂಗಳಗಳಲ್ಲಿ ಕಟ್ಟಾಯ ಹೋಬಳಿಗೆ ಕೈಗಾರಿಕಾ ಪ್ರದೇಶವನ್ನು ವಿಸ್ತರಿಸಿ ಕೈಗಾರಿಕೆಗಳನ್ನು ತರಸುವ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿ, ಈ ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಜಾರಿಗೆ ತಂದಿರುವ ಗ್ಯಾರಂಟಿಗಳನ್ನು ಸ್ಥಗಿತ ಮಾಡಲಿದೆ. ಯಾವುದೇ ಕಾರಣಕ್ಕೂ ಜನರು ಕಾಂಗ್ರೆಸ್ ಪಕ್ಷವನ್ನು ನಂಬಬಾರದು. ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದಾಗ ಇಡೀ ದೇಶ ಮತ್ತು ರಾಜ್ಯದಲ್ಲಿ ಪ್ರಥಮ ಬಾರಿಗೆ ಮುಸ್ಲಿಂ ಸಮುದಾಯದವರಿಗೆ 4% ಮೀಸಲಾತಿ ನೀಡಿದ ಧೀಮಂತ ನಾಯಕರಾಗಿದ್ದಾರೆ. ಅಲ್ಪಸಂಖ್ಯಾತರ ಉದ್ದಾರಕ್ಕಾಗಿ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

‘ದೇವೇಗೌಡರು ಪ್ರಧಾನಿಗಳಾಗಿದ್ದಾಗ ಆಲೂರು ಮತ್ತು ಅರಕಲಗೂಡು ಪಟ್ಟಣಕ್ಕೆ ಯಗಚಿ ಮತ್ತು ಹೇಮಾವತಿ ನದಿಗಳ ಮೂಲಕ ಕುಡಿಯುವ ನೀರಿನ ಶಾಶ್ವತ ಕಾಮಗಾರಿ ಮಾಡಿಸಿದರು. ಅದೇ ಸಂದರ್ಭದಲ್ಲಿ ಆಲೂರು-ಬೇಲೂರು-ಚಿಕ್ಕಮಗಳೂರು ರೈಲ್ವೆ ಯೋಜನೆಗೆ ಚಾಲನೆ ನೀಡಿದ್ದರು. ಇಂದು ಈ ಕಾಮಗಾರಿಗೆ ಭೂ ಸ್ವಾಧೀನ ಮತ್ತು ಪರಿಹಾರಕ್ಕೆ ಸರ್ವೆ ಕಾರ್ಯ ನಡೆಯುತ್ತಿದೆ. ಅದೇ ರೀತಿ 2006ರಲ್ಲಿ ನಾನು ಪಿಡಬ್ಲ್ಯುಡಿ ಮಂತ್ರಿಯಾಗಿದ್ದಾಗ ಹಾಸನದಿಂದ ಬಿಸಿ ರೋಡ್‌ವರೆಗೆ ಚತುಷ್ಪಥ ರಸ್ತೆ ಕಾಮಗಾರಿಗೆ ಹೆದ್ದಾರಿ ಸಚಿವ ಬಾಲು ಅವರಿಂದ ಅನುಮೋದನೆ ಮಾಡಿಸಿ ಇಂದು ಈ ಕಾಮಗಾರಿ ಮುಗಿಯುವ ಅಂತ ತಲುಪಿದೆ. ಈ ಜಿಲ್ಲೆಗೆ ನಮ್ಮ ಜೆಡಿಎಸ್ ಪಕ್ಷದ ಕೊಡುಗೆ ಬಿಟ್ಟರೆ ಕಾಂಗ್ರೆಸ್ ಕೊಡುಗೆ ಏನು ಎಂಬುದನ್ನು ಸಾಬೀತುಪಡಿಸಲು ಕಾಂಗ್ರೆಸ್ ನಾಯಕರು ಬಹಿರಂಗ ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿದರು.

‘ನಮ್ಮ ಪಕ್ಷದಿಂದ ಸಂಸದರಾಗಿ ಆಯ್ಕೆಯಾದ ದೇವೇಗೌಡರು ಮತ್ತು ಪ್ರಜ್ವಲ್ ರೇವಣ್ಣ ಇವರ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಾಗಿ ಸುಮಾರು 10 ಸಾವಿರ ಕೋಟಿ ರು.ಗೂ ಹೆಚ್ಚು ಅನುದಾನ ತರಲಾಗಿದ್ದು ಸುಗಮ ಸಂಚಾರಕ್ಕಾಗಿ ಕದಬಹಳ್ಳಿಯಿಂದ ಹಾಸನದ ಕಂದಲಿವರೆಗೆ 24 ಮೇಲ್ಸೇತುವೆಗಳನ್ನು 750 ಕೋಟಿ ರು. ಅಂದಾಜಿನಲ್ಲಿ ಮಾಡಲಾಗಿದ್ದು ಪುನಃ 14 ಅನ್ನು 380 ಕೋಟಿ ರು. ವೆಚ್ಚದಲ್ಲಿ ಆಲೂರು ಕೂಡಿಗೆ ಮತ್ತು ಈಶ್ವರಹಳ್ಳಿ ಕೂಡಿಗೆ ಸೇರಿದಂತೆ ಸಕಲೇಶಪುರದವರೆಗೆ ಮಂಜೂರು ಮಾಡಿಸಲಾಗಿದೆ ಎಂದರು.

‘ಈ ದೇಶ ಉಳಿಯಬೇಕಾದರೆ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಗಳಾಗಬೇಕು. ಆದುದರಿಂದ ನಾವು ಈ ಜಿಲ್ಲೆಯಿಂದ ಸಂಸದರನ್ನು ಗೆಲ್ಲಿಸಿ ಅವರ ಕೈ ಬಲಪಡಿಸಬೇಕಾಗಿದೆ’ ಎಂದು ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಮನವಿ ಮಾಡಿದರು.

ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಎಚ್.ಕೆ ಕುಮಾರಸ್ವಾಮಿ, ಮುಖಂಡರಾದ ಕೆ.ಎಸ್ ಮಂಜೇಗೌಡ, ಬಿ.ಸಿ ಶಂಕರಚಾರ್, ಅಜ್ಜೇಗೌಡ, ರಾಜಪ್ಪ ಗೌಡ, ನಟರಾಜು ನಾಕಲಗೂಡು, ಶಿವಣ್ಣ ಸುಳಗೋಡು, ಪಿ.ಎಲ್ ನಿಂಗರಾಜು, ಸಿ.ವಿ ಲಿಂಗರಾಜು, ತೋಪಿಕ್, ವಿಜಯಕಾಂತ್, ಬಸವರಾಜು ಗೇಕರವಳ್ಳಿ, ಪಾಪು ಇದ್ದರು.ಆಲೂರು ಪಟ್ಟಣದಲ್ಲಿ ಗುರುವಾರ ನಡೆದ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರ ಸಭೆಯನ್ನು ಉದ್ದೇಶಿಸಿ ಎಚ್‌.ಡಿ.ದೇವೇಗೌಡ ಮಾತನಾಡಿದರು.