ರೆಸ್ಪಿ ಸೌತೆ ಬೆಳೆದು ಲಕ್ಷಾಧೀಶ್ವರನಾದ ರೈತ

| Published : May 18 2024, 12:43 AM IST / Updated: May 18 2024, 01:11 PM IST

ಸಾರಾಂಶ

ತೋಟಗಾರಿಕೆ ಇಲಾಖೆ ನೀಡಿದ ಸಲಹೆ ಸೂಚನೆಗಳನ್ನು ಅನುಸರಿಸಿ ಗಂಗರಾಜು ಸೌತೆಕಾಯಿ ಬೆಳೆದಿದ್ದಾರೆ. ಯಾವ ರೋಗವೂ ಬರದಂತೆ ಕಾಪಾಡಿಕೊಂಡು ದುಪ್ಪಟ್ಟು ಇಳುವರಿ ಪಡೆದಿದ್ದಾರೆ

  ಚಿಕ್ಕಬಳ್ಳಾಪುರ :  ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಹಾಗೂ ಜೀವನದಿಗಳಿಲ್ಲದಿರುವುದರಿಂದ ಕೊಳವೆಬಾವಿಗಳನ್ನೇ ನಂಬಿ ಬದುಕು ಸವೆಸುತ್ತಿರುವ ರೈತರು, ತರಹೇವಾರಿ ತರಕಾರಿ, ಹಣ್ಣು- ಹಂಪಲು, ಹೂವು ಬೆಳೆದು ಯಶಸ್ವಿಯಾಗುತ್ತಿದ್ದಾರೆ. ಅಂತಹ ಯಶಸ್ವಿ ರೈತರ ಸಾಲಿಗೆ ಈಗ ಮತ್ತೊಬ್ಬ ರೈತ ಸೇರ್ಪಡೆಯಾಗಿದ್ದಾನೆ.

ಹೌದು, ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಮಂಚನಬಲೆ ಗ್ರಾಮದ ಗಂಗರಾಜ್ ರವರು ವಕೀಲಿ ವೃತ್ತಿ ಮಾಡುತ್ತಿದ್ದರೂ ಮೂಲತಃ ರೈತ ಕುಟುಂಬದಲ್ಲಿ ಬೆಳೆದವರು. ಪ್ರಗತಿಪರ ರೈತರಾಗಿರುವ ಗಂಗರಾಜ್, ರೆಸ್ಪಿ ಸೌತೆಕಾಯಿ ತಳಿಯ ಬೆಳೆ ಬೆಳೆದು ದಾಖಲೆ ಸೃಷ್ಟಿಸಿದ್ದಾರೆ. ಬಿರು ಬೇಸಿಗೆಯಲ್ಲೂ ಸಾಂಧ್ರತೆ ಕಡಿಮೆ ಮಾಡಿ ಬೆಳೆದ ಸೌತೆಕಾಯಿಯಿಂದ ಎಕರೆಗೆ ಎರಡು ದಿನಕ್ಕೊಮ್ಮೆ ಇಪ್ಪತ್ತು ಕ್ವಿಂಟಲ್ ಬೆಳೆದು ಅತ್ಯುತ್ತಮ ಬೆಲೆಗೆ ಮಾರಾಟ ಮಾಡುತಿದ್ದಾರೆ.

ಮನೆ ಮಂದಿಗೆಲ್ಲ ಕೆಲಸ

ಎರಡು ದಿನಕ್ಕೊಮ್ಮೆ ಇಪ್ಪತ್ತು ಕ್ವಿಂಟಲ್ ಸೌತೆಕಾಯಿ ಮಾರುಕಟ್ಟೆಗೆ ಸಾಗಿಸುತ್ತಿದ್ದೇವೆ. ಮನೆ ಮಂದಿಗೆಲ್ಲಾ ಕೆಲಸ ಸಿಕ್ಕಿದೆ. ವಕೀಲಿ ವೃತ್ತಿ ಜತೆಗೆ ಕೃಷಿ ವೃತ್ತಿ ನನಗೆ ಖುಷಿ ತಂದುಕೊಟ್ಟಿದೆ. ಭೂಮಿಯನ್ನು ನಾವು ನಂಬಿದರೆ ಭೂಮಿತಾಯಿ ನಮ್ಮ ಕೈ ಬಿಡುವುದಿಲ್ಲ ಎಂಬುದಕ್ಕೆ ನಾನೇ ಸಾಕ್ಷಿ ಎನ್ನುತ್ತಾರೆ ಗಂಗರಾಜ್‌.

ಸೌತೆ ಇಳುವರಿ ಡಬಲ್‌

ಗಂಗರಾಜು ತೋಟಕ್ಕೆ ಭೇಟಿ ನೀಡಿದ್ದ ತೋಟಗಾರಿಕೆ ಇಲಾಖೆಯ ಎಒ ಲಕ್ಷ್ಮೀಪತಿ ಮಾತನಾಡಿ, ಇಲಾಖೆಯಿಂದ ಎಷ್ಟೋ ರೈತರಿಗೆ ಸೌತೆಕಾಯಿ ಬೆಳೆಯ ಬಗ್ಗೆ ಸಲಹೆಗಳನ್ನು ಕೊಡುತ್ತೇವೆ. ಗಂಗರಾಜು ಕೂಡ ನಾವು ಶಿಫಾರಸ್ಸು ಮಾಡಿದ ಸೌತೆಯನ್ನೇ ಬೆಳೆದು,ಯಾವ ರೋಗವೂ ಬರದಂತೆ ಕಾಪಾಡಿಕೊಂಡು, ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಡಬಲ್ ಇಳುವರಿ ತೆಗೆದು ಸೈ ಎನಿಸಿಕೊಂಡಿದ್ದಾರೆ. ಇದೇ ತೋಟದಲ್ಲಿ ಸೌತೆಬೆಳೆಯ ಕ್ಷೇತ್ರೋತ್ಸವ ಮಾಡಿ ಇವರ ಸೌತೆಕಾಯಿ ಬೆಳೆ ಇತರೆ ರೈತರಿಗೆ ಮಾದರಿಯಾಗಲಿ ಎಂದು ತೋರಿಸಿದ್ದೇವೆ. ಗಂಗರಾಜುರವರ ಕೃಷಿ ಕೆಲಸಕ್ಕೆ ಶುಭ ಕೋರುತ್ತೇವೆ ಎಂದು ಹೇಳಿದರು.