ದುಶ್ಚಟಗಳಿಂದ ವ್ಯಕ್ತಿಯ ಆರೋಗ್ಯ ಮತ್ತು ಕುಟುಂಬದ ನೆಮ್ಮದಿ ಹಾಳಾಗುತ್ತದೆ. ಕುಡಿತ ಅಥವಾ ದುಶ್ಚಟಗಳನ್ನು ಬಿಡುವ ದೃಢ ಸಂಕಲ್ಪ ನಮ್ಮ ಮನಸ್ಸಿನಲ್ಲೇ ಮೂಡಬೇಕು.
ಕನ್ನಡಪ್ರಭ ವಾರ್ತೆ ಮುಂಡರಗಿ
ದುಶ್ಚಟಗಳಿಂದ ವ್ಯಕ್ತಿಯ ಆರೋಗ್ಯ ಮತ್ತು ಕುಟುಂಬದ ನೆಮ್ಮದಿ ಹಾಳಾಗುತ್ತದೆ. ಕುಡಿತ ಅಥವಾ ದುಶ್ಚಟಗಳನ್ನು ಬಿಡುವ ದೃಢ ಸಂಕಲ್ಪ ನಮ್ಮ ಮನಸ್ಸಿನಲ್ಲೇ ಮೂಡಬೇಕು. ವ್ಯಸನಮುಕ್ತರಾಗಿ ಬದುಕಿದಾಗ ಮಾತ್ರ ಕುಟುಂಬದಲ್ಲಿ ಪ್ರೀತಿ ಮತ್ತು ಸಮಾಜದಲ್ಲಿ ಗೌರವ ಸಿಗಲು ಸಾಧ್ಯ ಎಂದು ಶಿಕ್ಷಕ ಸಾಹಿತಿ ಡಾ. ನಿಂಗು ಸೊಲಗಿ ಕಿವಿಮಾತು ಹೇಳಿದರು.ಸೋಮವಾರ ಪಟ್ಟಣದ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜರುಗುತ್ತಿರುವ ಮದ್ಯವರ್ಜನ ಶಿಬಿರದ ಗುಂಪು ಸಲಹೆ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ನಾವು ಜೀವಿಸಲು ಆಹಾರ ಮತ್ತು ನೀರು ಎಷ್ಟು ಅಗತ್ಯವೋ, ಅದೇ ರೀತಿ ದೇಹದ ಅಂಗಾಂಗಗಳನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಅಷ್ಟೇ ಮುಖ್ಯ. ನಿರಂತರವಾಗಿ ದೇಹಕ್ಕೆ ಕೆಟ್ಟ ಪದಾರ್ಥಗಳನ್ನು ಹಾಕುವುದರಿಂದ ಕರುಳು ಹಾಗೂ ಯಕೃತ್ತು (ಲಿವರ್) ಹಾಳಾಗಿ, ಕಾಮಾಲೆಯಂತಹ ರೋಗಗಳಿಗೆ ತುತ್ತಾಗಿ ಸಣ್ಣ ವಯಸ್ಸಿನಲ್ಲೇ ಜೀವ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ದೇಹಕ್ಕೆ ದ್ರೋಹ ಬಗೆಯದೆ, ಆರೋಗ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಯಾವುದೇ ಚಟವನ್ನು ಬಿಡಬೇಕು ಎಂಬ ನಿರ್ಧಾರ ನಮ್ಮ ಮನಸ್ಸಿನಿಂದಲೇ ಬರಬೇಕು ಎಂದರು.ಕೇವಲ ದುಡಿದು ಹಣ ನೀಡುವುದಷ್ಟೇ ಪ್ರೀತಿಯಲ್ಲ. ದುಡಿಮೆಯ ಒಂದು ಪಾಲನ್ನು ಮಕ್ಕಳ ಶಿಕ್ಷಣ ಮತ್ತು ಕುಟುಂಬದ ಭವಿಷ್ಯಕ್ಕಾಗಿ ಉಳಿತಾಯ ಮಾಡಬೇಕು. ಮನೆಯಲ್ಲಿ ತಂದೆ-ತಾಯಿಯೇ ಮೊದಲ ಗುರುಗಳು. ಹಿರಿಯರಾದ ನಾವು ಸನ್ಮಾರ್ಗದಲ್ಲಿದ್ದಾಗ ಮಾತ್ರ ಮಕ್ಕಳು ನಮ್ಮನ್ನು ನೋಡಿ ಉತ್ತಮ ವ್ಯಕ್ತಿಗಳಾಗಿ ಬೆಳೆಯುತ್ತಾರೆ. ಕೌಟುಂಬಿಕ ಕಿರಿಕಿರಿ ಅಥವಾ ಒತ್ತಡಗಳು ಬಂದಾಗ ವ್ಯಸನಗಳಿಗೆ ಮೊರೆಹೋಗುವ ಬದಲು, ಶಾಂತಚಿತ್ತರಾಗಿ ಧ್ಯಾನ ಮಾಡುವುದು ಅಥವಾ ದೇವಸ್ಥಾನಕ್ಕೆ ತೆರಳಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.ಬಿ.ಆರ್.ಪಿ. ಹನುಮರೆಡ್ಡಿ ಇಟಗಿ ಮಾತನಾಡಿ, ಮಾನವ ಜನ್ಮ ಅತ್ಯಂತ ಶ್ರೇಷ್ಠವಾದುದು. 84 ಲಕ್ಷ ಜೀವ ಸಂಕುಲಗಳನ್ನು ದಾಟಿ ಬಂದ ಈ ಶರೀರವನ್ನು ಮದ್ಯ ಹಾಗೂ ಮಾದಕ ದ್ರವ್ಯಗಳಂತಹ ದುಶ್ಚಟಗಳಿಗೆ ಬಲಿ ನೀಡಿ ವ್ಯರ್ಥ ಮಾಡಿಕೊಳ್ಳಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ನೈತಿಕತೆ ಮತ್ತು ಕುಟುಂಬದ ಮೌಲ್ಯಗಳನ್ನು ಉಳಿಸಿಕೊಂಡು ಸತ್ಪ್ರಜೆಯಾಗಿ ಬದುಕಬೇಕು. ವ್ಯಸನಗಳಿಗೆ ದಾಸರಾಗುವುದರಿಂದ ಕೇವಲ ವ್ಯಕ್ತಿಯೊಬ್ಬನಲ್ಲದೆ ಇಡೀ ಕುಟುಂಬವೇ ಸಮಾಜದಲ್ಲಿ ತಲೆತಗ್ಗಿಸುವಂತಾಗುತ್ತದೆ. ಹೆಂಡತಿ-ಮಕ್ಕಳ ಭವಿಷ್ಯ, ಅವರ ಗೌರವ ಹಾಗೂ ವಿದ್ಯಾಭ್ಯಾಸದ ಕಡೆಗೆ ಪ್ರತಿಯೊಬ್ಬ ಪಾಲಕರೂ ಗಮನಹರಿಸಬೇಕು ಎಂದರು.
ವೈನ್ (ಮದ್ಯ) ಬಿಟ್ಟು ಡಿವೈನ್ (ಆಧ್ಯಾತ್ಮಿಕ ಚಿಂತನೆ) ಮಾರ್ಗವನ್ನು ಅಪ್ಪಿಕೊಳ್ಳಬೇಕು. ಜೀವನದಲ್ಲಿ ಎದುರಾಗುವ ಸಂಕಷ್ಟ, ಸಾಲದ ಬಾಧೆಗಳಿಗೆ ಆತ್ಮಹತ್ಯೆಯಾಗಲಿ ಅಥವಾ ಮದ್ಯಪಾನವಾಗಲಿ ಪರಿಹಾರವಲ್ಲ. ದೈಹಿಕ ಅಂಗವೈಕಲ್ಯವಿದ್ದರೂ ಬದುಕುವ ಅದಮ್ಯ ಛಲ ತೋರುವ ಅನೇಕರು ನಮ್ಮ ನಡುವೆಯೇ ಇದ್ದಾರೆ. ಪ್ರತಿಯೊಬ್ಬರೂ ಖಾಲಿ ಕೂರದೆ ನಿರಂತರ ಪರಿಶ್ರಮ, ಸ್ವಾವಲಂಬಿ ಕೆಲಸಗಳಲ್ಲಿ ತೊಡಗಿಸಿಕೊಂಡು, ಗಟ್ಟಿಯಾದ ಮನೋಬಲದೊಂದಿಗೆ ಸಮಾಜದಲ್ಲಿ ಗೌರವಯುತ ಹೊಸ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.ಪ್ರಮುಖರಾದ ನಾಗೇಶ ಹುಬ್ಬಳ್ಳಿ, ಶಿಬಿರದ ವ್ಯವಸ್ಥಾಪಕ ವಿ.ಜೆ. ಹಿರೇಮಠ, ಜನಜಾಗೃತಿ ವೇದಿಕೆ ಜಿಲ್ಲಾ ಕೋಶಾಧ್ಯಕ್ಷ ಎ.ಕೆ. ಮುಲ್ಲಾನವರ, ಪತ್ರಕರ್ತ ಶರಣು ಸೊಲಗಿ, ಕುಮಾರ್, ರಾಜಪ್ಪ ಸೇರಿದಂತೆ ಹಲವು ಗಣ್ಯರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.