ಜಾತಿಯಿಂದ ತುಂಬಿರುವ ಈ ಸಮಾಜದಲ್ಲಿ ನನ್ನನ್ನು ಗೆಲ್ಲಿಸಿರುವುದು ಹೃದಯ ತುಂಬಿರುವ ಭಾಷೆ. ನನ್ನ ಭಾಷೆ ನನ್ನ ವ್ಯಕ್ತಿತ್ವದ ಪ್ರತಿಬಿಂಬ. ಅದು ಜನರ ಮನಸ್ಸಿನಲ್ಲಿ ನನಗೆ ಜಾಗ ಕೊಡಿಸಿದೆ. ಇಷ್ಟು ಪರಿಣಾಮಕಾರಿಯಾದ ಭಾಷೆಗೆ ಇರುವ ಗೌರವವನ್ನು ಉಳಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಬೇರೆ ಪ್ರಾಣಿಗಳಿಗೆ ಇಲ್ಲದ ಸಂವಹನ ಮಾಧ್ಯಮವಾದ ಭಾಷೆಯ ಗೌರವವನ್ನು ನಾವು ಕಳೆದಿದ್ದೇವೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್‌. ರಮೇಶ್‌ ಕುಮಾರ್‌ ವಿಷಾದಿಸಿದರು.

ಅನಿಕೇತನ ಸೇವಾ ಟ್ರಸ್ಟ್‌, ವಿಸ್ಮಯ ಬುಕ್‌ ಹೌಸ್‌ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಎಂ.ಕೃಷ್ಣೇಗೌಡರ ಹೊಳೆಯ ಮರಳು, ಹೊಂಗೆಯ ನೆರಳು, ಯಾಲಕ್ಕಿಗೊನೆ, ಅವರೆಯ ಸೊನೆ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಾತಿಯಿಂದ ತುಂಬಿರುವ ಈ ಸಮಾಜದಲ್ಲಿ ನನ್ನನ್ನು ಗೆಲ್ಲಿಸಿರುವುದು ಹೃದಯ ತುಂಬಿರುವ ಭಾಷೆ. ನನ್ನ ಭಾಷೆ ನನ್ನ ವ್ಯಕ್ತಿತ್ವದ ಪ್ರತಿಬಿಂಬ. ಅದು ಜನರ ಮನಸ್ಸಿನಲ್ಲಿ ನನಗೆ ಜಾಗ ಕೊಡಿಸಿದೆ. ಇಷ್ಟು ಪರಿಣಾಮಕಾರಿಯಾದ ಭಾಷೆಗೆ ಇರುವ ಗೌರವವನ್ನು ಉಳಿಸಿಕೊಳ್ಳಬೇಕು ಎಂದರು.

ನಮ್ಮಲ್ಲಿ ಜಾತಿವಾದ ಬೇರೂರಿದೆ. ಎಲ್ಲರೂ ಆಯಾ ಸಮುದಾಯದವರನ್ನು ಗೆಲ್ಲಿಸುತ್ತಾರೆ ಎಂಬ ಭಾವನೆ ಇದೆ. ಆದರೆ ಈ ರೀತಿಯ ಮನೋಭಾವವಿದ್ದರೆ ನಾನು ಆರು ಬಾರಿ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಬೇರೆ ಪ್ರಾಣಿಗಳಿಗೆ ಭಾಷೆ ಇಲ್ಲ. ಆದರೆ ಮನುಷ್ಯರಿಗೆ ಸಂವಹನ ಮಾಧ್ಯವಾಗಿ ಭಾಷೆಯನ್ನು ಸಿದ್ದಿಸಿಕೊಂಡಿದ್ದೇವೆ. ಆದರೆ ಅದನ್ನು ಸದ್ಬಳಕೆ ಮಾಡಿಕೊಳ್ಳದೇ ಅದರ ಗೌರವ ಕಳೆಯುತ್ತಿದ್ದೇವೆ ಎಂದು ಅವರು ಹೇಳಿದರು.

ಭಾಷೆಯು ತನ್ನ ಗಾಂಭೀರ್ಯ, ಗೌರವ, ಮಹತ್ವವನ್ನು ಕಳೆದುಕೊಳ್ಳಿತ್ತಿರುವ ಇಂದಿನ ಸಂದರ್ಭದಲ್ಲಿ ನಾವೆಲ್ಲರೂ ನಮ್ಮೊಳಗಿನ ಮನಸ್ಸಿಗೂ ಒಂದು ಭಾಷೆ ಇದೆ ಎಂಬುದನ್ನು ಮನಗಾಣಬೇಕು. ಅಲ್ಲದೇ ಆ ಮನಸ್ಸಿನ ಮೂಕ ಭಾಷೆಯನ್ನು ಕೇಳಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮಕ್ಕೆ ಬರುವಾಗ ಹೋಟೆಲ್‌ ವೊಂದರಲ್ಲಿ ಚಹಾ ಕುಡುಯುವಾಗ ಮಹಿಳೆಯೊಬ್ಬರು ನನ್ನನ್ನು ಕಂಡು ಭಾವುಕರಾದರು. ಏಕೆ ಎಂದು ಕೇಳಿದಾಗ ಆಕೆ ನೀವು ಕೋಪದಿಂದ ಇರಬಾರದು. ಕೋಪಿಷ್ಟರ ಮನೆ ನರಕವಾಗುತ್ತದೆ ಎಂದು ಹೇಳಿದ್ದನ್ನು ನೆನಪಿಸಿಕೊಂಡರು. ಆಗ ನಾನೂ ಕೂಡ ಕೋಪಿಷ್ಟನೇ ಎಂಬುದು ನೆನಪಾಯಿತು. ಅದ್ದರಿಂದ ಸತ್ತ ನನ್ನ ಹೆಂಡತಿ ಎಷ್ಟು ಅನುಭವಿಸಿರಬೇಕೆಂದು ಭಾವುಕನಾದೆ. ಆದರೆ ನನ್ನೊಳಗಿನ ಪ್ರಜ್ಞೆ ಮಾತನಾಡಿತು. ವ್ಯಕ್ತಿಗೆ ಸಿಟ್ಟು ಇರಬಾರದು ನಿಜ. ಆದರೆ ಸಮಾಜದಲ್ಲಿನ ತಪ್ಪುಗಳ ವಿರುದ್ಧ ಸಾರ್ವಜನಿಕ ಸಿಟ್ಟಿನ ಅಭಾವ ಇದೆ ಎಂಬುದನ್ನು ಸಾರಿ ಹೇಳಿತು. ಅಲ್ಲದೇ ಸಾರ್ವಜನಿಕ ಲಜ್ಜೆಯ ಅಭಾವವೂ ಕಾಡುತ್ತಿದೆ ಎಂಬುದನ್ನು ತಿಳಿಸಿತು ಎಂದರು.

ಹೊಳೆಯ ಮರಳು, ಹೊಂಗೆ ನೆರಳು, ಅವರೆ ಸೊನೆ, ಏಲಕ್ಕಿ ಗೊನೆ ಕೃತಿಗಳು ನಮ್ಮೂರಿನ ಜೊತೆಗಿನ ನಂಟನ್ನು ತಿಳಿಸುತ್ತವೆ. ಅವರು ಆ ಗ್ರಾಮ್ಯ ಸೊಗಡಿನೊಂದಿಗೆ ಕಡೆವರೆಗೂ ಇರಬೇಕು. ಅದೇ ಅವರಿಗೆ ಗೌರವ ಎಂದರು.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ನೀಲಗಿರಿ ತಳವಾರ ಅವರು ಕೃತಿಗಳ ಕುರಿತು ಮಾತನಾಡಿದರು. ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಸಾಹಿತಿ ಪ್ರೊ. ಕೆ.ಸಿ. ಶಿವಪ್ಪ ಅವರು ಕೃಷ್ಣೇಗೌಡರ ವ್ಯಕ್ತಿತ್ವದ ಕುರಿತು ಮಾತನಾಡಿದರು.

ಸಾಧಕರಿಗೆ ಸನ್ಮಾನ:

ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ ಖಾನ್‌, ಮುಡಾ ಮಾಜಿ ಅಧ್ಯಕ್ಷ ಎಚ್‌.ವಿ. ರಾಜೀವ್‌, ಕಲಾವಿದ ಪ್ರಕಾಶ್‌ ಚಿಕ್ಕಪಾಳ್ಯ, ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ಕೆ.ವಿ. ಶ್ರೀಧರ್‌, ಮೈಸೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಬಿ.ಆರ್‌. ಶಿವಕುಮಾರ್‌, ಶ್ರೀ ಕಾಲಭೈರವೇಶ್ವರ ಕನ್‌ಷ್ಟ್ರಕ್ಷನ್‌ ಸ ಮಾಲೀಕ ಕಡಕೊಳ ಕುಮಾರ್‌, ವಿದ್ಯುತ್‌ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ರಮೇಶ್‌, ಲೇಖಕ ಕೃ.ಪಾ. ಗಣೇಶ್‌, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ವೈ.ಎನ್‌. ಶಂಕರೇಗೌಡ ಅವರನ್ನು ಅಭಿನಂದಿಸಲಾಯಿತು.

ಸಾಹಿತಿ, ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌, ಅನಿಕೇತನ ಸೇವಾ ಟ್ರಸ್ಟ್‌ ಅಧ್ಯಕ್ಷ ಕೆ.ವಿ. ಮಲ್ಲೇಶ್‌, ವಿಧಾನ ಪರಿಷತ್‌ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ, ಮಾಜಿ ಸದಸ್ಯ ಡಿ. ಮಾದೇಗೌಡ ಮೊದಲಾದವರು ಇದ್ದರು. ಡಾ.ಎಚ್.ಆರ್‌. ತಿಮ್ಮೇಗೌಡ ಸ್ವಾಗತಿಸಿದರು.