ನರಸಿಂಹರಾಜಪುರದುಶ್ಚಟಗಳಿಂದ ದೂರವಿದ್ದರೆ ಮಾತ್ರ ಸಮಾಜದಲ್ಲಿ ಗೌರವ ಸಿಗಲಿದೆ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ಬಾಲಕೃಷ್ಣಭಟ್ ತಿಳಿಸಿದರು.
- ದೀಪ್ತಿ ಪ್ರೌಢ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರದುಶ್ಚಟಗಳಿಂದ ದೂರವಿದ್ದರೆ ಮಾತ್ರ ಸಮಾಜದಲ್ಲಿ ಗೌರವ ಸಿಗಲಿದೆ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ಬಾಲಕೃಷ್ಣಭಟ್ ತಿಳಿಸಿದರು.
ಬುಧವಾರ ದೀಪ್ತಿ ಪ್ರೌಢ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಜನ ಜಾಗೃತಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಬಾಲ್ಯದಿಂದಲೇ ಉತ್ತಮ ಗುರಿ ಹೊಂದಿದ್ದರೆ ಜೀವನದಲ್ಲಿ ಸಾಧನೆ ಮಾಡಬಹುದು. ಜೀವನದಲ್ಲಿ ದೊಡ್ಡ, ದೊಡ್ಡ ಸಾಧನೆ ಮಾಡಿದವರಲ್ಲಿ ಯಾರೂ ದುಶ್ಚಟಗಳಿಗೆ ಬಲಿಯಾಗಿಲ್ಲ. ದುಶ್ಚಟಗಳಾದ ಬೀಡಿ, ಸಿಗರೇಟು, ಮದ್ಯಪಾನ ಮುಂತಾದ ವುಗಳಿಂದ ದೂರವಿರಬೇಕು. ಪ್ರತಿಯೊಬ್ಬರಲ್ಲೂ ಒಳ್ಳೆಯ ಮನಸ್ಸು, ಒಳ್ಳೆಯ ವಿಚಾರ ಇರುತ್ತದೆ. ಅದನ್ನು ಮನಗಂಡು ಕೆಟ್ಟ ವಿಚಾರಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.ಅತಿಥಿಯಾಗಿದ್ದ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟ ಗಳಿಂದ ದೂರವಾಗಿ ಉತ್ತಮ ಸಮಾಜ ನಿರ್ಮಾಣ ಮಾಡುವತ್ತ ಗಮನ ಹರಿಸಬೇಕು. ಆರೋಗ್ಯವಂತ ದೇಶ ನಿರ್ಮಾಣ ದಲ್ಲಿ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಇತ್ತೀಚಿನ ವರ್ಷಗಳಲ್ಲಿ ಮಕ್ಕಳೇ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಕಳವಳದ ವಿಷಯ. ಈ ಬಗ್ಗೆ ಜಾಗೃತಿ ಮೂಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಜನ ಜಾಗೃತಿ ವೇದಿಕೆಯಿಂದ ಶಾಲಾ, ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ದೀಪ್ತಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯಿನಿ ಲೀಲಾವತಿ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಮಾಹಿತಿ ನೀಡುತ್ತಿರುವ ಧ.ಗ್ರಾ.ಯೋಜನೆ ಕಾರ್ಯ ಶ್ಲಾಘನೀಯ. ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕಾದರೆ ದುಶ್ಚಟಗಳಿಗೆ ಬಲಿಯಾಗಬಾರದು ಎಂದರು. ಧ.ಗ್ರಾ.ಯೋಜನೆ ವಲಯ ಮೇಲ್ವೀಚಾರಕಿ ಸುಶೀಲ ವಿದ್ಯಾರ್ಥಿಗಳಿಗೆ ದುಶ್ಚಟಗಳ ವಿರುದ್ಧ ಪ್ರತಿಜ್ಞಾ ವಿಧಿ ಬೋಧಿಸಿದರು.ಸೇವಾ ಪ್ರತಿನಿಧಿ ಶಶಿಕಲಾ, ಸಹ ಶಿಕ್ಷಕರಾದ ಜೋಶ್, ಜೆಸ್ಸಿಮೇಡಂ, ಮೆಲ್ಲಿಟಾ ಮೇಡಂ ಉಪಸ್ಥಿತರಿದ್ದರು. ನಂತರ ಮಕ್ಕಳಿಗೆ ಸಿಹಿ ಹಂಚಲಾಯಿತು.