ತಂದೆ ತಾಯಿ ಗುರು ಹಿರಿಯನ್ನು ಗೌರವಿಸಿ: ಹಿರಿಯ ನ್ಯಾಯಾಧೀಶ ಸುಧೀರ್ ಸಲಹೆ

| Published : Nov 01 2024, 12:05 AM IST

ತಂದೆ ತಾಯಿ ಗುರು ಹಿರಿಯನ್ನು ಗೌರವಿಸಿ: ಹಿರಿಯ ನ್ಯಾಯಾಧೀಶ ಸುಧೀರ್ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮನ್ನು ಹೆತ್ತು ಹೊತ್ತು ಸಾಕಿ ಸಲಹಿದ ವಯೋವೃದ್ಧ ತಂದೆ, ತಾಯಿಗಳನ್ನು ಕೀಳಾಗಿ ಕಂಡು ಅಗೌರವದಿಂದ ನಡೆದುಕೊಳ್ಳುವುದು ಸರಿಯಲ್ಲ. ನಮ್ಮ ಆತ್ಮಸಾಕ್ಷಿಯು ಒಪ್ಪುವುದಿಲ್ಲ. ಭಗವಂತನೂ ಕ್ಷಮಿಸಲ್ಲ .

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಂದೆ- ತಾಯಿ ಹಾಗೂ ಗುರು- ಹಿರಿಯರನ್ನು ಕಡೆಗಣಿಸದೇ ಗೌರವಿಸಿ, ಭಕ್ತಿ- ಭಾವದಿಂದ ಕಾಣುವುದು ನಮ್ಮ ಸಂಸ್ಕೃತಿಯ ಒಂದು ಭಾಗ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸುಧೀರ್ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ಆಶ್ರಯದಲ್ಲಿ ಹಿರಿಯ ನಾಗರಿಕರ ದಿನ ಮತ್ತು ಕಾರ್ಮಿಕರ ಕಾಯ್ದೆಗಳನ್ನು ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮನ್ನು ಹೆತ್ತು ಹೊತ್ತು ಸಾಕಿ ಸಲಹಿದ ವಯೋವೃದ್ಧ ತಂದೆ, ತಾಯಿಗಳನ್ನು ಕೀಳಾಗಿ ಕಂಡು ಅಗೌರವದಿಂದ ನಡೆದುಕೊಳ್ಳುವುದು ಸರಿಯಲ್ಲ. ನಮ್ಮ ಆತ್ಮಸಾಕ್ಷಿಯು ಒಪ್ಪುವುದಿಲ್ಲ. ಭಗವಂತನೂ ಕ್ಷಮಿಸಲ್ಲ ಎಂದರು.

ಅಸಂಘಟಿತ ಕಾರ್ಮಿಕರು ಇಲಾಖೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಗುರುತಿನ ಚೀಟಿ ಪಡೆದು ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕು. ಮಕ್ಕಳನ್ನು ದುಡಿಮೆಗೆ ಹಚ್ಚದೆ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡಿಸಿ ಸಮಾಜದ ಮುಖ್ಯ ವಾಹಿನಿಯಲ್ಲಿ ಸಾಧನೆ ಮಾಡುವಂತೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಅಪರ ಸಿವಿಲ್ ನ್ಯಾಯಾಧೀಶ ದೇವರಾಜು ಮಾತನಾಡಿ, ಹಿರಿಯ ನಾಗರಿಕರಿಗೆ ತಮ್ಮ ಮಕ್ಕಳು ಸೇರಿದಂತೆ ಯಾವುದೇ ವ್ಯಕ್ತಿಯು ತೊಂದರೆ ನೀಡಿದರೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿ, ಆರು ತಿಂಗಳ ಒಳಗೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ಬಡ ಜನರು ಹಾಗೂ ತುಳಿತಕ್ಕೊಳಗಾದವರು ಕಾನೂನು ಸೇವಾ ಸಮಿತಿಗೆ ಮನವಿ ಸಲ್ಲಿಸಿ ಉಚಿತವಾಗಿ ವಕೀಲರ ಸಹಾಯ ಪಡೆದುಕೊಂಡು ನ್ಯಾಯವನ್ನು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾದ ವಕೀಲರ ಸಂಘದ ಕಾರ್ಯದರ್ಶಿ ಆರ್.ಕೆ.ರಾಜೇಗೌಡ, ಉಪಾಧ್ಯಕ್ಷ ಬಿ.ಸಿ.ದಿನೇಶ್ ಹಿರಿಯ ನಾಗರಿಕರ ಹಕ್ಕುಗಳು ಹಾಗೂ ಕಾರ್ಮಿಕರ ಕಾಯ್ದೆಗಳ ಕುರಿತು ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಂಡ್ಯ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್ ಎಂ. ಆಲದಕಟ್ಟೆ, ಅಪರ ಸಿವಿಲ್ ನ್ಯಾಯಾಧೀಶೆ ಆರ್.ಶಕುಂತಲಾ ಮತ್ತು ಕೆ.ವಿ. ಅರ್ಪಿತಾ ಕಾರ್ಮಿಕರಿಗೆ ವಿವಿಧ ಸಾಧನ- ಸಲಕರಣೆಗಳನ್ನು ವಿತರಿಸಿದರು. ತಾಲೂಕು ಕಾರ್ಮಿಕ ನಿರೀಕ್ಷಕ ಎಂ.ಸ್ವಾಮಿ ಸ್ವಾಗತಿಸಿ ವಂದಿಸಿದರೆ, ಉದ್ಯೋಗಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಡಾ.ನರಸಿಂಹ ರಾಜು ಕಾರ್ಯಕ್ರಮ ನಡೆಸಿಕೊಟ್ಟರು.