ರೈತರಿಗೆ ಸರ್ಕಾರಗಳು ಎಲ್ಲಾ ರೀತಿಯ ಸವಲತ್ತು ಹಾಗೂ ರಕ್ಷಣೆ ನೀಡಬೇಕು ಎಂದು ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾರೋಗೆರೆ ಮಹೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ದೇಶಕ್ಕೆ ಅನ್ನ ಕೊಡುವ ರೈತರನ್ನು ಗೌರವದಿಂದ ಕಾಣಬೇಕು. ಈ ದೇಶದ, ನಾಡಿನ ಜನ ನೆಮ್ಮೆದಿಯಾಗಿರಲು ಅನ್ನ ನೀಡುವ ರೈತ ನೆಮ್ಮದಿಯಾಗಿರಬೇಕು. ರೈತರಿಗೆ ಸರ್ಕಾರಗಳು ಎಲ್ಲಾ ರೀತಿಯ ಸವಲತ್ತು ಹಾಗೂ ರಕ್ಷಣೆ ನೀಡಬೇಕು ಎಂದು ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾರೋಗೆರೆ ಮಹೇಶ್ ಹೇಳಿದರು.

ಅವರು ಮಂಗಳವಾರ ನಗರದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ೨೦೨೫-೨೬ನೇ ಸಾಲಿನ ರಾಷ್ಟ್ರೀಯ ರೈತರ ದಿನಾಚರಣೆ ಹಾಗೂ ವಿಶ್ವ ಮಣ್ಣು ಆರೋಗ್ಯ ದಿನಾಚರಣೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಯಾವ ದೇಶದಲ್ಲಿ ರೈತರು ಸುಖ ಸಮೃದ್ದಿಯಿಂದ ಇರುತ್ತಾರೆ. ಆ ದೇಶ ಅಭಿವೃದ್ಧಿ ಹೊಂದುತ್ತದೆ. ಸರಕಾರಗಳು ರೈತರ ಕಷ್ಟಗಳಿಗೆ ಪ್ರಮಾಣಿಕವಾಗಿ ಸ್ಪಂದಿಸಬೇಕು. ಮಾಜಿ ಪ್ರಧಾನಿ ಚೌದ್ರಿ ಚರಣ್ ಸಿಂಗ್ ಅವರ ಜನ್ಮ ದಿನದ ಪ್ರಯುಕ್ತ ರೈತರ ದಿನ ಆಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಚೌದ್ರಿ ಚರಣ್ ಸಿಂಗ್ ಅವರು ಕಡಿಮೆ ಅವಧಿಯಲ್ಲಿ ಪ್ರಧಾನಿಯಾದರೂ ಸಹ ರೈತರ ಪರ ಧ್ವನಿ ಎತ್ತಿದವರು ಅದೇ ರೀತಿ ಮಾಜಿ ಪ್ರಧಾನ ಮಂತ್ರಿ ಜವಹಾರಲ್ ನೆಹರು ಅವರೂ ಸಹ ರೈತರ ಪರ ಆಡಳಿತ ಮಾಡಿ ಜೈ ಜವಾನ್, ಜೈ ಕಿಸಾನ್ ಎಂದು ಹೇಳಿದರು. ನಾನು ರೈತನ ಮಗನಾಗಿ ರೈತರ ಪರ ಇರುತ್ತೇನೆ ಎಂದರು.

ತಹಸೀಲ್ದಾರ್ ಆನಂದ ಕುಮಾರ್ ಮಾತನಾಡಿ, ರೈತರು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿ ಮಾಡಬೇಕು. ಸರಕಾರದ ವಿವಿಧ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಜೆ.ಎನ್.ರಾಜಸಿಂಹ ಮಾತನಾಡಿ, ದೇಶಕ್ಕೆ ಅನ್ನ ಕೊಡುವ ರೈತರಿಗೆ ಸರಿಯಾದ ಗೌರವ ಇಲ್ಲ. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಇಲ್ಲ. ರೈತರ ಮೇಲೆ ದಬ್ಬಾಳಿಕೆ, ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಆದ್ದರಿಂದ ರೈತರು ಎಲ್ಲರೂ ಒಗ್ಗಟ್ಟಾಗಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಹೋರಾಡಬೇಕು. ರೈತರ ಜಮೀನುಗಳಲ್ಲಿ, ಕಾಡುಪ್ರಾಣಿಗಳು, ನವಿಲುಗಳು, ಜಿಂಕೆಗಳ ಹಾವಳಿ ಹೆಚ್ಚಾಗುತ್ತಿದೆ. ಇದರ ಬಗ್ಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎನ್.ಸಿ ಮಂಜುನಾಥ್, ಮಧುಗಿರಿ ವಿಭಾಗದ ಉಪ ಕೃಷಿ ನಿರ್ದೇಶಕ ಚಂದ್ರಕುಮಾರ್.ಎನ್, ಪೌರಾಯುಕ್ತ ರುದ್ರೇಶ್, ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜು, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸುಧಾಕರ್, ಕೃಷಿ ಇಲಾಖೆಯ ತಂತ್ರಿಕ ಅಧಿಕಾರಿ ನಟರಾಜ್, ಸತ್ಯನಾರಾಯಣ ಸೇರಿದಂತೆ ಶಿರಾ, ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿ, ಕೃಷಿಕ ಸಮಾಜದ ಸದಸ್ಯರುಗಳು ಮತ್ತು ತಾಲೂಕಿನ ರೈತಬಾಂಧವರು, ರೈತ ಮಹಿಳೆಯರು, ರೈತ ಮುಂಖಂಡರು ಹಾಜರಿದ್ದರು.