ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಶಿಕ್ಷಕರಿಲ್ಲದ ಸಮಾಜವನ್ನು ಊಹಿಸಲು ಅಸಾಧ್ಯವಾಗಿದೆ. ಮಕ್ಕಳನ್ನು ವಿದ್ಯಾವಂತರಾಗಿಸುವ ಜೊತೆಗೆ ಜವಾಬ್ದಾರಿ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಿಂದ ಕೂಡಿದೆ. ಶಿಕ್ಷಕ ವರ್ಗ ವೃತ್ತಿಗೌರವ ಕಾಪಾಡಿಕೊಂಡು, ಉತ್ತಮ ಸಮಾಜ ರೂಪಿಸಲು ಮುಂದಾಗಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ, ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರು, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅಪಾರ ಎಂದರು.
ನವಭಾರತ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅತ್ಯಂತ ಮುಖ್ಯವಾಗಿದೆ. ಶಿಕ್ಷಕರು ಅಲೆಗ್ಸಾಂಡರ್‌ನಂತೆ ಜ್ಞಾನಯಾತ್ರೆ, ಅಬ್ದುಲ್ ಕಲಾಂ ಅವರಂತೆ ಜ್ಞಾನದ ಕ್ಷಿಪಣಿ ಹಾರಿಸಬೇಕು. ಹೊಸ ಹೊಸ ತಂತ್ರಜ್ಞಾನ, ವೈಜ್ಞಾನಿಕ ಸಂಶೋಧನೆಗಿಂತ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಬದಲಾಯಿಸುವುದು ಶ್ರೇಷ್ಠವಾದ ಕಾರ್ಯ. ಅಂತಹ ಕಾಯಕವೇ ಶಿಕ್ಷಕರ ವೃತ್ತಿಯಾಗಿದೆ. ಎಲ್ಲರ ಶ್ರಮದಿಂದ ಗುರುಗಳಿಗೆ ನಮ್ಮ ನೆಲದಲ್ಲಿ ಹೆಚ್ಚಿನ ಮಾನ್ಯತೆ ಸಿಕ್ಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಾದರಿಯಾಗಿದೆ. ಮಾರ್ಗದರ್ಶಿ ಶಿಕ್ಷಕರಿಗೆ ಧನ್ಯವಾದ ಹೇಳುವ ದಿನವೇ ಶಿಕ್ಷಕರ ದಿನವಾಗಿದೆ ಎಂದು ತಿಳಿಸಿದರು.ಮಹಿಳೆಯರಿಗೆ ಶಿಕ್ಷಣದ ಅಗತ್ಯವಿದೆ ಎಂದು ದೇಶಕ್ಕೆ ಸಾರಿದ ಮಹಾನ್ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಹೋರಾಟ ಮಾಡಿ ಸ್ಥಾನಮಾನ ನೀಡಿದ್ದಾರೆ. ಕಿರಣ್ ಬೇಡಿ, ಡಾ.ವರ್ಗೀಸ್ ಕುರಿಯನ್ ಕೂಡ ಶಿಕ್ಷಕರು. ಇದೇ ಮಾದರಿಯಲ್ಲಿ ದೇಶ, ಸಮಾಜಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ ಬಹಳಷ್ಟು ಶಿಕ್ಷಕರಿದ್ದಾರೆ. ತಮ್ಮ ಶಾಲಾ ದಿನಗಳನ್ನು ನೆನಪು ಮಾಡಿಕೊಂಡು ಈಗಿನ ವಿದ್ಯಾರ್ಥಿಗಳು ರಸಪ್ರಶ್ನೆ ಸ್ಪರ್ಧೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಶಿಕ್ಷಕರು ಶಾಲಾವಧಿಯಲ್ಲಷ್ಟೇ ಅಲ್ಲ, ಬಾಕಿ ವೇಳೆಯಲ್ಲೂ ಮಕ್ಕಳನ್ನು ತಿದ್ದುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು.
ತಂತ್ರಜ್ಞಾನ ಇಂದು ಬದಲಾಗಿದ್ದು, ಮೊಬೈಲ್‌ನಲ್ಲೇ ಎಲ್ಲ ಮಾಹಿತಿ ಸಿಗುತ್ತದೆ. ಮೊದಲೆಲ್ಲಾ ಎಲ್ಲ ಮಾಹಿತಿ ಪಡೆಯಲು ಗ್ರಂಥಾಲಯಕ್ಕೆ ಮೊರೆಹೋಗಬೇಕಾಗಿತ್ತು. ಶಿಕ್ಷಕರಿಗಿರುವ ಎಲ್ಲ ಕೌಶಲ್ಯತೆ, ಜ್ಞಾನವನ್ನು ವಿದ್ಯಾರ್ಥಿಗಳಿಗೆ ಸಿಗುವಂತೆ ಮಾಡಬೇಕು. ಶಾಲೆಗಳ ಗ್ರಂಥಾಲಯದ ಪುಸ್ತಕಗಳನ್ನು ಓದುವಂತೆ ಹಾಗೂ ದಿನಪತ್ರಿಕೆಗಳನ್ನೂ ಓದುವಂತೆ ಮಾಡಬೇಕು. ಇಂದಿನ ಮಕ್ಕಳು ಸಾಕಷ್ಟು ಬುದ್ಧಿವಂತರಿದ್ದಾರೆ. ಮಕ್ಕಳಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. ಬಡತನ, ಏಕ ಪೋಷಕತ್ವ ಮಕ್ಕಳನ್ನು ಪ್ರೋತ್ಸಾಹಿಸುವುದು, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವುದು ಶಿಕ್ಷಕರಿಂದ ಮಾತ್ರ ಸಾಧ್ಯವಿದೆ. ಅಂತಹ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ ಎಂದು ಡಾ.ಪ್ರಭಾ ಹೇಳಿದರು.ಎಸ್ಸೆಸ್ಸೆಲ್ಸಿ ಫಲಿತಾಂಶ 5ನೇ ಸ್ಥಾನಕ್ಕೇರಿಸಿ:
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ದೇಶಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ದೇಶ ಅಭಿವೃದ್ಧಿ ಪಥದಲ್ಲಿ ನಡೆಯಬೇಕಾದರೆ ನೀವು ಗುರು ಮಾತ್ರವಲ್ಲದೇ, ಪ್ರತಿಯೊಬ್ಬ ವಿದ್ಯಾರ್ಥಿಗೂ ಮೊದಲು ಸ್ನೇಹಿತರಾಗಿ ಜಿಲ್ಲೆಯ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುವ ಅವಶ್ಯಕತೆ ಇದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗಾಗಿ ಶಿಕ್ಷಕರು ಪಠ್ಯ ವಿಷಯದ ಜೊತೆಗೆ ಪಠ್ಯೇತರ ವಿಷಯಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು. ಜಿಲ್ಲೆಯ ಮಕ್ಕಳನ್ನು ದೇಶಕ್ಕೆ ಕೀರ್ತಿ ತರುವ ನಿಟ್ಟಿನಲ್ಲಿ ತಯಾರು ಮಾಡಬೇಕು. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯು 20ನೇ ಸ್ಥಾನದಲ್ಲಿದ್ದು, ಈ ವರ್ಷ ಮೊದಲ 5 ಸ್ಥಾನದೊಳಗೆ ಜಿಲ್ಲೆ ಇರುವಂತೆ ಶ್ರಮಿಸೋಣ ಎಂದರು.ಸ್ವಯಂಪ್ರೇರಿತರಾಗಿ ಪ್ರೋತ್ಸಾಹಿಸಿ:
ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಕ್ರೀಡೆ, ಸಾಂಸ್ಕೃತಿಕತೆ ಹಾಗೂ ದೈಹಿಕ ಚಟುವಟಿಕೆ ಒಳಗೊಂಡು ಪಠ್ಯೇತರ ಚಟುವಟಿಕೆಯಲ್ಲಿ ತೊಡಗುವಂತೆ ಮಾರ್ಗದರ್ಶಕರಾಗಿ ಸುಂದರ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು. ಶಿಕ್ಷಕರ ನಿವೃತ್ತಿ ನಂತರ ಬಹುತೇಕ ತಮ್ಮ ಮೆನೆಯಲ್ಲೇ ಕಾಲ ಕಳೆಯುತ್ತಾರೆ. ಅಲ್ಲಿ ಕಾಲ ಕಳೆಯುವ ಸಮಯವನ್ನು ಯಾವ ಶಾಲೆಯಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆ ಇದೆಯೋ ಅಂತಹ ಶಾಲೆಗಳಿಗೆ ಸ್ವಯಂ ಪ್ರೇರಿತರಾಗಿ ಬಂದು ಮಕ್ಕಳಿಗೆ ಮಾರ್ಗದರ್ಶನ ಹಾಗೂ ಕಲಿಕೆಗೆ ಹೆಚ್ಚು ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಕೊಟ್ರೇಶ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕರಿಸಿದ್ದಪ್ಪ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪ
ನಿರ್ದೇಶಕರಾದ ಎಸ್.ಗೀತಾ, ಉತ್ತರ ವಲಯ ಬಿಇಓ ಶೇರ್‌ಅಲಿ, ದಕ್ಷಿಣ ವಲಯ ಬಿಇಓ ಪುಪ್ಪಾಲತಾ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೀರೇಶ್.ಎಸ್.ಒಡೇನಪುರ ಇತರರು ಇದ್ದರು. ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ 12 ಹಾಗೂ ಪ್ರೌಢಶಾಲಾ ವಿಭಾಗದಿಂದ 6 ಶಿಕ್ಷಕರು ಸೇರಿದಂತೆ ಒಟ್ಟು 18 ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, 3 ದಶಕ ಕಾಲ ಕಾರ್ಯನಿರ್ವಹಿಸಿ ನಿವೃತ್ತರಾದ ಶಿಕ್ಷಕರನ್ನು ಇಲಾಖೆಯಿಂದ ಸನ್ಮಾನಿಸಲಾಯಿತು.