ಹಿರಿಯರ ಗೌರವಿಸುವುದು ಆದ್ಯ ಕರ್ತವ್ಯ: ಡಾ. ತೋಂಟದ ಸಿದ್ಧರಾಮ ಶ್ರೀಗಳು

| Published : Oct 14 2023, 01:00 AM IST

ಹಿರಿಯರ ಗೌರವಿಸುವುದು ಆದ್ಯ ಕರ್ತವ್ಯ: ಡಾ. ತೋಂಟದ ಸಿದ್ಧರಾಮ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ನಗರದ ಜ. ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ ೨೬೬೨ನೇ ಶಿವಾನುಭವ ಕಾರ್ಯಕ್ರಮ ಡಾ. ಸಿದ್ಧರಾಮ ಶ್ರೀಗಳ ಸಾನಿಧ್ಯದಲ್ಲಿ ನಡೆಯಿತು.
ಗದಗ: ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರನ್ನು ಗೌರವಿಸುವುದು ಆದ್ಯ ಕರ್ತವ್ಯವಾಗಿದೆ. ಹಿರಿಯರನ್ನು ಗೌರವಿಸದೇ ಹೋದರೆ ಕರ್ತವ್ಯ ಚ್ಯುತಿ ಮಾಡಿದಂತೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು. ನಗರದ ಜ. ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ ೨೬೬೨ನೇ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ನಮ್ಮ ಸಂಸ್ಕೃತಿ ಉಳಿದು ಬೆಳೆದು ಬರಬೇಕಾದರೆ ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಮಕ್ಕಳು ಇವರೆಲ್ಲರೂ ಕೂಡಿ ಒಂದೇ ಮನೆಯಲ್ಲಿದ್ದರೆ ಸಂಸ್ಕಾರ ಬೆಳೆಯುತ್ತದೆ. ಇತ್ತೀಚಿನ ದಿನಮಾನಗಳಲ್ಲಿ ಹಿರಿಯರ ಬಗ್ಗೆ ಅಸಡ್ಡೆ ತೋರುತ್ತಿರುವವರ ಸಂಖ್ಯೆಹೆಚ್ಚುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಹಿರಿಯರನ್ನು ಗೌರವಿಸಿದಾಗ ಮಾತ್ರ ನಾವು ಒಳ್ಳೆಯ ನಾಗರಿಕರಾಗಲು ಸಾಧ್ಯ ಎಂದರು. ಲಿಂಗಾಯತ ಪ್ರಗತಿಶೀಲ ಸಂಘ ಕಳೆದ ೫೨ ವರ್ಷಗಳಿಂದ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಗಣನೀಯಸೇವೆ ಸಲ್ಲಿಸುತ್ತಾ ಬಂದಿದೆ. ಶಿವಾನುಭವ ವೇದಿಕೆ ಸಂಗೀತಗಾರರು, ನಿರೂಪಕರು, ಸಾಹಿತಿಗಳು, ಪ್ರವಚನಕಾರರು, ಉಪನ್ಯಾಸಕರು ಹೀಗೆ ಸಾಕಷ್ಟು ಪ್ರತಿಭೆಗಳನ್ನು ಬೆಳಕಿಗೆ ತಂದಿದೆ. ತೆರೆಯ ಮರೆಯ ಹಿಂದಿನ ಅನೇಕ ಸಾಧಕರನ್ನು ಗುರುತಿಸಿ, ಪ್ರೋತ್ಸಾಹಿಸಿ ನಾಡಿಗೆ ಪರಿಚಯಿಸಿದ ಶ್ರೇಯಸ್ಸು ಲಿಂಗಾಯತ ಪ್ರಗತಿಶೀಲ ಸಂಘದ್ದಾಗಿದೆ. ಸಂಘದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಸಂಘದ ಸೇವಾ ಕಾರ್ಯಗಳಿಗೆ ರಾಜಮುದ್ರೆಯನ್ನು ಒತ್ತಿದೆ. ಸಂಘದ ಶ್ರೇಯಸ್ಸಿಗೆ ಶ್ರಮಿಸಿದ ಎಲ್ಲ ಹಿರಿಯರನ್ನು ಅಭಿನಂದಿಸಿ ಗೌರವಿಸಿದರು. ಉಪನ್ಯಾಸಕ ಕೆ.ಎಚ್. ಬೇಲೂರು ಮಾತನಾಡಿ, ನಮ್ಮ ಪೂರ್ವಜರು ಹೇಳುತ್ತಿರುವ ಕಥೆಗಳನ್ನು ಕೇಳುತ್ತಾ ಬೆಳೆದಿದ್ದೇವೆ. ಆ ಕಾಲದಲ್ಲಿರುವ ಪ್ರೀತಿ, ವಿಶ್ವಾಸ, ಬಾಂಧವ್ಯಗಳು ಇಂದು ಕಾಣುವುದು ಅಪರೂಪ ಎಂದರು. ಈ ವೇಳೆ ಡಾ. ಜಿ.ಬಿ. ಪಾಟೀಲ ಮಾತನಾಡಿದರು. ಲಿಂಗಾಯತ ಪ್ರಗತಿಶೀಲ ಸಂಘದ ೫೩ನೇ ಸಂಸ್ಥಾಪನಾ ದಿನಾಚರಣೆ ಹಾಗೂ ವಿಶ್ವ ಹಿರಿಯ ನಾಗರಿಕರ ದಿನ ಆಚರಿಸಲಾಯಿತು. ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿ ಸಲಾಯಿತು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ತಂಡದವರು ವಚನ ಸಂಗೀತ ಹಾಡಿದರು. ಸ್ಫೂರ್ತಿ ಸಿ. ಸತ್ಯಪ್ಪನವರ ಧರ್ಮಗ್ರಂಥ ಪಠಣಗೈದರು. ಕಾರ್ತಿಕ ಎಸ್. ಅಮರಗೋಳ ಅವರಿಂದ ವಚನ ಚಿಂತನ ನಡೆಯಿತು. ಶಿವಾನುಭವ ಭಕ್ತಿಸೇವೆಯನ್ನು ವಹಿಸಿದ್ದ ಡಾ.ಎಸ್. ಬಿ. ಶೆಟ್ಟರ ಅವರನ್ನು ಶ್ರೀಗಳು ಸನ್ಮಾನಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರೂಪಾಕ್ಷಪ್ಪ ಅರಳಿ, ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ನಿರೂಪಿಸಿದರು.