ಹರಿಹರಪುರದ ನುಗ್ಗಿಮಕ್ಕಿ ಶ್ರೀ ಮಲ್ಲೇಶಯ್ಯನವರ ಛತ್ರದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುನಮನ ಹಾಗೂ ಶಿಕ್ಷಣ ಮತ್ತು ಶಿಕ್ಷಕರ ಪಾತ್ರ ವಿಷಯದ ಕುರಿತು ಭಾಷಣ ಸ್ಪರ್ಧೆ ಸೋಮವಾರ ನಡೆಯಿತು.

ಮಲ್ಲೇಶಯ್ಯನವರ ಛತ್ರದಲ್ಲಿ ಗುರುನಮನ

ಕನ್ನಡಪ್ರಭ ವಾರ್ತೆ ಕೊಪ್ಪ

ಹರಿಹರಪುರದ ನುಗ್ಗಿಮಕ್ಕಿ ಶ್ರೀ ಮಲ್ಲೇಶಯ್ಯನವರ ಛತ್ರದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುನಮನ ಹಾಗೂ ಶಿಕ್ಷಣ ಮತ್ತು ಶಿಕ್ಷಕರ ಪಾತ್ರ ವಿಷಯದ ಕುರಿತು ಭಾಷಣ ಸ್ಪರ್ಧೆ ಸೋಮವಾರ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ದಿವ್ಯ ಕ್ಷೇತ್ರ ಶ್ರೀಮಠದ ವ್ಯವಸ್ಥಾಪಕ ಕೃಷ್ಣಮೂರ್ತಿ ಭಟ್ ಮಾತನಾಡಿ, ಪ್ರಕೃತಿಯಲ್ಲಿರುವ ಪ್ರತಿಯೊಂದು ಚರಾಚರ ವಸ್ತುವೂ ನಮಗೆ ಒಂದೊಂದು ಪಾಠ ಕಲಿಸುತ್ತದೆ. ಕಲಿಕೆ ನಿರಂತರವಾಗಿದ್ದಾಗ ಮಾತ್ರ ಯಶಸ್ಸು ಸಾಧ್ಯ. ಉತ್ತಮ ಪ್ರಜೆಗಳಾಗಿ ರೂಪಿಸುವ ಶಿಕ್ಷಕರನ್ನು ಗೌರವಿಸುವುದು ಉತ್ತಮ ಸಂಸ್ಕೃತಿ ಎಂದರು.ಗುರುನಮನ ಸ್ವೀಕರಿಸಿದ ನಿವೃತ್ತ ಪ್ರಾಚಾರ್ಯ ಬಿ.ಎ. ಹೂವಪ್ಪ ಗೌಡ ತಮ್ಮ ಸೇವಾ ದಿನಗಳನ್ನು ಸ್ಮರಿಸಿದರು. ಸರಸ್ವತಿ ಸುಧಾಕರ್ ಮಾತನಾಡಿದರು. ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಬಿಎಸ್‌ಎಫ್ ಯೋಧ ರಾಘವೇಂದ್ರ ಮಾತನಾಡಿ, ತಮ್ಮ ಗುರುಗಳ ಸಮ್ಮುಖದಲ್ಲಿ ಅಭಿನಂದನೆ ಸ್ವೀಕರಿಸುತ್ತಿರುವುದು ಅವಿಸ್ಮರಣೀಯ ಕ್ಷಣ ಎಂದರು.ನಿವೃತ್ತ ಪ್ರಾಚಾರ್ಯ ರಾಮಪ್ರಸಾದ್ ಮಾತನಾಡಿ, ನಕ್ಸಲ್ ನಿರ್ಮೂಲನೆ ಸಹಿತ ವಿವಿಧ ಸಂದರ್ಭ ಬಿಎಸ್‌ಎಫ್ ಯೋಧರು ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.ಕಸಾಪ ಹೋಬಳಿ ಘಟಕದ ಕೋಶಾಧ್ಯಕ್ಷ ಎ.ಓ. ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಷಣ ಸ್ಪರ್ಧೆಗೆ ನಿವೃತ್ತ ಉಪನ್ಯಾಸಕ ಎಚ್.ಕೆ. ಗೋಪಾಲ್ ಹಾಗೂ ನಿವೃತ್ತ ಮುಖ್ಯಶಿಕ್ಷಕ ಅನಂತ ಹೆಬ್ಬಾರ್ ತೀರ್ಪುಗಾರರಾಗಿದ್ದರು.ಕಸಾಪ ಹೋಬಳಿ ಘಟಕದ ಅಧ್ಯಕ್ಷ ವೈದ್ಯ ಬಿ.ಆರ್. ಅಂಬರೀಶ ಭಂಡಿಗಡಿ ಅಧ್ಯಕ್ಷತೆ ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಶಿಕ್ಷಣದಿಂದ ಸಕಲವನ್ನೂ ಸಾಧಿಸಲು ಸಾಧ್ಯ. ಕಸಾಪ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ವಿವಿಧ ಸ್ಪರ್ಧೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.ಕಸಾಪ ಹೋಬಳಿ ಮಹಿಳಾ ಘಟಕದ ಅಧ್ಯಕ್ಷೆ ಸುಮಿತ್ರ ನಾರಾಯಣ್, ಗೌರವ ಕಾರ್ಯದರ್ಶಿ ಶಶಿಶೇಖರ್ ಹೊರಕೂಡಿಗೆ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.