ವಿಶ್ವದ ಅತ್ಯಂತ ಬೃಹತ್ ಲಿಖಿತ ಸಂವಿಧಾನವು ಭಾರತ ಸಂವಿಧಾನವಾಗಿದೆ. ಸಾಮಾಜಿಕ ನ್ಯಾಯ, ಸಾಮಾನತೆಯ ನ್ಯಾಯ, ಭಾತೃತ್ವ ಮತ್ತು ಸ್ವಾತಂತ್ರ್ಯ ನ್ಯಾಯವನ್ನು ಪ್ರಜೆಗಳಿಗೆ ಕಲ್ಪಿಸಿದೆ.

ಬಳ್ಳಾರಿ: ಸಂವಿಧಾನ ಆಶಯದಡಿ ಪ್ರತಿಯೊಂದು ಕಾಯ್ದೆ ಮತ್ತು ಕಾನೂನುಗಳನ್ನು ರಚಿಸಲಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಕಾನೂನಿನಡಿ ನಡೆದುಕೊಳ್ಳುವುದು. ಅವುಗಳನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯಯೂ ಆಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಜಿ.ಶಾಂತಿ ತಿಳಿಸಿದರು.

ನಗರದ ತಾಳೂರು ರಸ್ತೆಯ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಆವರಣದಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಗಳಿಗೆ ಪುಷ್ಪರ್ಚಾನೆ ಸಲ್ಲಿಸಿ ಬಳಿಕ ಅವರು ಮಾತನಾಡಿದರು.

ವಿಶ್ವದ ಅತ್ಯಂತ ಬೃಹತ್ ಲಿಖಿತ ಸಂವಿಧಾನವು ಭಾರತ ಸಂವಿಧಾನವಾಗಿದೆ. ಸಾಮಾಜಿಕ ನ್ಯಾಯ, ಸಾಮಾನತೆಯ ನ್ಯಾಯ, ಭಾತೃತ್ವ ಮತ್ತು ಸ್ವಾತಂತ್ರ್ಯ ನ್ಯಾಯವನ್ನು ಪ್ರಜೆಗಳಿಗೆ ಕಲ್ಪಿಸಿದೆ. ಸಂವಿಧಾನ ರಚನೆಗೆ ಕಾರಣೀಭೂತರಾದ ಮಹನೀಯರನ್ನು ಸ್ಮರಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅದರಲ್ಲಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸದಾ ಸ್ಮರಿಸಲೇಬೇಕು. ಸಂವಿಧಾನದ ಮೂಲಭೂತ ಹಕ್ಕುಗಳಿಂದ ದೇಶದ ನಾಯಕನನ್ನು ಆಯ್ಕೆ ಮಾಡುವ ಅವಕಾಶ ನೀಡಿದೆ. ಅದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವುದು ಪ್ರತಿ ಪ್ರಜೆಯ ಆದ್ಯ ಕರ್ತವ್ಯ ಆಗಿದೆ. ಪ್ರತಿಯೊಬ್ಬರು ಗೌರವದಿಂದ ಜೀವಿಸುವ ಹಕ್ಕು ಹೊಂದಿದ್ದು, ಎಲ್ಲರು ಪರಸ್ಪರ ಗೌರವದಿಂದ ಕಾಣಬೇಕು ಎಂದರು.

ದೇಶದ ಯುವಜನರು ಬೆನ್ನೆಲುಬು ಇದ್ದಂತೆ. ಮಕ್ಕಳು ಆಸ್ತಿ, ಅವರಿಗೆ ಉತ್ತಮ ಮಾರ್ಗದರ್ಶನ ಮೂಲಕ ಪ್ರಜ್ಞಾವಂತರನ್ನಾಗಿ ಮಾಡುವುದು ಶಾಲಾ ಶಿಕ್ಷಕರು, ಪೋಷಕರ ಕರ್ತವ್ಯವಾಗಿದೆ. ಮತ್ತು ಪ್ರಜೆಗಳು ಕಾನೂನಿನ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು. ದೇಶದ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಲು ಅವರನ್ನು ಬೆಳೆಸಬೇಕು. ದೇಶದ ಪ್ರಗತಿಗೆ ಪಾಲುದಾರರಾಬೇಕು ಎಂದು ಹೇಳಿದರು.ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ವರ್ಗ ಎಲ್ಲರೂ ಒಡಗೂಡು ನೊಂದವರಿಗೆ ಸಕಾಲದಲ್ಲಿ ನ್ಯಾಯ ದೊರಕಿಸಿಕೊಡುವ ಕರ್ತವ್ಯ ನಮ್ಮ ಮೇಲಿದೆ. ಬಡವರ, ನೊಂದವರ, ಅಸಹಾಯಕರಿಗೆ ಕಾನೂನು ನೆರವಿನಡಿ ಸಹಾಯ ಮಾಡುವ ಧರ್ಮ ಅಳವಡಿಸಿಕೊಳ್ಳೋಣ. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ, ದೇಶ ಕಟ್ಟುವ ಶಿಲ್ಪಿಗಳಾಗೋಣ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪಿ.ರಾಮಬ್ರಹ್ಮಂ, 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಜಿ.ಪ್ರಮೋದ, ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಾಘವೇಂದ್ರ ಗೌಡ.ಬಿ.ಜಿ., 3ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ.ಪಿ.ಕುಮಾರ ಸ್ವಾಮಿ, 4ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಾಸುದೇವ ರಾಧಕಾಂತ್ ಗುಡಿ, ಪ್ರಿನ್ಸಿಪಲ್ ಕೌಟುಂಬಿಕ ನ್ಯಾಯಾಧೀಶ ವೆಂಕಟೇಶ್, ಪ್ರಿನ್ಸಿಪಲ್ ಹಿರಿಯ ಸಿವಿಲ್ ನ್ಯಾಯಾಧೀಶ ಇಬ್ರಾಹಿಂ ಮುಜಾವರ್, ಒಂದನೇ ಅಪರ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ನಸ್ರತ್ ಮುಖ್ತಾರ್ ಅಹ್ಮದ್ ಖಾನ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್.ಎನ್.ಹೊಸಮನೆ, ಪ್ರಿನ್ಸಿಪಲ್ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ನಾಗೇಶ್ ನಾಯ್ಕ, 1ನೇ ಅಪರ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರಾದ ಸಿದ್ದಲಿಂಗಯ್ಯ ಗಂಗಾಧರ ಮಠ, 2ನೇ ಅಪರ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರಾದ ವಿನುತಾ ಬಿ.ಎಸ್., 3ನೇ ಅಪರ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರಾದ ಮುದುಕಪ್ಪ ಒಡನ್ ಸೇರಿದಂತೆ ಜಿಲ್ಲಾ ನ್ಯಾಯಾಲಯದ ಅಧಿಕಾರಿ-ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.