ಕೊಡಗಿನಲ್ಲಿ ಬಿಡುವು ನೀಡಿ ಸುರಿದ ಮಳೆ: ಪ್ರವಾಹ ಇಳಿಮುಖ

| Published : Aug 02 2024, 12:51 AM IST

ಸಾರಾಂಶ

ಕೊಡಗು ಜಿಲ್ಲೆಯಾದ್ಯಂತ ಗುರುವಾರ ಬಿಡುವು ನೀಡಿ ಮಳೆ ಸುರಿದಿದೆ. ಮಳೆ ಕೊಂಚ ಇಳಿಮುಖವಾದ ಹಿನ್ನೆಲೆಯಲ್ಲಿ ಭಾಗಮಂಡಲದಲ್ಲಿ ಕೂಡ ಪ್ರವಾಹ ಕಡಿಮೆಯಾಗಿದೆ. ಕುಶಾಲನಗರ ಸಾಯಿ ಬಡಾವಣೆಯಲ್ಲಿ ಪ್ರವಾಹ ಇಳಿಮುಖವಾಗಿದೆ. ನಾಪೋಕ್ಲಿನ ಚೆರಿಯಪರಂಬುವಿನಲ್ಲಿ ಕೂಡ ಪ್ರವಾಹ ಇಳಿದಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಾದ್ಯಂತ ಗುರುವಾರ ಬಿಡುವು ನೀಡಿ ಮಳೆ ಸುರಿದಿದೆ. ಮಳೆ ಕೊಂಚ ಇಳಿಮುಖವಾದ ಹಿನ್ನೆಲೆಯಲ್ಲಿ ಭಾಗಮಂಡಲದಲ್ಲಿ ಕೂಡ ಪ್ರವಾಹ ಕಡಿಮೆಯಾಗಿದೆ. ಕುಶಾಲನಗರ ಸಾಯಿ ಬಡಾವಣೆಯಲ್ಲಿ ಪ್ರವಾಹ ಇಳಿಮುಖವಾಗಿದೆ. ನಾಪೋಕ್ಲಿನ ಚೆರಿಯಪರಂಬುವಿನಲ್ಲಿ ಕೂಡ ಪ್ರವಾಹ ಇಳಿದಿದೆ.

ಕೊಡಗಿನಲ್ಲಿ ಮಳೆಯಿಂದ ಸಂಭವಿಸಿದ ಹಾನಿ ಪರಿಶೀಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಕೊಡಗು ಪ್ರವಾಸ ಹಮ್ಮಿಕೊಂಡಿದ್ದಾರೆ.

ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ನಿರಂತರ ಬರೆ ಕುಸಿತ ಉಂಟಾಗುತ್ತಿದೆ. ಗುಡ್ಡ ಕುಸಿದಂತೆಲ್ಲಾ ಉಬ್ಬುತ್ತಿದೆ, ಮಡಿಕೇರಿ ತಾಲೂಕಿನ ಕರ್ತೋಜಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಉಬ್ಬಿದೆ. ಹೆದ್ದಾರಿ ಉಬ್ಬಿ ರಸ್ತೆಯ ಒಂದು ಭಾಗದಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಮಾಡಲಾಗುತ್ತಿದೆ.

ಮತ್ತೊಂದು ಭಾಗದಲ್ಲಿ ಗುಡ್ಡದ ಮಣ್ಣು ಶೇಖರಣೆ ಆಗುತ್ತಿದೆ. ನಿರಂತರ ಗುಡ್ಡ ಕುಸಿದಂತೆಲ್ಲಾ ರಸ್ತೆಯ ಒಂದು ಭಾಗ ಸಂಪೂರ್ಣ ಬಂದ್ ಆಗುತ್ತಿದೆ. 2018 ರ ಭೂಕುಸಿತದಲ್ಲಿ ಹಲವೆಡೆ ಹಾಳಾಗಿತ್ತು. ಮಳೆ ತೀವ್ರವಾದಲ್ಲಿ ಪೂರ್ಣ ಹೆದ್ದಾರಿಯೇ ಬಂದ್ ಆಗುವ ಸಾಧ್ಯತೆಯಿದೆ.

ಮಳೆಯಿಂದಾಗಿ ವಿರಾಜಪೇಟೆ ತಾಲೂಕಿನ ಕೊಟ್ಟೋಳಿ ಗ್ರಾಮದ ನಬೀಸ ಅವರ ಮನೆ ಹಾನಿಯಾಗಿದೆ. ಬಾಳುಗೋಡಿನಲ್ಲಿರುವ ಮಾಚೆಟ್ಟಿರ ಐನ್ ಮನೆ ಗೋಡೆ ಕುಸಿದಿದೆ. ಸಂಪಾಜೆ ಗ್ರಾ.ಪಂ. ವ್ಯಾಪ್ತಿಯ ಚಡಾವು-ಮಂಗಲಪಾರೆ ರಸ್ತೆಯಲ್ಲಿ ಬರೆ ಕುಸಿದಿದ್ದು, ತೆರವುಗೊಳಿಸಲಾಯಿತು.

ಮಳೆಯಿಂದಾಗಿ ಅಮ್ಮತ್ತಿ ಹೋಬಳಿಯ ಹಚ್ಚಿನಾಡು ಗ್ರಾಮದ ನಿವಾಸಿ ಜ್ಯೋತಿ ಅವರ ನಾಣಯ್ಯ ಅವರ ಹಸು ಮೃತಪಟ್ಟಿದೆ. ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಪಳಂಗಪ್ಪ ಅವರ ಹಸುವೊಂದು ಮಳೆಯಿಂದ ಮೃತಪಟ್ಟಿದೆ.

ಅರಣ್ಯ ಇಲಾಖೆ ಎಡವಟ್ಟೇ ಬೆಟ್ಟಕುಸಿಯುವುದಕ್ಕೆ ಕಾರಣವೆಂದು

ತಲಕಾವೇರಿ ದೇವಸ್ಥಾನದ ತಕ್ಕಮುಖ್ಯಸ್ಥ ಕೋಡಿ ಮೋಟಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಲಕಾವೇರಿಯ ಬೆಟ್ಟಗಳ ಮೇಲೆ ದೊಡ್ಡ ಗಾತ್ರದ ಹತ್ತಾರು ಇಂಗು ಗುಂಡಿಗಳನ್ನು ತೆಗೆಯಲಾಗಿತ್ತು. ಇದೇ ಬೆಟ್ಟ ಕುಸಿಯಲು ಮುಖ್ಯ ಕಾರಣವಾಗಿತ್ತು. ಬೆಟ್ಟ ಕುಸಿದು ತಲಕಾವೇರಿ ಅರ್ಚಕ ನಾರಾಯಣ ಆಚಾರ್ ಮತ್ತು ಅವರ ಕುಟುಂಬ ನಾಶವಾಗಿತ್ತು. ಇಂದಿಗೂ ಬೆಟ್ಟದಲ್ಲಿ ಸಾಕಷ್ಟು ಜಲ ಹರಿಯುತ್ತಿದೆ ಎಂದು ಅವರು ಹೇಳಿದ್ದಾರೆ.

ಮತ್ತೆ ಬೆಟ್ಟ ಕುಸಿದರೆ ಅಚ್ಚರಿ ಏನಿಲ್ಲ. ಬೆಟ್ಟ ಕುಸಿಯದಂತೆ ಇದುವರೆಗೆ ಯಾವುದೇ ಮುಂಜಾಗ್ರತಾ ಕ್ರಮವಾಗಿಲ್ಲ. ತಡೆಗೋಡೆ ನಿರ್ಮಿಸಿಲ್ಲ ಅಥವಾ ಯಾವುದೇ ಹುಲ್ಲು ಬೆಳೆಸಲಿಲ್ಲ. ತಲಕಾವೇರಿಗೆ ನಿತ್ಯ ನೂರಾರು ಭಕ್ತರು ಬರುತ್ತಾರೆ.

ತೀರ್ಥೋದ್ಭವದಂತ ವಿಶೇಷ ಸಂದರ್ಭ ಲಕ್ಷಗಟ್ಟಲೆ ಭಕ್ತರು ಬರುತ್ತಾರೆ. ಆದರೂ ಯಾವುದೇ ಸುರಕ್ಷತೆ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.