ಸಾರಾಂಶ
ರೈತರಿಗೆ ಯೋಜನೆಗಳ ಕುರಿತು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ಬೀದರ್‌ನ ತಾ.ಪಂ ಸಭಾಂಗಣದಲ್ಲಿ ಬುಧವಾರ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಕೆಡಿಪಿ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಬೀದರ್
ಕೃಷಿ ಮತ್ತು ತೋಟಗಾರಿಕೆಯಿಂದ ರೈತರಿಗೆ ಸಾಕಷ್ಟು ಯೋಜನೆಗಳಿವೆ. ಈ ಬಗ್ಗೆ ರೈತರಿಗೆ ಮೊದಲು ಮಾಹಿತಿ ಕೊಡಬೇಕು. ರೈತರಿಗೆ ಮಾಹಿತಿ ಕೊರತೆಯಿಂದ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿಲ್ಲ. ಈ ಕುರಿತು ಹೆಚ್ಚಿನ ನಿಗಾವಹಿಸಿ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅಧಿಕಾರಿಗಳಿಗೆ ಸೂಚಿಸಿದರು.ನಗರದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರ ಒಂದು ಬೆಳೆ ಬೆಳೆಯುವುದಿಲ್ಲ. ವರ್ಷಕ್ಕೆ ಮೂರು ಬೆಳೆ ರೈತರು ಬೆಳೆಯುತ್ತಾರೆ. ಪಾಣಿಯಲ್ಲಿ ಬೆಳೆಯನ್ನು ತಿಳಿಸೋಕೆ ಆಗಲ್ಲ. ಮಾಹಿತಿ ತರಿಸಿಕೊಂಡು ಅಂತಹ ರೈತರಿಗೆ ನೀವು ಗಮನ ಕೊಟ್ಟು ಅವಕಾಶ ಕಲ್ಪಿಸಬೇಕು ಎಂದರು.
ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಜೆಜೆಎಂ ಕಾಮಗಾರಿ ಹಲವು ಕಡೆ ಮಂದಗತಿಯಲ್ಲಿ ಸಾಗುತ್ತಿದೆ ಮತ್ತು ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆ ಅಗೆದು ಹಾಗೆ ಬಿಟ್ಟಿದ್ದಾರೆ. ಸಂಚಾರಕ್ಕೆ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.ಕಂದಾಯ ಇಲಾಖೆ ಅಧಿಕಾರಿಗಳು ಜಮೀನುಗಳ ಫಾರಂ ನಂ.10, ಪಹಣಿ ವಿಂಗಡಣೆ ಕಾರ್ಯಗಳು ಪರಿಶೀಲಿಸಿ ಶೀಘ್ರ ಪೂರ್ಣಗೊಳಿಸಬೇಕು. ಪೊಲೀಸ್ ಅಧಿಕಾರಿಗಳು ಅಪಘಾತ ತಡೆಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕು ಜನರು ಸಹ ಸಹಕಾರ ನೀಡಬೇಕು. ಶಿಥಿಲಗೊಂಡ ಶಾಲಾ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸಬೇಡಿ ಎಂದು ಸೂಚಿಸಿದರು.
ಎಂಎಲ್ಸಿ ಅರವಿಂದಕುಮಾರ ಅರಳಿ ಮಾತನಾಡಿ, ಬೀದರ್ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದರು.ಈ ಸಂದರ್ಭದಲ್ಲಿ ತಾ.ಪಂ ಅಧಿಕಾರಿ ಕಿರಣ್ ಪಾಟೀಲ್ ಇದ್ದರು.