ಸ್ಮಶಾನ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿ

| Published : May 16 2025, 02:06 AM IST

ಸಾರಾಂಶ

ಚಳ್ಳಕೆರೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಮತದಾರ 3ನೇ ಬಾರಿಗೆ ನನಗೆ ವಿಜಯಮಾಲೆ ಹಾಕಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾನೆ. ಅಭಿವೃದ್ಧಿಪರ ಚಿಂತನೆ ಜತೆಗೆ ಹಲವಾರು ಶಾಶ್ವತ ಕಾರ್ಯಗಳನ್ನು ಸಹ ಮಾಡುವ ಮೂಲಕ ಈ ಕ್ಷೇತ್ರದ ಮತದಾರರ ಋಣ ತೀರಿಸಬೇಕಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಗುರುವಾರ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಕಳೆದ ಸೋಮವಾರ ಮೊಟಕುಗೊಳಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನನ್ನ ಕ್ಷೇತ್ರದ ಯಾವುದೇ ಗ್ರಾಮದಲ್ಲಿ ಮೃತ ವ್ಯಕ್ತಿಯ ಶವಸಂಸ್ಕಾರಕ್ಕೆ ಸ್ಮಶಾನ ಸೇರಿದಂತೆ ಯಾವುದೇ ತೊಂದರೆಯಾಗಬಾರದು. ಸತ್ತ ವ್ಯಕ್ತಿ ನೆಮ್ಮದಿಯಿಂದ ಬದುಕಿನ ಅಂತ್ಯವನ್ನು ಕಾಣಬೇಕು. ಆದ್ದರಿಂದ ಕ್ಷೇತ್ರದ ನಿಗದಿಪಡಿಸಿದ ಎಲ್ಲಾ ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯ ನೀಡುವ ಚಿಂತನೆಗೆ ಅಧಿಕಾರಿ ವರ್ಗ ಸಕರಾತ್ಮಕವಾಗಿ ಸ್ಪಂದಿಸಬೇಕು ಎಂದು ಹೇಳಿದರು.

ಅಧಿಕಾರಿಗಳ ಮೇಲೆ ಅಂಕುಶ ಹಾಕಲು ಹಾಗೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಕುಮಾರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ತಿಮ್ಮಪ್ಪನವರು ಸಹ ಸಭೆಗೆ ಕರೆಸಿ ತಮ್ಮ ಅಂತರಾಳದ ಸಮಸ್ಯೆಗಳನ್ನು ಬಿಚ್ಚಿಟ್ಟರಲ್ಲದೆ, ಅಧಿಕಾರಿವರ್ಗವೂ ಸಹ ಕಾಯೋನ್ಮುಖವಾಗುವಂತೆ ಸೂಚಿಸಿದರು.

2013 ರಿಂದ 18 ರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ, ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಸಹಕಾರದಿಂದ ಹೆಚ್ಚಿನ ಅನುದಾನವನ್ನು ಪಡೆಯಲಾಗಿತ್ತು. ಪ್ರಸ್ತುತ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಹ ಕ್ಷೇತ್ರದ ಅಭಿವೃದ್ಧಿಗೆ ಆರ್ಥಿಕ ನೆರವು ಒದಗಿಸುವ ನಿಟ್ಟಿನಲ್ಲಿ ಸಕ್ರಿಯವಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕಾರ್ಯಗರವಾಗದೇ ಉಳಿದಿರುವ ಮಿನಿ ವಿಧಾನಸೌಧ, ಡಾ.ಬಿ.ಆರ್.ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಯಾದವ ಭವನ, ಆದಿಜಾಂಬವ ಭವನ, ಬೋವಿ ಭವನ, ಗಂಗಾಕಲ್ಯಾಣ ಕಾರ್ಯಯೋಜನೆ ಮುಂತಾದ ಕಾರ್ಯಕ್ರಮಗಳ ಉದ್ಘಾಟನೆಗೆ ಜೂನ್‌ನಲ್ಲಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರನ್ನು ಆಹ್ವಾನಿಸಲಾಗುವುದು. ಮೇ.31ರೊಳಗೆ ಎಲ್ಲಾ ಕಾಮಗಾರಿಗಳನ್ನು ಅಧಿಕಾರಿ ವರ್ಗ ಪೂರೈಸಿ ಸಿದ್ದಪಡಿಸಿದಬೇಕು. ಕಾಮಗಾರಿ ಪೂರ್ಣಗೊಂಡ ನಂತರ ನಿಮ್ಮೊಂದಿಗೆ ಮತ್ತೊಮ್ಮೆ ಚರ್ಚಿಸಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗುವುದು. ಇದೆ 21ರಂದು ಪ್ರಸ್ತುತ ಸರ್ಕಾರ 2ನೇ ವರ್ಷದ ಸಾಧನಾ ಸಮಾವೇಶ ಹೊಸಪೇಟೆಯಲ್ಲಿ ನಡೆಯಲಿದ್ದು ಎಲ್ಲಾ ಫಲಾನುಭವಿಗಳು ಹಾಗೂ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಕುಮಾರ್ ಮಾತನಾಡಿ, ಜಿಲ್ಲಾ ಆಡಳಿತದೊಂದಿಗೆ ಈಗಾಗಲೇ ಕ್ಷೇತ್ರದಿಂದ ಅನೇಕ ಗ್ರಾಮಗಳ ಸ್ಮಶಾನಕ್ಕೆ ಅವಶ್ಯವಿರುವ ಭೂಮಿಯನ್ನು ಸರ್ಕಾರ ಮಂಜೂರು ಮಾಡಿದೆ. ಆದರೆ, ಕೆಲವು ವ್ಯಕ್ತಿಗಳು ಮಂಜೂರಾದ ಸರ್ಕಾರದ ಭೂಮಿಯನ್ನು ಕಾನೂನು ವ್ಯಾಪ್ತಿ ಮೀರಿ ಬಳಸಿಕೊಳ್ಳುತ್ತಿರುವುದು ಕಂಡುಬಂದಿದೆ. ತಹಸೀಲ್ದಾರ್ ಕಂದಾಯಾಧಿಕಾರಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿ ತೆರವು ಗೊಳಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಪಂ ಉಪ ಕಾರ್ಯದರ್ಶಿ ತಿಮ್ಮಪ್ಪ ಮಾತನಾಡಿ, ಕುಡಿಯುವ ನೀರೂ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾ ಪಂಚಾಯಿತಿ ಆಡಳಿತ ಸಿದ್ಧವಿದೆ. ಈಗಾಗಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೂಚನೆ ನೀಡಿ ಎನ್‌ಆರ್‌ಇಜಿ ಕಾಮಗಾರಿಯೂ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ನೀಡಿದ್ದಾರೆ. ಯಾವುದೇ ಸಮಸ್ಯೆ ಇದ್ದರೂ ಇಒ ಮೂಲಕ ಗಮನಕ್ಕೆ ತರಬೇಕು ಎಂದು ಹೇಳಿದರು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಮಾಜಿ ಅಧ್ಯಕ್ಷ ಶ್ರೀಕಂಠಪ್ಪ, ಅಧ್ಯಕ್ಷ ತಿಪ್ಪೇಸ್ವಾಮಿ, ನಗರದ ಹೊರ ವಲಯದ ವಾರ್ಡ್‌ಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಎರಡ್ಮೂರು ಗಂಟೆ ವಿದ್ಯುತ್ ಕೈಕೊಡುವುದರಿಂದ ಆತಂಕಕ್ಕೆ ಒಳಗಾಗಿದ್ಧಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಶಾಸಕರು, ಬೆಸ್ಕಾಂ ಅಧಿಕಾರಿ ಜಿ.ಶಿವಪ್ರಸಾದ್‌ಗೆ ಸಮಸ್ಯೆ ಕೂಡಲೇ ಬಗೆಹರಿಸುವ ಸೂಚನೆ ನೀಡಿದರು. ಸಂಜೆ ವೇಳೆ ಓವರ್ ಲೋಡ್‌ನಿಂದ ಎರಡು ಗಂಟೆಗಳ ಕಾಲ ವಿದ್ಯುತ್ ನಿಯಂತ್ರಣವನ್ನು ವಿಭಾಗಮಟ್ಟದಲ್ಲಿ ಇಲಾಖೆ ಕೈಗೊಳ್ಳುತ್ತಿದೆ ಎಂದರು.

ಚಳ್ಳಕೆರೆ ತಹಸೀಲ್ದಾರ್ ರೇಹಾನ್‌ಪಾಷ, ಚಿತ್ರದುರ್ಗ ತಹಸೀಲ್ದಾರ್ ಬಿ.ಎಂ.ಗೋವಿಂದರಾಜು, ಗ್ರೇಡ್-2 ತಹಸೀಲ್ದಾರ್ ಜಿ.ಆರ್.ಮುನಿವೆಂಕಟಪ್ಪ, ಇಒ ಎಚ್.ಶಶಿಧರ, ಚಿತ್ರದುರ್ಗ ಇಒ ರವಿಕುಮಾರ್, ನಗರಸಭೆ ಪೌರಾಯುಕ್ತ ಜಗರೆಡ್ಡಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಕೆಡಿಪಿ ಸದಸ್ಯರಾದ ಅಂಗಡಿ ರಮೇಶ್, ಚೌಳೂರು ಬಸವರಾಜು, ಸುರೇಶ್‌ಕುಮಾರ್, ಎಸ್.ಆರ್.ನೇತ್ರಾವತಿ, ಜಾಕೀರ್‌ ಹುಸೇನ್, ಎಸ್.ಬಿ.ವಿಶ್ವನಾಥರೆಡ್ಡಿ ಮುಂತಾದವರು ಭಾಗವಹಿಸಿದ್ದರು.