ಚಿಗಟೇರಿ ಆಸ್ಪತ್ರೆ ಹೈಟೆಕ್‌ ಅಭಿವೃದ್ಧಿಗೆ ಶೀಘ್ರ ಸ್ಪಂದಿಸಿ

| Published : Mar 29 2025, 12:34 AM IST

ಸಾರಾಂಶ

ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಹೈಟೆಕ್ ಸ್ಪರ್ಶ ನೀಡಿ, ಆಸ್ಪತ್ರೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಆ ಮೂಲಕ ಅಭಿವೃದ್ಧಿಗೆ ಸಹಕಾರ ನೀಡುವಂತೆ ವಿಧಾನಸೌಧದಲ್ಲಿ ಆರೋಗ್ಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಮನವಿ ಮಾಡಿದ್ದಾರೆ.

- ವಿಧಾನಸೌಧದಲ್ಲಿ ಆರೋಗ್ಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್‌ ಮನವಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಹೈಟೆಕ್ ಸ್ಪರ್ಶ ನೀಡಿ, ಆಸ್ಪತ್ರೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಆ ಮೂಲಕ ಅಭಿವೃದ್ಧಿಗೆ ಸಹಕಾರ ನೀಡುವಂತೆ ವಿಧಾನಸೌಧದಲ್ಲಿ ಆರೋಗ್ಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಮನವಿ ಮಾಡಿದರು.

ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಪ್ರಸ್ತುತ ಸ್ಥಿತಿಗತಿಗಳನ್ನು ಎಳೆಎಳೆಯಾಗಿ ಸಚಿವರು ಬಿಚ್ಚಿಟ್ಟರು. ಜಿಲ್ಲಾಸ್ಪತ್ರೆ ಮೇಲ್ಚಾವಣಿ ಬೀಳುವ ಹಂತದಲ್ಲಿದೆ. ಎಷ್ಟೇ ರಿಪೇರಿ ಕಾರ್ಯ ನಡೆಸಿದರೂ ಒಂದಲ್ಲ ಒಂದು ಕಡೆ ಸಮಸ್ಯೆ ಉಂಟಾಗುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ತೀವ್ರ ತೊಂದರೆಗಳು ಉಂಟಾಗುತ್ತಿವೆ. ಈ ಹಿನ್ನಲೆ ಜಿಲ್ಲಾಸ್ಪತ್ರೆಯನ್ನು ನವೀನ ಮಾದರಿಯಲ್ಲಿ ಹೈಟೆಕ್ ಸ್ಪರ್ಶದೊಂದಿಗೆ ನಿರ್ಮಿಸಬೇಕಾಗಿದೆ. ವಿಶೇಷ ಅನುದಾನ ಬಿಡುಗಡೆ ಮೂಲಕ ಜಿಲ್ಲೆಯ ಸಾರ್ವಜನಿಕರ ಆರೋಗ್ಯ ಕಾಪಾಡಲು ಸಹಕರಿಸುವಂತೆ ಕೋರಿದರು.

ಅಲ್ಲದೇ ದಾವಣಗೆರೆ ಪಾಲಿಕೆ ವ್ಯಾಪ್ತಿಗೆ ಒಳಪಡುವ ಹಳೇ ಭಾಗದಲ್ಲಿನ ಹೆರಿಗೆ ಆಸ್ಪತ್ರೆಯಲ್ಲಿಯೂ ಅನೇಕ ಸಮಸ್ಯೆಗಳಿವೆ. ಕಿರಿದಾದ ಹಾಗೂ ಸ್ಥಳಾವಕಾಶ ಇಲ್ಲದ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಗಳಿವೆ, ವೈದ್ಯರು ಸಿಬ್ಬಂದಿ ಸಮಸ್ಯೆ ಹೆಚ್ಚಾಗಿವೆ. 130 ಹಾಸಿಗೆಗಳ ಸಾಮರ್ಥವಿರುವ ಇಲ್ಲಿನ ಆಸ್ಪತ್ರೆಯ ಸಮೀಪ 3 ಎಕರೆ ಜಮೀನು ಪಡೆದು 700 ರಿಂದ 800 ಸಾಮರ್ಥ್ಯದ ಹಾಸಿಗೆಯೊಂದಿಗೆ ನೂತನವಾದ ಮಹಿಳೆಯರ ಹಾಗೂ ಮಕ್ಕಳ ಆಸ್ಪತ್ರೆ ನಿರ್ಮಿಸಬೇಕಿದೆ. ಇದರಿಂದ ಅನೇಕರಿಗೆ ಅನುಕೂಲ ಆಗುವುದು ಎಂದು ಸಚಿವರು ಕೋರಿದರು.

ಜಿಲ್ಲಾಡಳಿತದ ವ್ಯಾಪ್ತಿಗೆ ಬರುವ ಎಲ್ಲ ತಾಲೂಕು ಆಸ್ಪತ್ರೆಗಳಿಗೂ ಹೈಟೆಕ್ ಸ್ಪರ್ಶ ನೀಡುವಂತಹ ಯೋಜನೆಗಳನ್ನು ರೂಪಿಸುವಂತೆಯೂ ಆರೋಗ್ಯ ಸಚಿವ ದಿನೇಶ ಗುಂಡೂರಾವ್‌ ಅವರಿಗೆ ಮನವಿ ಮಾಡಿದರು.

ಈ ಸಂದರ್ಭ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.

- - - -28ಕೆಡಿವಿಜಿ45.ಜೆಪಿಜಿ:

ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಜಿಲ್ಲಾಸ್ಪತ್ರೆ ನವ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಆರೋಗ್ಯ ಸಚಿವರಿಗೆ ಮನವಿ ಮಾಡಿದರು.