ಮಾತೃ ಹೃದಯದಿಂದ ಮಕ್ಕಳ ಸಮಸ್ಯೆಗೆ ಸ್ಪಂದಿಸಿ: ಡಾ.ಕೆ.ಟಿ.ತಿಪ್ಪೇಸ್ವಾಮಿ

| Published : May 23 2025, 12:27 AM IST

ಮಾತೃ ಹೃದಯದಿಂದ ಮಕ್ಕಳ ಸಮಸ್ಯೆಗೆ ಸ್ಪಂದಿಸಿ: ಡಾ.ಕೆ.ಟಿ.ತಿಪ್ಪೇಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರುಮಾತೃ ಹೃದಯದಿಂದ ಮಕ್ಕಳ ಸಮಸ್ಯೆಗೆ ಸ್ಪಂದಿಸಿ ಅವರನ್ನು ಸಮಸ್ಯೆಯಿಂದ ಮುಕ್ತರನ್ನಾಗಿಸಿ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.

ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ನಗರದ ಮಹಿಳಾ ಪೊಲೀಸ್ ಠಾಣೆಗೆ ಭೇಟಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಾತೃ ಹೃದಯದಿಂದ ಮಕ್ಕಳ ಸಮಸ್ಯೆಗೆ ಸ್ಪಂದಿಸಿ ಅವರನ್ನು ಸಮಸ್ಯೆಯಿಂದ ಮುಕ್ತರನ್ನಾಗಿಸಿ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು. ಬುಧವಾರ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ನಗರದ ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ, ಸಮಸ್ಯೆಗಳಿಂದ ಅವರನ್ನು ಮುಕ್ತರನ್ನಾಗಿಸಿ ಅನ್ಯಾಯವಾಗುವುದನ್ನು ತಡೆದು ಕಾಣೆಯಾಗುತ್ತಿರುವ ಪ್ರಕರಣಗಳನ್ನು ತಡೆಗಟ್ಟಲು ಅಧಿಕಾರಿಗಳಿಗೆ ಸೂಚಿಸಿದರು.ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಮಾತನಾಡಿ, ಪ್ರೌಢಶಾಲೆ, ಕಾಲೇಜುಗಳಲ್ಲಿ ಪೋಕ್ಸೋ ಸೇರಿದಂತೆ ಇತರೆ ಕಾಯಿದೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಹಿಳಾ ಪೊಲೀಸ್ ಅಧಿಕಾರಿಗಳು ಹಮ್ಮಿಕೊಳ್ಳಲು ಸೂಚಿಸಿದರು.

ಕಾಣೆಯಾಗುತ್ತಿರುವ ಪ್ರಕರಣಗಳನ್ನು ಸಂಗ್ರಹಿಸುವುದಲ್ಲದೆ, ಅವರ ವಿವರಗಳನ್ನು ದಾಖಲಿಸಿ ಕಾಣೆಯಾಗಲು ಕಾರಣವನ್ನು ತಿಳಿದು ಮುಂದೆ ಅಂತಹ ಪ್ರಕರಣ ದಾಖಲಾಗದಂತೆ ಎಚ್ಚರ ವಹಿಸಲು ನಿರ್ದೇಶನ ನೀಡಿದ ಅವರು, ತೆರೆದ ಮನೆ ಕಾರ್ಯ ಕ್ರಮ ಕಡಿಮೆಯಾಗುತ್ತಿದ್ದು, ಇತ್ತೀಚೆಗೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿರುವುದರಿಂದ ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆ ಮುಖ್ಯಸ್ಥರ ಜೊತೆ ಕಡ್ಡಾಯವಾಗಿ ಸಭೆ ನಡೆಸಿ ದೌರ್ಜನ್ಯ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚು ದಾಖಲಾಗಿರುವುದರಿಂದ ಮಹಿಳಾ ಪೊಲೀಸ್ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ಅವರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಪೊಲೀಸ್ ಠಾಣೆಗೆ ಮಕ್ಕಳು ತಮ್ಮ ಸಮಸ್ಯೆ ಹೇಳಲು ಬರುವ ಸಮಯದಲ್ಲಿ ಅವರಿಗೆ ಅಧಿಕಾರಿಗಳು ಸ್ಪಂದಿಸಿ ಅವರ ಸಮಸ್ಯೆಯನ್ನು ನಿಧಾನಗತಿಯಲ್ಲಿ ಆಲಿಸಬೇಕು, ಅದಲ್ಲದೆ ಅವರ ಮೇಲೆ ಯಾವುದೇ ರೀತಿ ದಬ್ಬಾಳಿಕೆ ಮಾಡುವುದಾಗಲಿ, ಅವರನ್ನು ಭಯಪಡಿಸಿ ಸತ್ಯವನ್ನು ಮುಚ್ಚಿಡು ವುದಾಗಲಿ ಮಾಡಬಾರದು. ಇಂತಹ ದೂರು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ನಂತರ ತಾಲೂಕಿನ ಅಲ್ಲಂಪುರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಲೋಪದೋಷಗಳನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿ ಅವುಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಿದರು.

21 ಕೆಸಿಕೆಎಂ 5ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ, ಶಶಿಧರ್ ಕೋಸಂಬೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಮಕ್ಕಳ ಆರೈಕೆ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.