ಸಾರಾಂಶ
ಸಕಾಲದಲ್ಲಿ ಅರ್ಜಿ ಸಲ್ಲಿಸಿದ ಸಾರ್ವಜನಿಕರಿಗೆ ಸಕಾಲಕ್ಕೆ ಸ್ಪಂದಿಸಿಲ್ಲ. ಅದಕ್ಕಾಗಿ ಅವರು ಮೇಲ್ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಅದರ ಬಗ್ಗೆ ತನಿಖೆ ನಡೆದಿದೆ. ಸಮಸ್ಯೆಗಳ ಬಗ್ಗೆ ಮೊದಲು ತಿಳಿದುಕೊಂಡು ಅವರಿಗೆ ಸ್ಪಂದಿಸಿ.
ನವಲಗುಂದ:
ನಿಗದಿತ ಅವಧಿಯೊಳಗೆ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಸಂಬಂಧಪಟ್ಟ ಕಚೇರಿಗಳಲ್ಲಿ ಸಾರ್ವಜನಿಕರ ಅರ್ಜಿಗಳು ವಿಲೇವಾರಿಯಾಗದೇ ತಟಸ್ಥವಾಗಿದ್ದರೆ ಅದಕ್ಕೆ ಅಧಿಕಾರಿಗಳೇ ಜವಾಬ್ದಾರರು ಎಂದು ಲೋಕಾಯುಕ್ತ ಡಿವೈಎಸ್‌ಪಿ ವೆಂಕನಗೌಡ ಪಾಟೀಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ಸಾರ್ವಜನಿಕರ ಕುಂದು-ಕೊರತೆಗಳ ಸಭೆಯಲ್ಲಿ ಪಾಲ್ಗೊಂಡು ಅಹವಾಲು ಆಲಿಸಿ ಮಾತನಾಡಿದರು.
ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ನಮ್ಮ ಇಲಾಖೆಗೆ ಮಾಹಿತಿ ಒದಗಿಸಬೇಕು. ನಿಮ್ಮ ಕಚೇರಿಗಳಿಗೆ ದಿಢೀರನೆ ಭೇಟಿ ನೀಡಿದಾಗ ಅಲ್ಲಿಯ ನ್ಯೂನತೆಗಳು ಕಂಡುಬಂದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳಲಾಗುವುದು. ಸಕಾಲದಲ್ಲಿ ಅರ್ಜಿ ಸಲ್ಲಿಸಿದ ಸಾರ್ವಜನಿಕರಿಗೆ ಸಕಾಲಕ್ಕೆ ಸ್ಪಂದಿಸಿಲ್ಲ. ಅದಕ್ಕಾಗಿ ಅವರು ಮೇಲ್ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಅದರ ಬಗ್ಗೆ ತನಿಖೆ ನಡೆದಿದೆ. ಸಮಸ್ಯೆಗಳ ಬಗ್ಗೆ ಮೊದಲು ತಿಳಿದುಕೊಂಡು ಅವರಿಗೆ ಸ್ಪಂದಿಸಿ. ಇಂತಹ ಸಮಸ್ಯೆಗಳು ಪದೇ ಪದೇ ಬರದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.ಈ ವೇಳೆ ತಹಸೀಲ್ದಾರ್ ಸುಧೀರ ಸಾಹುಕಾರ, ಇಒ ಭಾಗ್ಯಶ್ರೀ ಜಾಗೀರದಾರ, ರವೀಂದ್ರ ಕುರುಬಗಟ್ಟಿ, ಸಂತೋಷ ಲಕ್ಕಮ್ಮನವರ, ಶ್ರೀಶೈಲ ಬೀಳಗಿ, ಸಂಜು ಗಾಳಿ, ರಮೇಶ ಪೂಜಾರ ಸೇರಿದಂತೆ ಹಲವರಿದ್ದರು.