ಕಾಡುಪ್ರಾಣಿ ಹಾವಳಿ, ಬೆಳೆ ಪರಿಹಾರ ಸಮಸ್ಯೆಗೆ ಸ್ಪಂದಿಸಿ

| Published : Jul 07 2025, 11:48 PM IST

ಸಾರಾಂಶ

ಕಾಡು ಪ್ರಾಣಿಗಳ ಹಾವಳಿ ಸಂಬಂಧ ಜನರಿಂದ ಬರುವ ದೂರುಗಳು, ಬೆಳೆಹಾನಿ ಪರಿಹಾರದಂತಹ ಸಮಸ್ಯೆಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕೆಂದು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಕಾಡು ಪ್ರಾಣಿಗಳ ಹಾವಳಿ ಸಂಬಂಧ ಜನರಿಂದ ಬರುವ ದೂರುಗಳು, ಬೆಳೆಹಾನಿ ಪರಿಹಾರದಂತಹ ಸಮಸ್ಯೆಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕೆಂದು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅರಣ್ಯ ಇಲಾಖೆ ಸಂಬಂಧ ಸಾರ್ವಜನಿಕರಿಂದ ಹೆಚ್ಚು ದೂರುಗಳು ಬರುತ್ತಿವೆ. ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ಗ್ರಾಮಸ್ಥರಿಂದ ಅರಣ್ಯ ಇಲಾಖೆಗೆ ಮಾಹಿತಿ ಬರುತ್ತಿದೆ. ಇಂತಹ ಸಂದರ್ಭಗಳಲ್ಲಿ ನಿರ್ಲಕ್ಷ್ಯ ವಹಿಸದೇ ಅರಣ್ಯ ಅಧಿಕಾರಿಗಳು ಕೂಡಲೇ ಧಾವಿಸಬೇಕು. ಕಾಡು ಪ್ರಾಣಿಗಳಿಂದ ನಾಶವಾಗುವ ಬೆಳೆಗೆ ಪರಿಹಾರ ನೀಡಲು ಶೀಘ್ರ ಕ್ರಮ ವಹಿಸಬೇಕು ಎಂದರು.

ರೈತ ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಈಡೇರಿಸಲು ಹಾಗೂ ಸಮಸ್ಯೆ ಪರಿಹರಿಸುವ ಸಂಬಂಧ ಸಲ್ಲಿಸಲಾಗಿರುವ ಮನವಿ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು, ಬಾಳೆ ಬೆಳೆಗಾರರಿಗೆ ಯಾವುದೇ ತಾರತಮ್ಯವಾಗದಂತೆ ಉತ್ತಮ ದರ ಸಿಗಬೇಕು. ಈ ನಿಟ್ಟಿನಲ್ಲಿ ಎಪಿಎಂಸಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಭೆ ಕರೆದು ಸಮಸ್ಯೆ ಇತ್ಯರ್ಥ ಮಾಡಬೇಕೆಂದು ನಿರ್ದೇಶನ ನೀಡಿದರು.

ಹೋಟೆಲ್, ಬೇಕರಿ, ರೆಸ್ಟೋರೆಂಟ್ ಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳದೆ ಇರುವ ಬಗ್ಗೆ ದೂರು ಬಂದಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ವ್ಯಾಪಕ ಭೇಟಿ ನೀಡಿ ಪರಿಶೀಲಿಸಬೇಕು. ಶುದ್ದತೆ, ನೈರ್ಮಲ್ಯ ಇಲ್ಲದಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದರು.

ಆರೋಗ್ಯ ಸೇವೆ ಎಲ್ಲ ಜನರಿಗೂ ಉತ್ತಮವಾಗಿ ತಲುಪಬೇಕು. ಹಾಡಿಗಳಿಗೆ ವೈದ್ಯರ ತಂಡವೇ ಭೇಟಿ ನೀಡಿ ಆರೋಗ್ಯ ತಪಾಸಣೆ, ಚಿಕಿತ್ಸೆಯಂತಹ ಔಷದೋಪಾಚಾರಗಳನ್ನು ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ವಿ. ವೆಂಕಟೇಶ್ ಮಾತನಾಡಿ, ಆಸ್ಪತ್ರೆಗಳಲ್ಲೇ ಸುರಕ್ಷಿತವಾಗಿ ಹೆರಿಗೆ ಆದರೆ ತಾಯಿ ಮಗು ಆರೋಗ್ಯವಾಗಿರುತ್ತಾರೆ. ಮನೆಗಳಲ್ಲಿ ಹೆರಿಗೆ ಪ್ರಕರಣಗಳು ಆಗದಂತೆ ಮನವೊಲಿಸಬೇಕು. ತಾಯಿ ಮಕ್ಕಳ ಶಿಶು ಮರಣ ಸಂಖ್ಯೆ ತಗ್ಗಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಕೆ. ವಿವೇಕಾನಂದ ಅವರು ಮಾತನಾಡಿ, ಶಿಕ್ಷಕರ ಕೊರತೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪೂರ್ಣ ಮಾಹಿತಿ ಒದಗಿಸಬೇಕು. ಈ ಸಂಬಂಧ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಹಾಯಕವಾಗುತ್ತದೆ. ಶಾಲಾ ನಿರ್ಮಾಣಕ್ಕೆ ದಾನ ನೀಡಿರುವ ನಿವೇಶನ, ಕಟ್ಟಡ, ಇನ್ನಿತರ ವಿವರಗಳನ್ನು ಒದಗಿಸಬೇಕು ಎಂದರು.

ಕುಡಿಯುವ ನೀರಿನ ವ್ಯವಸ್ಥೆ ಪರಾಮರ್ಶಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವ ಗ್ರಾಮಗಳಲ್ಲಿ ಖಾಯಂ ನೀರು ವ್ಯವಸ್ಥೆ ಕಾಮಗಾರಿಯನ್ನು ಕೈಗೊಳ್ಳಬೇಕು. ನೀರು ಕೊರತೆಯಿರುವ ಗ್ರಾಮದ ಅಕ್ಕಪಕ್ಕದ ಸ್ಥಳಗಳಲ್ಲಿ ಬೋರ್ ವೆಲ್ ಕೊರೆಯಿಸಿ ಪೈಪ್ ಲೈನ್ ಮೂಲಕ ನೀರು ಪೂರೈಸಬೇಕು. ಕುಡಿಯುವ ನೀರಿನ ಸಮಸ್ಯೆ ತಕ್ಷಣವೇ ಬಗೆಹರಿಸಬೇಕು ಎಂದು ಸೂಚನೆ ನೀಡಿದರು.

ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕು. ಅರಣ್ಯ ಇಲಾಖೆ ವನ್ಯಜೀವಿಗಳಿಗೆ ನೀರು ಲಭ್ಯವಾಗುವಂತಹ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನರೇಗಾ ಅಡಿ ನೀರು ಪೂರೈಸುವ ಸಂಬಂಧ ಕೆಲಸಗಳನ್ನು ಕೈಗೊಂಡು ಉಪಯುಕ್ತವಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಶಾಸಕರಾದ ಎಂ.ಆರ್. ಮಂಜುನಾಥ್ ಮಾತನಾಡಿ, ಜೆ.ಜೆ.ಎಂ ಕುಡಿಯುವ ನೀರಿನ ಕಾಮಗಾರಿಗಳು ತಡವಾಗಿ ಆಗುತ್ತಿದೆ. ಕೆಲವೆಡೆ ಇನ್ನೂ ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ. ಯಾವ ವೇಳೆಗೆ ನೀರಿನ ಕಾಮಗಾರಿ ಪೂರ್ಣಗೊಳ್ಳುತ್ತವೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದರು.

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ವಿ. ವೆಂಕಟೇಶ್ ಮಾತನಾಡಿ, ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಬೇಕು. ಅಂತರ್ಜಲ ಹೆಚ್ಚಳ ಮಾಡುವ ಕಾಮಗಾರಿಗಳಿಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಸುದೀರ್ಘವಾಗಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು. ಸಭೆಯಲ್ಲಿ ಶಾಸಕರಾದ ಹೆಚ್.ಎಂ. ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ. ಚಂದ್ರು, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಅಧಿಕಾರೇತರ ಕೆಡಿಪಿ ಸದಸ್ಯರಾದ ಸಯ್ಯದ್ ಮುಸೈಯೀಬ್, ಎಂ.ಶಂಕರಪ್ಪ, ಕ.ರಾ.ಸ.ಕೃ ಮತ್ತು ಗ್ರಾ.ಅ ಬ್ಯಾಂಕ್ ಮೈಸೂರಿನ ನಿರ್ದೇಶಕ ಎಂ. ಮಹದೇವಣ್ಣ ಇದ್ದರು.

ಗ್ರಾಮಾಂತರ ಪ್ರದೇಶಕ್ಕೆ ಬಸ್‌ ಸೇವೆ ಸಮರ್ಪಕವಾಗಿ ಇರಲಿಕೆ.ಎಸ್.ಆರ್.ಟಿ.ಸಿ ಬಸ್‌ಗಳ ಸೇವೆ ಗ್ರಾಮಾಂತರ ಪ್ರದೇಶಗಳಲ್ಲಿ ಸಮರ್ಪಕವಾಗಿ ಇರಬೇಕು. ಶಾಲಾ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಬಸ್ಸುಗಳ ನಿಯೋಜನೆಯಾಗಬೇಕು. ಈ ಸಂಬಂಧ ಸಭೆ ಕರೆದು ಅನುಕೂಲ ಮಾಡಿಕೊಡುವ ದಿಸೆಯಲ್ಲಿ ಮುಂದಾಗುವಂತೆ ಸಚಿವರು ತಿಳಿಸಿದರು.

ಅಬ್ದುಲ್ ಕಲಾಂ ಸಂಸ್ಥೆ ಪ್ರಕರಣ: ಸ್ಪಷ್ಟನೆ ನೀಡಿ

ಕೊಳ್ಳೇಗಾಲದಲ್ಲಿನ ಅಬ್ದುಲ್ ಕಲಾಂ ಸಂಸ್ಥೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ತಪ್ಪು ತಪ್ಪೇ. ಈ ವಿಷಯದಲ್ಲಿ ಸ್ಪಷ್ಟನೆ ನೀಡಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.