ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಆಯಾ ಇಲಾಖಾ ಕಾರ್ಯಕ್ರಮ ಯಶಸ್ವಿಗೊಳಿಸಲು ನೌಕರರ ಸಂಘದ ನೂತನ ಸದಸ್ಯರು ಶ್ರಮಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಲಹೆ ನೀಡಿದರು.ಅ.28ರಂದು ನಡೆಯಬೇಕಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಮೂಡಲಗಿ ತಾಲೂಕು ಘಟಕದ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾದ ಎಲ್ಲ 24 ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಅವರು, ಸಂಘದ ಸದಸ್ಯರ ಹಿತಾಸಕ್ತಿಗೆ ಸ್ಪಂದಿಸುವ ಕರ್ತವ್ಯ ನಿಮ್ಮದಾಗಬೇಕು ಎಂದು ಕಿವಿಮಾತು ಹೇಳಿದರು.
ಸರ್ಕಾರದ ವಿವಿಧ ಇಲಾಖೆಗಳ ಪ್ರತಿನಿಧಿಗಳು ಚುನಾಯಿತರಾಗಿದ್ದಾರೆ. ಇದರಿಂದ ಜವಾಬ್ದಾರಿ ಹೆಚ್ಚಿದೆ. ಮೇಲಧಿಕಾರಿಗಳ ಸೂಚನೆ ಪಾಲಿಸುವುದರ ಜತೆಗೆ ನೌಕರರ ಹಿತಕ್ಕೆ ಅನುಗುಣವಾಗಿ ಕೆಲಸ ಮಾಡಬೇಕು. ಅಂದಾಗ ಮಾತ್ರ ನೌಕರರ ಪ್ರೀತಿ, ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ. ಮೂಡಲಗಿ ತಾಲೂಕು ಸರ್ಕಾರಿ ನೌಕರರ ಸಂಘಕ್ಕೆ ಅವಿರೋಧ ಆಯ್ಕೆಯಾಗಿರುವುದು ಇತರರಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.ನೌಕರರ ಸಂಘದ ಬೇಡಿಕೆಗಳಿಗೆ ಸದಾ ಸ್ಪಂದಿಸಲಾಗುವುದು, ಹೊಸದಾಗಿ ಆಯ್ಕೆಯಾದ ನಿರ್ದೇಶಕರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಅಭಿವೃದ್ಧಿಪಡಿಸಬೇಕು. ಇದಕ್ಕೆ ಬೇಕಾದ ಎಲ್ಲ ಸಹಾಯ, ಸಹಕಾರ ನೀಡಲಾಗುವುದು ಭರವಸೆ ನೀಡಿದರು.
ಆಯ್ಕೆಯಾದ ನಿರ್ದೇಶಕರು:ಸತೀಶ ಉಮರಾಣಿ (ಪಶುಪಾಲನೆ ಮತ್ತು ಪಶು ವೈದ್ಯ ಇಲಾಖೆ), ಗೋಪಾಲ ಮುತ್ತೆಪ್ಪಗೋಳ, ಅಕ್ಷಯ ಅವಾಡೆ (ಕಂದಾಯ ಇಲಾಖೆ), ಸದಾಶಿವ ಸವದತ್ತಿ, ವಿ.ಎ. ಹುಲ್ಲಾರ, ಶಿವನಗೌಡ ಪಾಟೀಲ, ಶಿವಬಸಪ್ಪ ಕುಂಬಾರ, ಸಿದ್ಧಾರೂಢ ನಾಗನೂರ ( ಶಿಕ್ಷಣ ಇಲಾಖೆ ಪ್ರಾಥಮಿಕ), ರಮೇಶ ಬುದ್ನಿ, ಎಸ್.ಕೆ. ಚಿಪ್ಪಲಕಟ್ಟಿ (ಶಿಕ್ಷಣ ಇಲಾಖೆ ಪ್ರೌಢ), ಚೇತನ ಕುರಿಹುಲಿ (ಶಿಕ್ಷಣ ಇಲಾಖೆ ಆಡಳಿತ ಕಚೇರಿ), ಅಪ್ಪಯ್ಯ ಹುಣಶ್ಯಾಳ (ಸ.ಪ.ಪೂ. ಕಾಲೇಜು), ಶಾಂತವ್ವ ಮರೆನ್ನವರ (ಸಮಾಜ ಕಲ್ಯಾಣ ಇಲಾಖೆ), ಮಹಾಂತೇಶ ಹಿಪ್ಪರಗಿ (ಅರಣ್ಯ ಇಲಾಖೆ), ಆನಂದ ಹಂಜ್ಯಾಗೋಳ, ಸಂಜೀವ ಕೌಜಲಗಿ, ಶಿವಲಿಂಗಪ್ಪ ಪಾಟೀಲ, ರಾಮಚಂದ್ರ ಸಣ್ಣಕ್ಕಿ, ಸಿದ್ದಣ್ಣ ಕರೋಳಿ (ಆರೋಗ್ಯ ಮತ್ತು ಕು.ಕ. ಇಲಾಖೆ), ವಾಸುದೇವ ಹೂವಣ್ಣವರ (ಖಜಾನೆ), ವೆಂಕಟೇಶ ಕೊಪ್ಪದ (ನ್ಯಾಯಾಂಗ ಇಲಾಖೆ), ಸದಾಶಿವ ದೇವರ, ಚೇತನ ಬಳಿಗಾರ (ಗ್ರಾ.ಅ. ಮತ್ತು ಪಂ. ರಾಜ್ ಇಲಾಖೆ), ಕಸ್ತೂರಿ ಪಡೆನ್ನವರ (ಮಹಿಳಾ ಮತ್ತು ಮ.ಕಲ್ಯಾಣ ಇಲಾಖೆ).ನಾಳೆ ಅಧಿಕೃತ ಘೋಷಣೆ: ಸಂಘದ ಒಟ್ಟು 24 ಸ್ಥಾನಗಳಿಗೆ ನಾಮಪತ್ರಗಳನ್ನು ಸಲ್ಲಿಸುವ ಕಡೆಯ ದಿನವಾಗಿದ್ದ ಶುಕ್ರವಾರ 24 ನಾಮಪತ್ರ ಸಲ್ಲಿಕೆಯಾಗಿದ್ದವು. ಶನಿವಾರ ಪರಿಶೀಲನೆ ನಡೆದು ಎಲ್ಲವೂ ಕ್ರಮಬದ್ಧವಾಗಿದ್ದರಿಂದ ಎಲ್ಲ 24 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದ್ದು, 28ರಂದು ನಿಗದಿಯಾಗಿದ್ದ ಚುನಾವಣೆ ನಡೆಸುವ ಅಗತ್ಯವಿಲ್ಲ. ಸೋಮವಾರ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದೆಂದು ಚುನಾವಣಾಧಿಕಾರಿಯಾಗಿರುವ ಪಿಡಿಒ ಶಿವಾನಂದ ಗುಡಸಿ ತಿಳಿಸಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಅವಿರೋಧ ಆಯ್ಕೆ ಸಾಧ್ಯವಾಗಿದೆ.