ಸಾರಾಂಶ
ಸೂಡಿ ಮತ್ತು ದ್ಯಾಮಹುಣಸಿ ಗ್ರಾಮಗಳಲ್ಲಿ ಗ್ರಾಮಸ್ಥರಿಗೆ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗಬೇಕು. ಮಲಪ್ರಭಾ ನೀರು ಬಿಡುಗಡೆ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡಬೇಕು.
ಗಜೇಂದ್ರಗಡ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳ ಕುರಿತು ಸಾರ್ವಜನಿಕರು ನೀಡುವ ಯಾವುದೇ ದೂರಿಗೆ ಗ್ರಾಪಂ ಸಿಬ್ಬಂದಿ ತಕ್ಷಣ ಸ್ಪಂದಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರು ಸೂಚಿಸಿದರು.ತಾಲೂಕಿನ ಸೂಡಿ ಗ್ರಾಪಂ ಕಚೇರಿಯಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಜತೆ ನಡೆದ ಸಭೆಯಲ್ಲಿ ಮಾತನಾಡಿದರು.
ಸೂಡಿ ಮತ್ತು ದ್ಯಾಮಹುಣಸಿ ಗ್ರಾಮಗಳಲ್ಲಿ ಗ್ರಾಮಸ್ಥರಿಗೆ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗಬೇಕು. ಮಲಪ್ರಭಾ ನೀರು ಬಿಡುಗಡೆ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡಬೇಕು. ಕುಡಿಯುವ ನೀರು ಪೋಲಾಗದಂತೆ ನಿಗಾ ವಹಿಸಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಗ್ರಾಪಂ ಸಿಬ್ಬಂದಿ ಒದಗಿಸಬೇಕು. ಸರಿಯಾಗಿ ಕುಡಿಯುವ ನೀರು ಬಿಡದೇ ಸಾರ್ವಜನಿಕರಿಗೆ ಸ್ಪಂದಿಸದೇ ಇದ್ದರೆ ವಾಟರಮನ್ ಸಂಗಯ್ಯ ಅವರನ್ನು ಕೆಲಸದಿಂದ ತೆಗೆದುಹಾಕಿ ಎಂದು ಪಿಡಿಒ ಅವರಿಗೆ ಸೂಚಿಸಿದರು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ರೋಣ ಮತ್ತು ಗಜೇಂದ್ರಗಡದ ಶಾಖಾಧಿಕಾರಿ ಮಹದೇವಪ್ಪ ಅವರಿಗೆ ಸೂಡಿ ಗ್ರಾಮಕ್ಕೆ ಸರಬರಾಜಾಗುವ ಕುಡಿಯುವ ನೀರನ್ನು ವಿಳಂಬ ಮಾಡದೇ ಬಿಡಲು ಸೂಚಿಸಿದರು.
ಗ್ರಾಪಂ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಬೀದಿದೀಪ ಬೆಳಗುವಂತಿರಬೇಕು. ಬೀದಿದೀಪದ ಕಂಬಗಳಲ್ಲಿ ಸಮರ್ಪಕ ವಿದ್ಯುತ್ ಸಂಪರ್ಕ, ವಿದ್ಯುತ್ ಬಲ್ಬ್ ಗಳ ಅಳವಡಿಕೆಗೆ ಕ್ರಮ ವಹಿಸಬೇಕೆಂದರು.ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡದಂತೆ ಜಾಗೃತಿ ವಹಿಸಬೇಕು. ಕಸ ವಿಲೇವಾರಿ ಕಾರ್ಯ ಪ್ರತಿನಿತ್ಯ ನಡೆಯಬೇಕು. ಅನಧಿಕೃತವಾಗಿ ಗೈರಾಗಿ ಕಸ ವಿಲೇವಾರಿ ಮಾಡದಿದ್ದರೆ ಅಂತಹ ಸಿಬ್ಬಂದಿ ವಿರುದ್ಧ ಪಿಡಿಒ ಅವರು ಕ್ರಮ ವಹಿಸಬೇಕು. ಇಲ್ಲವೇ ಪಿಡಿಒ ಅವರ ವಿರುದ್ಧ ಕ್ರಮ ವಹಿಸುವುದಾಗಿ ಎಚ್ಚರಿಸಿದರು.ಸಭೆಯಲ್ಲಿ ಸೂಡಿ ಗ್ರಾಪಂ ಪಿಡಿಒ ಬಸವರಾಜ ವಡ್ಡರ, ತೆರಿಗೆ ಸಂಗ್ರಹಕಾರ ದುರ್ಗಪ್ಪ, ಪಂಚಾಯಿತಿ ಕಾರ್ಯದರ್ಶಿ ಮುಕ್ತಾಬಾಯಿ ಜಾಧವ, ಸಂಗಯ್ಯ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.