ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ: ಮಂಜುಳಾ

| Published : Apr 05 2025, 12:46 AM IST

ಸಾರಾಂಶ

ಚಳ್ಳಕೆರೆಯ ನಗರಸಭೆ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ತುರ್ತು ಸಭೆಯಲ್ಲಿ ಅಧ್ಯಕ್ಷೆ ಆರ್.ಮಂಜುಳಾ ಪ್ರಸನ್ನಕುಮಾರ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ನಗರಸಭೆಯ ನೂತನ ಅಧ್ಯಕ್ಷೆ ಆರ್.ಮಂಜುಳಾ ಪ್ರಸನ್ನಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಕಾರ್ಯಾಲಯದಲ್ಲಿ ತುರ್ತು ಸಭೆಯನ್ನು ಆಯೋಜಿಸಲಾಗಿತ್ತು.

ಪ್ರಾರಂಭದಲ್ಲಿ ಪೌರಾಯುಕ್ತ ಜಿ.ಎಚ್.ಜಗರೆಡ್ಡಿ ಎಲ್ಲರನ್ನೂ ಸ್ವಾಗತಿಸಿ ಇಂದಿನ ಸಭೆಯಲ್ಲಿ ಮಂಡಿಸುವ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಅನುಮೋದಿಸುವಂತೆ ಮನವಿ ಮಾಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ನಗರಸಭೆ ವ್ಯಾಪ್ತಿಯ 2025-26ನೇ ಸಾಲಿನ ಸಂತೆ, ದಿನವಹಿ ಮಾರುಕಟ್ಟೆ, ಖಾಸಗಿ ಬಸ್ ನಿಲ್ದಾಣ ಮುಂತಾದ ಕಡೆಗಳಲ್ಲಿ ವಾರ್ಷಿಕ ಹರಾಜು ನಡೆಸಲಾಗಿದ್ದು, ಅವುಗಳಿಗೆ ಅನುಮೋದನೆ ನೀಡಬೇಕು ಎಂದರು.

ವಿಶೇಷವಾಗಿ ಶುಕ್ರವಾರ ನಡೆದ ಖಾಸಗಿ ಬಸ್ ನಿಲ್ದಾಣ ಶುಲ್ಕ ವಸೂಲಿ ಹರಾಜಿನಲ್ಲಿ ವೆಂಕಟೇಶ್ ಎಂಬುವವರು 9.5 ಲಕ್ಷಕ್ಕೆ ಹರಾಜು ಆಗಿದ್ದು ಇದನ್ನು ಸಭೆ ದೃಢೀಕರಿಸಬೇಕು ಎಂದರು.

ನಗರಸಭೆ ಅಭಿವೃದ್ಧಿ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ಬಾರಿ ಸಭೆ ಕರೆದು ಹಲವಾರು ಯೋಜನೆಗಳ ಅನುಷ್ಠಾನಕ್ಕೆ ಚಿಂತನೆ ನಡೆಸಲಾಗಿದೆ. ಸರ್ಕಾರದಿಂದ ಬರುವ ಎಲ್ಲಾ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವ ಕಾರ್ಯ ಮುಂದುವರೆದಿದೆ ಎಂದರು.

ಅಧ್ಯಕ್ಷೆ ಆರ್.ಮಂಜುಳಾ ಪ್ರಸನ್ನ ಕುಮಾರ್ ಮಾತನಾಡಿ, ನಗರಸಭೆ ಅಧ್ಯಕ್ಷೆಯಾಗಿ ಈಗಾಗಲೇ 10 ದಿನಗಳು ಕಳೆದಿದ್ದು, ಪ್ರತಿ ನಿತ್ಯವೂ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ನಡೆಯುತ್ತಿದೆ. ವಾರ್ಷಿಕ ಹರಾಜಿನಲ್ಲಿ ಬಿಡ್‌ದಾರರ ಸಂಖ್ಯೆ ಕಡಿಮೆ ಇದ್ದು, ಹೆಚ್ಚು ಟೆಂಡರ್ ನಮೂದಿಸಿದವರಿಗೆ ನೀಡಲಾಗುವುದು ಎಂದರು.

ನಾಮ ನಿರ್ದೇಶನ ಸದಸ್ಯ ಅನ್ವರ್‌ ಮಾಸ್ಟರ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಖಾಸಗಿ ಲೇಔಟ್‌ಗಳ ಸಿಎ ಸೈಟ್, ಪಾರ್ಕ್‌ಗಳ ಬಗ್ಗೆ ಸಮೀಕ್ಷೆ ನಡೆಸಬೇಕು. ಕೆಲವೊಂದು ಕಡೆ ನಿಗದಿಪಡಿಸಿದ ಸಿಎ ಸೈಟ್‌ಗಳು ಮಾಯವಾದ ಬಗ್ಗೆ ಮಾಹಿತಿ ಇದೆ ಆದ್ದರಿಂದ ಎಲ್ಲಾ ಲೇಔಟ್‌ಗಳಲ್ಲಿರುವ ಸಿಎ ಸೈಟ್ ಮಾಹಿತಿ ಮತ್ತು ಅವುಗಳ ವಾಸ್ತವ ಸ್ಥಿತಿಯನ್ನು ಸಭೆಯ ಗಮನಕ್ಕೆ ತರಬೇಕು ಎಂದರು.

ನಗರಸಭೆ ಉಪಾಧ್ಯಕ್ಷೆ ಸುಮ ಭರಮಣ್ಣ, ಸದಸ್ಯರಾದ ಎಸ್.ಜಯಣ್ಣ, ವೆಂಕಟೇಶ್, ವಿಶುಕುಮಾರ್, ಕೆ.ವೀರಭದ್ರಪ್ಪ, ಆರ್.ರುದ್ರನಾಯಕ, ಸುಜಾತ ಪಾಲಯ್ಯ, ಜಯಲಕ್ಷ್ಮೀ, ಜೈತುಂಬಿ, ಹೊಯ್ಸಳ ಗೋವಿಂದ, ನಾಗಮಣಿ, ನಿರ್ಮಲ, ಸಾಕಮ್ಮ, ತಿಪ್ಪಕ್ಕ, ನಾಮನಿರ್ದೇಶನ ಸದಸ್ಯರಾದ ಆರ್.ವೀರಭದ್ರಪ್ಪ, ಬಡಗಿ ಪಾಪಣ್ಣ, ನೇತಾಜಿ ಪ್ರಸನ್ನ, ನಟರಾಜ್ ಮುಂತಾದವರು ಉಪಸ್ಥಿತರಿದ್ದರು.