ಜನಸಾಮಾನ್ಯರ ನೋವು ನಲಿವಿಗೆ ಸ್ಪಂದಿಸುವುದೇ ಕಾಂಗ್ರೆಸ್ ಮೂಲ ಧ್ಯೇಯವಾಗಿದೆ.
ಕನ್ನಡಪ್ರಭ ವಾರ್ತೆ ಗದಗ
ಜನಸಾಮಾನ್ಯರ ನೋವು ನಲಿವಿಗೆ ಸ್ಪಂದಿಸುವುದೇ ಕಾಂಗ್ರೆಸ್ ಮೂಲ ಧ್ಯೇಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಹೇಳಿದರು.ಶನಿವಾರ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಿಗೆ ಪಕ್ಷದ ಧ್ವಜ ಹಸ್ತಾಂತರಿಸಿ ಮಾತನಾಡಿದರು. ಕಾಂಗ್ರೆಸ್ ಕೇವಲ ಅಧಿಕಾರದ ಆಸೆಗಾಗಿ ಕೆಲಸ ಮಾಡುವ ರಾಜಕೀಯ ಪಕ್ಷವಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷವಾಗಿದೆ. ಬಡವರ ಪರವಾಗಿರುವ ಮೌಲ್ಯ ಮತ್ತು ಆದರ್ಶಗಳನ್ನು ನಿರಂತರವಾಗಿ ಹೊತ್ತು ಸಾಗುತ್ತಿರುವ ಪಕ್ಷವಾಗಿದೆ ಎಂದರು.
ಉನ್ನತ ಶಿಕ್ಷಣ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಕಾಂಗ್ರೆಸ್ ಬಡವರ ಪಕ್ಷವಾಗಿದ್ದು, ಬಡವರ ಬಗ್ಗೆ ಸದಾ ಕಾಳಜಿ ಹೊಂದಿರುವ ಅವರಿಗಾಗಿಯೇ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ ಎಂದ ಅವರು, ಇಂದಿರಾ ಗಾಂಧಿ ಅವರ ಕಾಲದಿಂದ ಈಗಿನ ಗ್ಯಾರಂಟಿ ಯೋಜನೆಗಳ ಜಾರಿ ಕುರಿತು ಸುದೀರ್ಘವಾಗಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಗದಗ ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಗೆ ನೂತನ ಅಧ್ಯಕ್ಷರ ಆಯ್ಕೆಯ ನಂತರ ಪಕ್ಷದಲ್ಲಿ ಹೊಸ ಹುಮ್ಮಸ್ಸು ಮೂಡಿದ್ದು, ಇದನ್ನು ಮುಂಬರುವ ಎಲ್ಲಾ ಚುನಾವಣೆಗಳಲ್ಲಿಯೂ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಬೇಕಿದೆ ಎಂದರು.
ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷ ಮೋಹನ ಲಿಂಬಿಕಾಯಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಬಗ್ಗೆ ನೂತನ ಅಧ್ಯಕ್ಷರ ಕುರಿತು ವಿಷಯ ಹಂಚಿಕೊಂಡು ಮತಯಾಚನೆ ಮಾಡಿದರು. ಮಾಜಿ ಶಾಸಕ ಡಿ.ಆರ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಬಿ.ಕೆ. ಹರಿಪ್ರಸಾದ ಅವರಿಗೂ ಗದಗ ಜಿಲ್ಲೆಗೂ, ಕಾಂಗ್ರೆಸ್ ಪಕ್ಷಕ್ಕೂ ಇರವು ನಂಟು ಮತ್ತು ಇತಿಹಾಸದ ಕುರಿತು ಮಾತನಾಡಿದರು. ಆನಂದ ಗಡ್ಡದೇವರಮಠ, ಐ.ಎಸ್. ಪಾಟೀಲ ಸೇರಿ ಅನೇಕರು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಆರ್. ಯಾವಗಲ್ಲ, ಜಿ.ಎಸ್. ಗಡ್ಡದೇವಮಠ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಸುಜಾತಾ ದೊಡ್ಡಮನಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಸಚಿನ್ ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮುಂತಾದವರಿದ್ದರು. ಬಸವರಾಜ ಕಡೇಮನಿ ನಿರೂಪಿಸಿದರು. ಬಿ.ಬಿ. ಅಸೂಟಿ ಸ್ವಾಗತಿಸಿದರು.