ಖಾಸಗಿ ಶಿಕ್ಷಣ ಸಂಸ್ಥೆಗಳ ಬೇಡಿಕೆ ಈಡೇರಿಕೆಗೆ ಸಚಿವರಿಂದ ಸ್ಪಂದನೆ-ಡಾ. ಕುಬೇರಪ್ಪ

| Published : Jun 17 2024, 01:38 AM IST

ಖಾಸಗಿ ಶಿಕ್ಷಣ ಸಂಸ್ಥೆಗಳ ಬೇಡಿಕೆ ಈಡೇರಿಕೆಗೆ ಸಚಿವರಿಂದ ಸ್ಪಂದನೆ-ಡಾ. ಕುಬೇರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ನಿವೃತ್ತಿ ಸೇರಿದಂತೆ ಇತರ ಕಾರಣಗಳಿಂದ ಖಾಲಿ ಆಗಿರುವ ಶಿಕ್ಷಕರು, ಶಿಕ್ಷಕೇತರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆಂಬುದನ್ನು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೇ ಹೇಳಲಾಗಿದ್ದು, ಶಿಕ್ಷಣ ಹಾಗೂ ಕಾನೂನು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹಾವೇರಿ ಜಿಲ್ಲಾ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಸದಸ್ಯ ಡಾ. ಆರ್.ಎಂ. ಕುಬೇರಪ್ಪ ತಿಳಿಸಿದರು.

ಹಾನಗಲ್ಲ:ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ನಿವೃತ್ತಿ ಸೇರಿದಂತೆ ಇತರ ಕಾರಣಗಳಿಂದ ಖಾಲಿ ಆಗಿರುವ ಶಿಕ್ಷಕರು, ಶಿಕ್ಷಕೇತರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆಂಬುದನ್ನು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೇ ಹೇಳಲಾಗಿದ್ದು, ಶಿಕ್ಷಣ ಹಾಗೂ ಕಾನೂನು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹಾವೇರಿ ಜಿಲ್ಲಾ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಸದಸ್ಯ ಡಾ. ಆರ್.ಎಂ. ಕುಬೇರಪ್ಪ ತಿಳಿಸಿದರು.

ಭಾನುವಾರ ಹಾನಗಲ್ಲಿನ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಆವರಣದಲ್ಲಿ ಆಯೋಜಿಸಿದ ಪದಾಧಿಕಾರಿಗಳ ಹಾವೇರಿ ಜಿಲ್ಲಾ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಸಭೆಯಲ್ಲಿ ಹಕ್ಕೊತ್ತಾಯ ಮಾಡಿದ ಅವರು, ಸರಕಾರ ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳೆಂಬ ತಾರತಮ್ಯಕ್ಕೆ ಅವಕಾಶವಿಲ್ಲದಂತೆ ಶಿಕ್ಷಣ ಸಂಸ್ಥೆಗಳ ಹಿತ ಕಾಯಲು ಮುಂದಾಗಬೇಕು. ಈ ವಿಷಯವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರ ಗಮನಕ್ಕೆ ತರಲಾಗಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇಡೀ ರಾಜ್ಯ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು ಒಟ್ಟಾಗಿ ಮುಖ್ಯಮಂತ್ರಿಗಳಾದಿಯಾಗಿ ಇತರ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸೋಣ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ ನಂತರ ನಮ್ಮ ನಿಲುವು ಪ್ರಕಟಿಸೋಣ ಎಂದರು.

ಕೆಎಲ್‌ಇ ವಿದ್ಯಾ ಸಂಸ್ಥೆಯ ನಿರ್ದೇಶಕ ಎಂ.ಸಿ. ಕೊಳ್ಳಿ ಮಾತನಾಡಿ, ೯೦೦೦ರಷ್ಟು ಖಾಲಿ ಇರುವ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿನ ಶಿಕ್ಷಕರ ಕೊರತೆ ಮಕ್ಕಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ಷ ಪರಿಣಾಮ ಬೀರಲಿದೆ. ಹೋರಾಟವಿಲ್ಲದೆ ಯಶಸ್ಸು ಸಿಗಲಾರದು ಎಂದೆನಿಸುತ್ತಿದೆ. ಈ ಸಮಸ್ಯೆ ಬಗೆಹರಿಸಲು ಹೋರಾಟಕ್ಕೆ ಮುಂದಾದಲ್ಲಿ ಕೆಎಲ್‌ಇ ಸಂಸ್ಥೆಯಿಂದ ಎಲ್ಲ ಸಹಕಾರ ನೀಡಲಾಗುತ್ತದೆ. ಒಟ್ಟಾಗಿ ಹೋರಾಡಿದರೆ ಫಲವೂ ಸಿಗಲಿದೆ ಎಂದರು.ಹಿರೇಕೆರೂರಿನ ಸಹಕಾರಿ ಧುರೀಣ ಎಸ್.ಎಸ್. ಪಾಟೀಲ ಮಾತನಾಡಿ, ಸರಕಾರಗಳ ತಾರತಮ್ಯ ನೀತಿಯಿಂದಾಗಿ ಈ ಹಿಂದೆ ಹೋರಾಟದ ಮೂಲಕವೇ ಎಲ್ಲ ಸಮಸ್ಯೆ ಪರಿಹರಿಸಿಕೊಳ್ಳಲಾಗಿದೆ. ಈಗಲೂ ಅದು ಅನಿವಾರ್ಯ. ಇಡೀ ಕರ್ನಾಟಕದಲ್ಲಿ ಸರಕಾರಕ್ಕಿಂತಲೂ ಹೆಚ್ಚು ಶೈಕ್ಷಣಿಕ ಸೇವೆ ಸಲ್ಲಿಸಿದ ಖಾಸಗಿ ಶಿಕ್ಷಣ ಸಂಸ್ಥೆಗಳ ಬಗೆಗೆ ಅನಾದರ ಸಲ್ಲದು. ಹೋರಾಟದ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಉಳಿಸುವ ಸಂಕಲ್ಪ ಮಾಡೋಣ ಎಂದರು.

ಒಕ್ಕೂಟದ ಕಾರ್ಯದರ್ಶಿ ಬಸವರಾಜ ಹಾದಿಮನಿ ಮಾತನಾಡಿ, ಈಗಾಗಲೇ ನ್ಯಾಯಾಲಯದಲ್ಲಿ ಈ ವಿಷಯದ ಕುರಿತು ಹಲವರು ನ್ಯಾಯ ಕೇಳಿ ಮನವಿ ಸಲ್ಲಿಸಿ ಚರ್ಚೆ ನಡೆದಿದೆ. ಹಾವೇರಿ ಜಿಲ್ಲೆಯಿಂದಲೂ ಮನವಿ ಸಲ್ಲಿಸಿ ಇದೇ ಹೋರಾಟದಲ್ಲಿ ಮುಂದಾಗೋಣ. ಸರಕಾರದ ನಿಲುವು ಸ್ಪಷ್ಟವಾಗದ ಕಾರಣ ನ್ಯಾಯಾಲಯದ ಮೊರೆ ಹೋಗುವುದು ಕೂಡ ತೀರ ಅನಿವಾರ್ಯ ಎಂದರು.

ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಎಸ್.ಎಸ್. ಮುಷ್ಠಿ, ಎ.ಎಸ್. ಬಳ್ಳಾರಿ, ಎಸ್.ಎಚ್. ಕಲ್ಲೇರ, ಬಿ.ಎಸ್. ಅಕ್ಕಿವಳ್ಳಿ ಮೊದಲಾದವರು ಮಾತನಾಡಿದರು. ಜಿಲ್ಲೆಯ ವಿವಿಧ ಖಾಸಗಿ ಸಂಘ ಸಂಸ್ಥೆಗಳ ಪ್ರಮುಖ ಎನ್.ಎಂ. ಕೊಪ್ಪದ, ಎಂ.ಎಫ್. ಅಮರದ, ಎಸ್.ಎಸ್. ಬಡ್ನಿಯವರ, ಎನ್.ಎಚ್. ದೊಡ್ಡಮನಿ, ಎಂ.ಬಿ. ಹಳೆಮನಿ, ಇ.ವಿ.ಗುಮನಾಳ, ಎಂ.ಎನ್. ಪಾಟೀಲ, ಆರ್.ಎಂ. ಗೌರಣ್ಣನವರ, ವೈ.ಕೆ. ದೊಡ್ಡಮಾಸ್ತಿ, ಎಂ.ಎಸ್. ಕರ್ಜಗಿ, ಬಿ.ಆರ್. ಪುಟ್ಟಣ್ಣನವರ, ಎಸ್. ವೀರಭದ್ರಯ್ಯ, ಡಾ.ಡಿ.ಎನ್. ಗುಂಜಾಳ, ಪಿ.ವಿ. ಅರಗೋಳ, ಜಗದೀಶ ಕೊಲ್ಲಾವರ, ಮಾಲಿಂಗಪ್ಪ ಗೂಳೇರ, ಮಾದೇವಪ್ಪ ಕೂರಗೇರ, ಎಸ್.ವಿ. ಪಾಟೀಲ, ಹಾಲಪ್ಪ ದಾನಗೊಂಡರ, ನಾಗಪ್ಪ ದುಂಡಣ್ಣನವರ, ಎಸ್.ಟಿ. ಮುಗದೂರ, ಪಿ.ವಾಯ್. ಗುಡಗುಡಿ, ಎಂ.ಎಚ್.ಸಿರ್ಸಿ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.ಸಂತಾಪ: ಇದೇ ಸಂದರ್ಭದಲ್ಲಿ ಹಿರಿಯ ಸಹಕಾರಿ ಧುರೀಣರಾದ ಡಾ. ಬಿ.ಜಿ. ಪಾಟೀಲ, ಎನ್.ಸಿ. ಅಕ್ಕಿಅವರ ನಿಧನಕ್ಕೆ ಸಂತಾಪ ಸೂಚಿಸಿ ಸಭೆ ಮೌನ ಆಚರಿಸಿತು.