ಸೆ.1ರಂದು ಶಾಸಕರ ಆರೋಪಗಳಿಗೆ ಉತ್ತರ

| Published : Aug 16 2025, 12:00 AM IST

ಸಾರಾಂಶ

ಕ್ಷೇತ್ರದಲ್ಲಿ ಪ್ರಸ್ತುತ ಕಾಂಗ್ರೆಸ್ ಶಾಸಕರಾದ ಡಿ.ಜಿ. ಶಾಂತನಗೌಡ ಅಧಿಕಾರಕ್ಕೆ ಬಂದು 2 ವರ್ಷ 3 ತಿಂಗಳಾಗಿವೆ. ಇದುವರೆಗೆ ಕಾಂಗ್ರೆಸ್ ಆಡಳಿತವೈಖರಿ ಬಗ್ಗೆ ಟೀಕಿಸಿದ್ದೇನೆಯೇ ಹೊರತು, ಸ್ಥಳೀಯ ಶಾಸಕರ ವಿರುದ್ಧ ಮಾತನಾಡಿಲ್ಲ. ಆದರೆ, ಅವರು ತನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

- ₹367.64 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಸಾಧನೆ ದಾಖಲೆ ನೀಡಿ: ರೇಣುಕಾಚಾರ್ಯ

- - -

ಹೊನ್ನಾಳಿ: ಕ್ಷೇತ್ರದಲ್ಲಿ ಪ್ರಸ್ತುತ ಕಾಂಗ್ರೆಸ್ ಶಾಸಕರಾದ ಡಿ.ಜಿ. ಶಾಂತನಗೌಡ ಅಧಿಕಾರಕ್ಕೆ ಬಂದು 2 ವರ್ಷ 3 ತಿಂಗಳಾಗಿವೆ. ಇದುವರೆಗೆ ಕಾಂಗ್ರೆಸ್ ಆಡಳಿತವೈಖರಿ ಬಗ್ಗೆ ಟೀಕಿಸಿದ್ದೇನೆಯೇ ಹೊರತು, ಸ್ಥಳೀಯ ಶಾಸಕರ ವಿರುದ್ಧ ಮಾತನಾಡಿಲ್ಲ. ಆದರೆ, ಅವರು ತನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಶುಕ್ರವಾರ ಹೊನ್ನಾಳಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.1ರಂದು ಬೆಳಗ್ಗೆ 10 ಗಂಟೆಗೆ ತಾಲೂಕಿನ ಕುಂದೂರು ಗ್ರಾಮದಲ್ಲಿ ಜಲ್ಲೆಯ ವಿವಿಧ ತಾಲೂಕುಗಳ ಬೃಹತ್ ರೈತರ ಸಮಾವೇಶ ನಡೆಸಲಾಗುವುದು. ಆಗ ಶಾಸಕರ ಎಲ್ಲ ಆರೋಗಳಿಗೆ ಹಾಗೂ ಭದ್ರಾ ಜಲಾಶಯ ನಾಲಾ ನೀರು ಹರಿಸುವ ಕುರಿತು, ಯೂರಿಯಾ ಗೊಬ್ಬರದ ವಾಸ್ತವಿಕ ಪರಿಸ್ಥಿತಿ, ಅವಳಿ ತಾಲೂಕುಗಳ ಅಭಿವೃದ್ಧಿಶೂನ್ಯ ಆಡಳಿತ ಕುರಿತು ದಾವಣಗೆರೆ ಜಿಲ್ಲಾ ಮತ್ತು ಅ‍ವಳಿ ತಾಲೂಕುಗಳ ರೈತ ಒಕ್ಕೂಟದ ವತಿಯಿಂದ ಉತ್ತರ ನೀಡುತ್ತೇನೆ ಎಂದರು.

ಕ್ಷೇತ್ರದ ಶಾಸಕರು ₹367.64 ಕೋಟಿ ಅನುದಾನದಲ್ಲಿ ತಾಲೂಕಿನ ಅಭಿವೃದ್ಧಿ ಮಾಡಿಸಿರುವುದಾಗಿ ಹೇಳುತ್ತಿದ್ದಾರೆ. ಈ ಬಗ್ಗೆ ಅವರು ದಾಖಲೆ ಸಹಿತ ಸಾಬೀತುಪಡಿಸಲಿ. ತನ್ನ ಅಧಿಕಾರಾವಧಿಯಲ್ಲಿ ಅಂದಿನ ಇಂಧನ ಸಚಿವ ಸುನೀಲ್ ಕುಮಾರ್ ಅವರಿಗೆ ಮನವಿ ಮಾಡಿ, ವಿದ್ಯುತ್ ಅಕ್ರಮ-ಸಕ್ರಮಕ್ಕೆ ಹೊನ್ನಾಳಿಗೆ ₹25.70 ಕೋಟಿ ಹಾಗೂ ನ್ಯಾಮತಿಗೆ ₹23.79 ಕೋಟಿ ಅನುದಾನ 2022ರಲ್ಲಿ ಮಂಜೂರ ಮಾಡಿಸಿದ್ದೆ. ಈ ವಿಷಯವಾಗಿ ಬಹಿರಂಗ ಚರ್ಚೆಗೆ ಸಿದ್ಧ. ಪ್ರಗತಿ ಪಥ ಯೋಜನೆ ಯೋಜನೆಯಡಿ ₹21 ಕೋಟಿ ತಂದಿರುವೆ ಎಂದು ಶಾಸಕರು ಹೇಳುತ್ತಿದ್ದಾರೆ. ಇದನ್ನು ದಾಖಲೆ ಸಮೇತ ಸಾಬೀತುಪಡಿಸಲಿ. ತಾವು ಶಾಲಾ- ಕಾಲೇಜುಗಳ ಕೊಠಡಿಗಳಿಗಾಗಿ ₹16 ಕೋಟಿ ಅನುದಾನ ತಂದಿದ್ದಾಗಿ ಹೇಳಿದರು.

ಬೆಳಗಾವಿ ಅಧಿವೇಶನದ ಸಂದರ್ಭ ಹಿರಿಯ ಶಾಸಕರುಗಳು ಅನುದಾನದ ಬಗ್ಗೆ ಮನವಿ ಮಾಡಿದಾಗ ಪ್ರತಿ ಶಾಸಕರಿಗೆ ₹25 ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ ಕೇವಲ ₹11.5 ಕೋಟಿ ಮಾತ್ರ ನೀಡಿದ್ದಾರೆ. ಹೊನ್ನಾಳಿ, ನ್ಯಾಮತಿ ತಾಲೂಕುಗಳಲ್ಲಿ ಇಂದಿಗೂ ಯೂರಿಯಾ ಅಭಾವ ಇದೆ. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟವಾಗುತ್ತಿದೆ. ಇಲ್ಲಿಯ ಶಾಸಕರು ಗೊಬ್ಬರದ ಕೊರತೆ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಅರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್ ಮತ್ತು ದೊಡ್ಡೇರಿ ಡಿ.ಜಿ.ರಾಜಪ್ಪ, ಮುಖಂಡರು ಇದ್ದರು.

- - -

-15ಎಚ್.ಎಲ್.ಐ4.ಜೆಪಿಜಿ: