ಬಳ್ಳಾರಿಯಲ್ಲಿ ಸರ್ಕಾರಿ ಕಾನೂನು ಕಾಲೇಜು ಸ್ಥಾಪನೆಯ ಪ್ರಕ್ರಿಯೆಗೆ ಚಾಲನೆ ದೊರೆತ ಆಶಾಭಾವನೆ ಮೂಡಿದ್ದು, ಕಾಲೇಜು ಆರಂಭಕ್ಕೆ ಸರ್ಕಾರದಿಂದ ಇನ್ನೂ ಅಂತಿಮ ಆದೇಶವಷ್ಟೇ ಹೊರ ಬೀಳಬೇಕಾಗಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಗಣಿ ನಗರಿ ಬಳ್ಳಾರಿಯಲ್ಲಿ ಸರ್ಕಾರಿ ಕಾನೂನು ಕಾಲೇಜು ಸ್ಥಾಪಿಸಬೇಕೆಂಬ ಬಹುದಿನಗಳ ಬೇಡಿಕೆಗೆ ಕೊನೆಗೂ ಸರ್ಕಾರದ ಮಟ್ಟದಲ್ಲಿ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದ್ದು, ಜಿಲ್ಲೆಯ ಕಾನೂನು ಶಿಕ್ಷಣ ಆಕಾಂಕ್ಷಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ನಗರದ ಹಳೆಯ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಸರ್ಕಾರಿ ಕಾನೂನು ಕಾಲೇಜು ಆರಂಭಿಸುವ ಸಂಬಂಧ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಸಲ್ಲಿಸಿರುವ ಮನವಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪ್ರಸ್ತಾವವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಸಚಿವರಿಗೆ ನಿರ್ದೇಶನ ನೀಡಿದೆ. ಇದರಿಂದ ಬಳ್ಳಾರಿಯಲ್ಲಿ ಸರ್ಕಾರಿ ಕಾನೂನು ಕಾಲೇಜು ಸ್ಥಾಪನೆಯ ಪ್ರಕ್ರಿಯೆಗೆ ಚಾಲನೆ ದೊರೆತ ಆಶಾಭಾವನೆ ಮೂಡಿದ್ದು, ಕಾಲೇಜು ಆರಂಭಕ್ಕೆ ಸರ್ಕಾರದಿಂದ ಇನ್ನೂ ಅಂತಿಮ ಆದೇಶವಷ್ಟೇ ಹೊರ ಬೀಳಬೇಕಾಗಿದೆ.

ಉನ್ನತ ಶಿಕ್ಷಣಕ್ಕೆ ಅವಕಾಶ: ಬಳ್ಳಾರಿ ಜಿಲ್ಲೆಯಲ್ಲಿ ಕಾನೂನು ಶಿಕ್ಷಣ ಪಡೆಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಸರ್ಕಾರಿ ಕಾನೂನು ಕಾಲೇಜಿನ ಕೊರತೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕಾನೂನು ಶಿಕ್ಷಣ ಪಡೆಯುವುದು ಆರ್ಥಿಕ ಹೊರೆಯಾಗಿ ಪರಿಣಮಿಸುತ್ತಿದೆ. ನಗರದಲ್ಲಿ ವೀವಿ ಸಂಘದ ಕಾನೂನು ಕಾಲೇಜು ಇದೆಯಾದರೂ ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರಿ ಕಾನೂನು ಕಾಲೇಜು ಆರಂಭಿಸಬೇಕು ಎಂಬ ಕೂಗು ಬಹುವರ್ಷಗಳಿಂದ ಕೇಳಿ ಬಂದಿತ್ತು. ನಗರ ಶಾಸಕ ಭರತ್ ರೆಡ್ಡಿ ಒತ್ತಾಸೆಯಂತೆ ನಗರದಲ್ಲಿ ಕಾನೂನು ಕಾಲೇಜು ಸ್ಥಾಪನೆಗೆ ಸರ್ಕಾರ ಸ್ಪಂದಿಸಿದೆ. ಬಳ್ಳಾರಿಯಲ್ಲಿಯೇ ಸರ್ಕಾರಿ ಕಾನೂನು ಕಾಲೇಜು ಆರಂಭವಾದರೆ ಕಡಿಮೆ ವೆಚ್ಚದಲ್ಲಿ ಕಾನೂನು ಶಿಕ್ಷಣ ಪಡೆಯಲು ಅವಕಾಶ ದೊರೆಯಲಿದ್ದು, ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೂ ಪೂರಕವಾಗಲಿದೆ.

ಹಳೇ ಕೋರ್ಟ್ ಕಟ್ಟಡ ಸದ್ಬಳಕೆ: ನಗರದ ಹಳೆಯ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಕಾನೂನು ಕಾಲೇಜು ಆರಂಭಿಸಬೇಕು ಎಂಬುದು ಶಾಸಕ ನಾರಾ ಭರತ್ ರೆಡ್ಡಿ ಅವರ ಪ್ರಮುಖ ಪ್ರಸ್ತಾವವಾಗಿದೆ. ಲಭ್ಯವಿರುವ ಸರ್ಕಾರಿ ಕಟ್ಟಡವನ್ನು ಶೈಕ್ಷಣಿಕ ಉದ್ದೇಶಕ್ಕೆ ಬಳಸಿಕೊಳ್ಳುವುದರಿಂದ ಹೊಸ ಕಟ್ಟಡ ನಿರ್ಮಾಣದ ವೆಚ್ಚವನ್ನು ತಗ್ಗಿಸುವ ಸಾಧ್ಯತೆಯಿದೆ. ಆದರೆ ಕಾಲೇಜು ಆರಂಭಿಸಲು ಅಗತ್ಯವಿರುವ ತರಗತಿ ಕೊಠಡಿಗಳು, ಗ್ರಂಥಾಲಯ, ಮೂಲಸೌಕರ್ಯ ಹಾಗೂ ವಿಶ್ವವಿದ್ಯಾಲಯದ ನಿಯಮಗಳ ಅನುಸರಣೆಯ ಕುರಿತು ಪರಿಶೀಲನೆ ನಡೆಯಬೇಕಿದೆ. ಹಳೆಯ ನ್ಯಾಯಾಲಯದ ಆವರಣದಲ್ಲಿಯೇ ಕಾಲೇಜು ಆರಂಭವಾದರೆ ವಿದ್ಯಾರ್ಥಿಗಳಿಗೆ ನ್ಯಾಯಾಂಗ ವ್ಯವಸ್ಥೆಯ ಕಾರ್ಯಚಟುವಟಿಕೆ ಪರಿಚಯ ದೊರೆಯುವ ಸಾಧ್ಯತೆಯೂ ಇದೆ. ಇಲ್ಲಿ ಕಾನೂನು ಕಾಲೇಜು ಸ್ಥಾಪಿಸುವುದರಿಂದ ಬ್ರಿಟಿಷ್ ಕಾಲದ ಕಟ್ಟವನ್ನು ಜತನವಾಗಿಟ್ಟುಕೊಳ್ಳಲು ಸಹಕಾರಿಯಾಗಲಿದೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಆಧರಿಸಿ ಸರ್ಕಾರದ ಪತ್ರದಲ್ಲಿ ಹಳೆಯ ನ್ಯಾಯಾಲಯ ಸಂಕೀರ್ಣದಲ್ಲಿ ಕಾಲೇಜು ಸ್ಥಾಪಿಸಲು ಇರುವ ಅವಕಾಶಗಳ ಕುರಿತು ಪರಿಶೀಲಿಸುವಂತೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಸೂಚಿಸಿದೆ.

ಕಾಲೇಜು ಸ್ಥಾಪನೆಯಿಂದ ಬಳ್ಳಾರಿ ಜಿಲ್ಲೆಯ ಜತೆಗೆ ಸುತ್ತಮುತ್ತಲಿನ ಪ್ರದೇಶಗಳ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ. ಸರ್ಕಾರದ ಸಕಾರಾತ್ಮಕ ಸ್ಪಂದನೆಯಿಂದ ಕಾಲೇಜು ಸ್ಥಾಪನೆಯ ನಿರೀಕ್ಷೆ ಹೆಚ್ಚಾಗಿದೆ. ಮುಂದಿನ ಹಂತದಲ್ಲಿ ವಿಶ್ವವಿದ್ಯಾಲಯದ ಪರಿಶೀಲನಾ ವರದಿ, ಮೂಲಸೌಕರ್ಯಗಳ ಲಭ್ಯತೆ, ಅಗತ್ಯ ಅನುಮೋದನೆ ಹಾಗೂ ಅನುದಾನ ಮಂಜೂರಾತಿ ಪ್ರಮುಖವಾಗಲಿವೆ.