ಮಹದಾಯಿ ನೀರಿನ ವಿಷಯವಾಗಿ ನಾಲ್ಕೈದು ದಿನಗಳಲ್ಲಿ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ ನಿರ್ಣಯ ಕೈಗೊಳ್ಳಲು ಇಲ್ಲಿನ ಸವಾಯಿ ಗಂಧರ್ವ ಹಾಲ್‌ನಲ್ಲಿ ರೈತರು- ಪಾಲಿಕೆ ಸದಸ್ಯರ ಸಭೆಯಲ್ಲಿ ನಿರ್ಣಯಿಸಲಾಯಿತು.

ಹುಬ್ಬಳ್ಳಿ:

ಮಹದಾಯಿ ನೀರಿನ ವಿಷಯವಾಗಿ ನಾಲ್ಕೈದು ದಿನಗಳಲ್ಲಿ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ ನಿರ್ಣಯ ಕೈಗೊಳ್ಳಲು ಇಲ್ಲಿನ ಸವಾಯಿ ಗಂಧರ್ವ ಹಾಲ್‌ನಲ್ಲಿ ರೈತರು- ಪಾಲಿಕೆ ಸದಸ್ಯರ ಸಭೆಯಲ್ಲಿ ನಿರ್ಣಯಿಸಲಾಯಿತು. ಈ ನಡುವೆ ಡಿ. 6ರೊಳಗೆ ಪಾಲಿಕೆ ನಿರ್ಣಯ ಕೈಗೊಳ್ಳದಿದ್ದಲ್ಲಿ ಪಾಲಿಕೆ ಆವರಣದೊಳಗೆ ನಿರಂತರ ನಿರಶನ ನಡೆಸುವುದಾಗಿ ಹೋರಾಟಗಾರರು ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ಮೂಲಕ ಮಹದಾಯಿ ನೀರು ತರುವ ಜವಾಬ್ದಾರಿ ಇದೀಗ ಪಾಲಿಕೆಯ ಹೆಗಲೇರಿದಂತಾಗಿದೆ.

ಮಹದಾಯಿ ನೀರು ಹಂಚಿಕೆಯಾಗಿರುವುದು ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಕುಡಿಯಲೆಂದು. 3.9 ಟಿಎಂಸಿ ನೀರು ಹಂಚಿಕೆಯಾಗಿದೆ. ಅತ್ತ ನರಗುಂದ- ನವಲಗುಂದದಲ್ಲಿ ರೈತರು 11 ವರ್ಷದಿಂದಲೂ ಹೋರಾಟ ಮಾಡುತ್ತಿದ್ದಾರೆ. ಆದರೆ ಮಹಾನಗರಕ್ಕೆ ಹಂಚಿಕೆಯಾಗಿರುವ ನೀರನ್ನು ತರುವ ಕುರಿತಂತೆ ಈವರೆಗೂ ಪಾಲಿಕೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ಸಾಮಾನ್ಯಸಭೆಯಲ್ಲೂ ಈ ಬಗ್ಗೆ ಚರ್ಚೆ ಕೂಡ ನಡೆದಿಲ್ಲ. ಪಾಲಿಕೆ ಈಗಲೂ ಕೃಷಿಗಾಗಿ ಮೀಸಲಿದ್ದ ನೀರನ್ನೇ ಬಳಸುತ್ತಿದೆ. ಆದಕಾರಣ ಪಾಲಿಕೆಯ ಮುಂದಿನ ಹೆಜ್ಜೆ ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ರೈತ ಸೇನಾ ಆಗ್ರಹಿಸಿತ್ತು.

ಈ ಹಿನ್ನೆಲೆಯಲ್ಲಿ ನಗರದ ಸವಾಯಿ ಗಂಧರ್ವ ಕಲಾಭವನದಲ್ಲಿ ರೈತ ಸೇನಾ ಕರ್ನಾಟಕ ಸಂಘಟನೆಯ ರೈತ ಮುಖಂಡರ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ, ಮಹದಾಯಿ ಮತ್ತು ಕಳಸಾ, ಬಂಡೂರಿ ಯೋಜನೆ, ನವಿಲುತೀರ್ಥ ಜಲಾಶಯದ ನೀರಿನ ಬಳಕೆ, ಅವಳಿ ನಗರದ ಕುಡಿಯುವ ನೀರಿನ ಅವಲಂಬನೆ ಹಾಗೂ ರೈತರ ನೀರಾವರಿ ಹಕ್ಕುಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಮಹದಾಯಿ ಮತ್ತು ಕಳಸಾ, ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ಹು–ಧಾ ಮಹಾನಗರ ಪಾಲಿಕೆ ಯಾವ ರೀತಿ ಬೆಂಬಲ ನೀಡಬಹುದು ಎಂಬ ಬಗ್ಗೆ ಚರ್ಚೆ ನಡೆಯಿತು.

ಕೆಲ ರೈತ ಮುಖಂಡರು, ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಸರ್ವಾನುಮತದ ನಿಲುವು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ದುರ್ಗಮ್ಮ ಬಿಜವಾಡ ಅವರು, ಪಾಲಿಕೆಯ ಎಲ್ಲ ಸದಸ್ಯರು, ಸ್ಥಳೀಯ ಶಾಸಕರು, ಸಚಿವರು ಹಾಗೂ ಮಹದಾಯಿ ಯೋಜನೆಯ ವ್ಯಾಪ್ತಿಗೆ ಒಳಪಡುವ ಎಲ್ಲ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಲಾಗುವುದು. ಈ ಕುರಿತು ನಾಲ್ಕು ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಭರವಸೆ ನೀಡಿದರು.ರೈತ ಸೇನಾ ಸಂಘಟನೆ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ‘ಕೃಷಿ ಉದ್ದೇಶಕ್ಕಾಗಿ ಮಲಪ್ರಭಾ ನದಿಗೆ ಅಡ್ಡಲಾಗಿ ನವಿಲುತೀರ್ಥ ಆಣೆಕಟ್ಟು ನಿರ್ಮಿಸಲಾಗಿದ್ದು, ಇದಕ್ಕಾಗಿ 36 ಗ್ರಾಮಗಳ ಜನರನ್ನು ಸ್ಥಳಾಂತರಿಸಲಾಗಿದೆ. ಸ್ಥಳೀಯರ ಗಮನಕ್ಕೆ ತರದೆ ಹು–ಧಾ ಮಹಾನಗರಕ್ಕೆ ನೀರು ಪೂರೈಸುವ ವ್ಯವಸ್ಥೆ ಅನುಷ್ಠಾನಗೊಳಿಸಲಾಯಿತು. ಇದರಿಂದ ಜಲಾಶಯದ ಮೂಲ ಉದ್ದೇಶವೇ ದಿಕ್ಕುತಪ್ಪಿ, ಸುತ್ತಲಿನ ರೈತರು ಕೃಷಿಗೆ ನೀರಿಲ್ಲದೆ ಪರದಾಡುವಂತಾಗಿದೆ’ ಎಂದರು.ಜಲಾಶಯದ ನೀರು ಯಾವ ವರ್ಷದಿಂದ, ಎಷ್ಟು ಬಳಕೆಯಾಗುತ್ತಿದೆ, ಕೈಗಾರಿಕೆಗಳಿಗೆ ಎಷ್ಟು ನೀರು ನೀಡಲಾಗುತ್ತಿದೆ, ಈ ಹಂಚಿಕೆಗೆ ಯಾರು ನಿರ್ದೇಶನ ನೀಡಿದ್ದಾರೆ. ಯಾವ ಯಾವ ನಗರಗಳಿಗೆ ನೀರು ಪೂರೈಸಲಾಗುತ್ತಿದೆ ಎನ್ನುವ ಸಂಪೂರ್ಣ ಮಾಹಿತಿ ಸಭೆಗೆ ನೀಡಬೇಕು ಎಂದು ಆಗ್ರಹಿಸಿದರು.

ಈ ಕುರಿತು ಮಾತನಾಡಿದ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ನೀರಸಾಗರದಿಂದ ಪ್ರತಿದಿನ 25 ಎಂಎಲ್‌ಡಿ ಹಾಗೂ ನವಿಲುತೀರ್ಥ ಜಲಾಶಯದಿಂದ 210-220 ಎಂಎಲ್‌ಡಿ ನೀರು, ಅಂದರೆ ವಾರ್ಷಿಕವಾಗಿ ಅಂದಾಜು 2 ಟಿಎಂಸಿ ನೀರನ್ನು ಅವಳಿ ನಗರಕ್ಕೆ ಪೂರೈಕೆಯಾಗುತ್ತಿದೆ. ನಗರದಲ್ಲಿರುವ ಎಲ್ಲ ಕೆರೆಗಳ ನೀರನ್ನು ಒಟ್ಟುಗೂಡಿಸಿದರೂ ವರ್ಷಕ್ಕೆ 1.50 ಟಿಎಂಸಿ ಆಗುವುದಿಲ್ಲ. ಹೀಗಾಗಿ ಜಲಾಶಯಗಳ ನೀರನ್ನು ಅವಲಂಬಿಸುವುದು ಅನಿವಾರ್ಯವಾಗಿದೆ ಎಂದರು.

ಕಳೆದ ವರ್ಷ ಈ ಸಮಯದಲ್ಲಿ ನವಿಲುತೀರ್ಥ ಜಲಾಶಯದಲ್ಲಿ 34 ಟಿಎಂಸಿ ನೀರು ಸಂಗ್ರಹವಿತ್ತು. ಪ್ರಸ್ತುತ 15 ಟಿಎಂಸಿ ಮಾತ್ರ ಇದ್ದು, ಶೇ.60ರಷ್ಟು ಇಳಿಕೆಯಾಗಿದೆ. ಸವದತ್ತಿಯಿಂದ ನಗರಕ್ಕೆ ನೀರು ಬರುವ ಮಾರ್ಗ ಮಧ್ಯದ 27 ಹಳ್ಳಿಗಳಿಗೂ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಉಪಮೇಯರ್ ರತ್ನಾಬಾಯಿ ನಾಜರೆ, ಸಭಾನಾಯಕ ಶಿವು ಮೆಣಸಿನಕಾಯಿ, ಶಿವು ಹಿರೇಮಠ, ಆರೀಫ್ ಭದ್ರಾಪುರ, ರಾಜಣ್ಣ ಕೊರವಿ, ಜಲಮಂಡಳಿ, ಕೆಯುಡಿಎಫ್‌ಸಿ ಹಾಗೂ ಎಲ್‌ ಆ್ಯಂಡ್‌ ಟಿ ಅಧಿಕಾರಿಗಳು, ರೈತರಾದ ಇರಪಣ್ಣ ಪಾಯಣ್ಣವರ, ಶಿವಪ್ಪ ಹೊರಕೇರಿ ಇದ್ದರು.ಹೂಳು, ಸಂಗ್ರಹ ಸಾಮರ್ಥ್ಯ ಕುಸಿತ’ನವಿಲುತೀರ್ಥ ಜಲಾಶಯ ನಿರ್ಮಾಣವಾಗಿ 56 ವರ್ಷಗಳಾಗಿದ್ದರೂ ಈವರೆಗೆ ಯಾಕಾಗಿ ಹೂಳು ಎತ್ತಿಲ್ಲ? ಇದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಕುಸಿಯುತ್ತಿದೆ ಎಂದು ಪಾಲಿಕೆ ಸದಸ್ಯ ಶಿವು ಹಿರೇಮಠ ಜಲಾಶಯದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹೂಳು ತುಂಬಿರುವುದರಿಂದ ಶೇ.10ರಷ್ಟು ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ಈ ಕುರಿತು ಸಮೀಕ್ಷೆ ನಡೆಸಲಾಗಿದ್ದು, ಹೂಳನ್ನು ಎಲ್ಲಿ ವಿಲೇವಾರಿ ಮಾಡಬೇಕು ಹಾಗೂ ಯಾವ ತಂತ್ರಜ್ಞಾನ ಬಳಸಿ ತೆಗೆಯಬೇಕು ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದರು.

ಮಹದಾಯಿಯಿಂದ ಅವಳಿನಗರಕ್ಕೆ ಕುಡಿಯುವ ನೀರಿಗಾಗಿ 3.9 ಟಿಎಂಸಿ ನೀರು ಹಂಚಿಕೆಯಾಗಿದೆ. ಅದನ್ನು ಬಳಸಿಕೊಳ್ಳುವ ಕುರಿತು ಪಾಲಿಕೆ ನಿರ್ಧಾರ ಪ್ರಕಟಿಸಬೇಕು. ಡಿ.6ರೊಳಗೆ ಪಾಲಿಕೆ ಸಭೆ ಕರೆದು ನಿರ್ಣಯ ಪ್ರಕಟಿಸಬೇಕು. ಇಲ್ಲದಿದ್ದಲ್ಲಿ ಪಾಲಿಕೆ ಆವರಣದಲ್ಲೇ ನಿರಂತರ ನಿರಶನ ನಡೆಸಲಾಗುವುದು.

ವೀರೇಶ ಸೊಬರದಮಠ, ರೈತಸೇನಾ ಅಧ್ಯಕ್ಷರು

ಮಹದಾಯಿಯಿಂದ ಲಾಭ ಆಗುವುದು ಹುಬ್ಬಳ್ಳಿ-ಧಾರವಾಡಕ್ಕೆ. ಅಲ್ಲಿನ ನೀರು ಬಂದರೆ ಈಗ ನೀವು ಬಳಸುತ್ತಿರುವ ನೀರು ಕೃಷಿಗೆ ಸಿಗುತ್ತದೆ ಎಂಬ ಲೆಕ್ಕ ನಮ್ಮದು. ಒಂದು ವೇಳೆ ಪಾಲಿಕೆ ಕ್ರಮ ಕೈಗೊಳ್ಳದಿದ್ದಲ್ಲಿ ನಗರಕ್ಕೆ ನೀರು ಸರಬರಾಜು ಮಾಡಲು ಬಿಡದೇ ಹೋರಾಟ ಮಾಡುತ್ತೇವೆ.

ಲೋಕನಾಥ ಹೆಬಸೂರ, ಹೋರಾಟಗಾರನಾಲ್ಕೈದು ದಿನಗಳಲ್ಲಿ ಜನಪ್ರತಿನಿಧಿಗಳ ಸಭೆ ಕರೆದು ನಿರ್ಣಯ ಕೈಗೊಳ್ಳುತ್ತೇವೆ. ಮಹದಾಯಿ ಹೋರಾಟಗಾರರಿಗೆ ನಮ್ಮ ಬೆಂಬಲ ಇದ್ದೇ ಇರುತ್ತದೆ.

ದುರ್ಗಮ್ಮ ಬಿಜವಾಡ, ಮೇಯರ್‌