ಭಾರತೀಯ ಪುರಾತತ್ವ ಇಲಾಖೆಯಿಂದ ಹಂಪಿಯಲ್ಲಿ ಉರುಳಿ ಬಿದ್ದ ಸಾಲು ಮಂಟಪಗಳ ಜೀರ್ಣೋದ್ಧಾರ

| Published : Jan 14 2025, 01:05 AM IST / Updated: Jan 14 2025, 11:46 AM IST

ಭಾರತೀಯ ಪುರಾತತ್ವ ಇಲಾಖೆಯಿಂದ ಹಂಪಿಯಲ್ಲಿ ಉರುಳಿ ಬಿದ್ದ ಸಾಲು ಮಂಟಪಗಳ ಜೀರ್ಣೋದ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಹಂಪಿಯಲ್ಲಿ ಉರುಳಿ ಬಿದ್ದ ಸಾಲು ಮಂಟಪಗಳ ಜೀರ್ಣೋದ್ಧಾರ ಕಾರ್ಯವನ್ನು ಭಾರತೀಯ ಪುರಾತತ್ವ ಇಲಾಖೆ ಸದ್ದಿಲ್ಲದೇ ಪೂರೈಸಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಉರುಳಿ ಬಿದ್ದ ಸಾಲು ಮಂಟಪಗಳ ಜೀರ್ಣೋದ್ಧಾರ ಕಾರ್ಯವನ್ನು ಭಾರತೀಯ ಪುರಾತತ್ವ ಇಲಾಖೆ ಸದ್ದಿಲ್ಲದೇ ಪೂರೈಸಿದೆ.

ಹಂಪಿಯ ಸಾಲು ಮಂಟಪಗಳಲ್ಲಿ ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನು ಬಳ್ಳದಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ವಿಜಯನಗರದ ಆಳರಸರ ಕಾಲದಲ್ಲಿ ಹಂಪಿಗೆ ಭೇಟಿ ನೀಡಿದ ಅಂದಿನ ವಿದೇಶಿ ರಾಯಭಾರಿಗಳೇ ಬಣ್ಣಿಸಿದ್ದಾರೆ. ಆಗಿನ ಕಾಲದ ಮಂಟಪಗಳು ಉರುಳಿ ಬಿದ್ದ ಹಿನ್ನೆಲೆಯಲ್ಲಿ ಈ ಐತಿಹಾಸಿಕ ಸ್ಮಾರಕಗಳನ್ನು ಸಹಜ ಸ್ಥಿತಿಯಲ್ಲಿ ಕಾಪಾಡಬೇಕೆಂಬ ಕೂಗು ಇತಿಹಾಸಪ್ರಿಯರು ಒತ್ತಾಯಿಸಿದ್ದರು. ಇದಕ್ಕೆ ಮನ್ನಣೆ ನೀಡಿದ ಕೇಂದ್ರ ಪುರಾತತ್ವ ಇಲಾಖೆಯ ಹಂಪಿ ವಲಯದ ಅಧಿಕಾರಿಗಳು ಜೀರ್ಣೋದ್ಧಾರ ಕಾರ್ಯ ಪೂರೈಸಿದ್ದಾರೆ.

ವೈಜ್ಞಾನಿಕ ತಳಹದಿಯಲ್ಲಿ ಜೀರ್ಣೋದ್ಧಾರ:

ಹಂಪಿಯ ಶ್ರೀ ವಿರೂಪಾಕ್ಷೇಶ್ವರ ರಥಬೀದಿಯ ಸಾಲು ಮಂಟಪಗಳು ಇತಿಹಾಸದ ಭಾಗವಾಗಿವೆ. ಹಾಗಾಗಿ ಈ ಮಂಟಪಗಳ ಪೈಕಿ ಎರಡು ಮಂಟಪಗಳು ಉರುಳಿ ಬಿದ್ದಿದ್ದವು. ಈ ಮಂಟಪಗಳನ್ನು ಸಹಜ ಸ್ಥಿತಿಯಲ್ಲೇ ಜೀರ್ಣೋದ್ಧಾರ ಮಾಡಲು ಪುರಾತತ್ವ ಇಲಾಖೆಯ ಹಂಪಿ ವಲಯದ ಅಧೀಕ್ಷಕ ನಿಹಿಲ್‌ ದಾಸ್‌ ಒಂದು ತಂಡವನ್ನು ರಚನೆ ಮಾಡಿದರು. ಈ ತಂಡ ಮೊದಲು ಈ ಮಂಟಪಗಳ ವಾಸ್ತು ಶಿಲ್ಪ ಸಂರಚನೆ ಕುರಿತು ಅಧ್ಯಯನ ಮಾಡಿ, ಅದೇ ಮಾದರಿಯಲ್ಲಿ ಈಗ ಮಂಟಪಗಳನ್ನು ಜೀರ್ಣೋದ್ಧಾರ ಮಾಡಿದೆ.

ಪುರಾತತ್ವ ಇಲಾಖೆಯ ಪರಿಣತ ಎಂಜಿನಿಯರ್‌ ಭರಣಿಧರನ್‌, ಸಹಾಯಕ ಎಂಜಿನಿಯರ್‌ ವಿನೋಜ್‌ಕುಮಾರ ಮತ್ತು ಸಂರಕ್ಷಣಾಧಿಕಾರಿ ಅನಿರುದ್ಧ ದೇಸಾಯಿ ವಿಜಯನಗರ ಆಳರಸರ ಕಾಲದ ವಾಸ್ತುಶಿಲ್ಪ ಮಾದರಿಯಲ್ಲೇ ಜೀರ್ಣೋದ್ಧಾರ ಮಾಡಿದ್ದಾರೆ. ಈಗ ಈ ಮಂಟಪಗಳ ಚಾವಣಿಯಲ್ಲಿ ಮಳೆ ನೀರು ಸೋರಿಕೆಯಾಗದಂತೆ ಗಾರೆ ಬಳಸಿ, ನಾಜೂಕಾಗಿ ಕಾಮಗಾರಿ ಕೈಗೊಂಡಿದ್ದಾರೆ. ಈಗ ಕಾಮಗಾರಿ ಮುಗಿಯುವ ಹಂತದಲ್ಲಿದೆ.

ವಿಶ್ವ ಪಾರಂಪರಿಕ ಮಂಟಪಗಳು:

ಹಂಪಿಯ ಸ್ಮಾರಕಗಳ ಗುಚ್ಛವನ್ನು ಯುನೆಸ್ಕೊ 1986ರಲ್ಲೇ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ. ಅದರಲ್ಲೂ ಸಾಲು ಮಂಟಪಗಳನ್ನು ನೋಡಲು ದೇಶ, ವಿದೇಶಿ ಪ್ರವಾಸಿಗರು ಹಾತೊರೆಯುತ್ತಾರೆ. ಜೊತೆಗೆ ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ಮಂಟಪಗಳೇ ಮಳೆ-ಗಾಳಿಗೆ ಉರುಳಿ ಬೀಳುತ್ತಿರುವುದರಿಂದ ಇವುಗಳನ್ನು ಜೀರ್ಣೋದ್ಧಾರ ಮಾಡುವ ಕಾರ್ಯವನ್ನು ಪುರಾತತ್ವ ಇಲಾಖೆ ಕೈಗೊಂಡಿದೆ. ಇದರ ಭಾಗವಾಗಿ ಈಗ ಎರಡು ಮಂಟಪಗಳನ್ನು ಸ್ಥಳೀಯ ಪರಿಣತ ಎಂಜಿನಿಯರ್‌ಗಳ ಮಾರ್ಗದರ್ಶನದಲ್ಲೇ ಯಶಸ್ವಿಯಾಗಿ ಜೀರ್ಣೋದ್ಧಾರ ಮಾಡಲಾಗಿದೆ.

ಹಂಪಿಯ ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಕಾರ್ಯವನ್ನು ಪುರಾತತ್ವ ಇಲಾಖೆ ಕೈಗೊಂಡಿರುವುದು ಉತ್ತಮ ಕೆಲಸವಾಗಿದೆ. ಈ ಮಾದರಿಯ ಕೆಲಸಗಳನ್ನು ಮಾಡಿದರೆ, ಪ್ರವಾಸೋದ್ಯಮ ಕೂಡ ಬೆಳವಣಿಗೆ ಹೊಂದಲಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಹಂಪಿಯ ಶ್ರೀವಿರೂಪಾಕ್ಷೇಶ್ವರ ರಥಬೀದಿಯ ಸಾಲು ಮಂಟಪಗಳು ಉರುಳಿ ಬಿದ್ದ ಬಳಿಕ ಪುರಾತತ್ವ ಇಲಾಖೆಗೆ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲು ಸೂಚಿಸಲಾಗಿತ್ತು. ಪುರಾತತ್ವ ಇಲಾಖೆ ಜೀರ್ಣೋದ್ಧಾರ ಕೈಗೊಂಡಿದ್ದು, ಮುಗಿಯುವ ಹಂತಕ್ಕೆ ಬಂದಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌.

ಹಂಪಿಯಲ್ಲಿ ಸಾಲು ಮಂಟಪಗಳನ್ನು ಜೀರ್ಣೋದ್ಧಾರ ಮಾಡಲು ಸ್ಥಳೀಯ ಅಧಿಕಾರಿಗಳ ತಂಡ ರಚನೆ ಮಾಡಿತ್ತು. ಈ ತಂಡ ಎರಡು ತಿಂಗಳಲ್ಲಿ ಜೀರ್ಣೋದ್ಧಾರ ಕಾರ್ಯ ಮಾಡಿದೆ. ಚಾವಣಿ ಕಾರ್ಯ ಮುಗಿಯುವ ಹಂತಕ್ಕೆ ಬಂದಿದೆ ಎನ್ನುತ್ತಾರೆ ಭಾರತೀಯ ಪುರಾತತ್ವ ಇಲಾಖೆಯ ಹಂಪಿ ವಲಯದ ಅಧೀಕ್ಷಕ ನಿಹಿಲ್‌ದಾಸ್‌.