ಬಸ್‌ನಿಲ್ದಾಣಕ್ಕೆ ಖಾಸಗಿ ಬಸ್‌ ಪ್ರವೇಶ ನಿರ್ಬಂಧ: ಆಕ್ರೋಶ

| Published : Jul 06 2025, 01:48 AM IST

ಬಸ್‌ನಿಲ್ದಾಣಕ್ಕೆ ಖಾಸಗಿ ಬಸ್‌ ಪ್ರವೇಶ ನಿರ್ಬಂಧ: ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಬಿಎಂಟಿಸಿ ಬಸ್ ನಿಲ್ದಾಣ ಎಂದ ಕೂಡಲೇ 200 ಮೀಟರ್ ವ್ಯಾಪ್ತಿಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬಾರದು ಎಂಬ ನಿಯಮವನ್ನೂ ಮಾಡುತ್ತಾರೆ. ಇದರಿಂದ ಖಾಸಗಿ ಬಸ್ ಮಾಲೀಕರು ಮತ್ತು ಕಾರ್ಮಿಕರ ಮೇಲೆ ಹೊಡೆತ ಬೀಳುತ್ತದೆ.

ದೊಡ್ಡಬಳ್ಳಾಪುರ: ನಗರದ ಕೊಂಗಾಡಿಯಪ್ಪ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳ ಪ್ರವೇಶಕ್ಕೆ ನಿಷೇಧ ಹೇರಿದ್ದು, ಸದರಿ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ದಿಢೀರ್‌ ಕ್ರಮ ವಿರೋಧಿಸಿ ಶನಿವಾರ ಖಾಸಗಿ ಬಸ್ ಮಾಲೀಕರು, ಸಿಬ್ಬಂದಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಮುಖಂಡರು, ದೊಡ್ಡಬಳ್ಳಾಪುರ ಹಳೇ ಬಸ್‌ನಿಲ್ದಾಣ (ಪ್ರಸ್ತುತ ಕೊಂಗಾಡಿಯಪ್ಪ ಬಸ್ ನಿಲ್ದಾಣ) ಖಾಸಗಿ ಬಸ್ ಗಳ ನಿಲ್ದಾಣವಾಗಿದ್ದು, 1935 ರಿಂದ ಚಾಲ್ತಿಯಲ್ಲಿದೆ. ದೊಡ್ಡಬಳ್ಳಾಪುರ ಸುತ್ತಮುತ್ತಲಿನ ಊರುಗಳಿಗೆ ಇಲ್ಲಿಂದ ಖಾಸಗಿ ಬಸ್ ಗಳು ಸಂಚಾರ ಮಾಡುತ್ತಿದ್ದವು. ಈ ಬಸ್ ನಿಲ್ದಾಣದಲ್ಲಿ 112 ಖಾಸಗಿ ಬಸ್‌ಗಳು ಸಂಚಾರ ಮಾಡುತ್ತಿದ್ದವು. ಒಂದು ಬಸ್ ಸಂಚಾರದಿಂದ ಸುಮಾರು 15 ಜನ ಬದುಕು ಕಟ್ಟಿಕೊಳ್ಳುತ್ತಾರೆ. ಬಸ್ ಮಾಲೀಕರು ಮತ್ತು ಕಾರ್ಮಿಕರು ಇದನ್ನೇ ನಂಬಿ ಜೀವನ ನಡೆಸುತ್ತಿದ್ದರು. ಇದೀಗ ಇದು ಬಿಎಂಟಿಸಿ ಬಸ್ ನಿಲ್ದಾಣ, ಖಾಸಗಿ ವಾಹನಗಳ ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ ಎಂಬ ಫಲಕ ಹಾಕಲಾಗಿದೆ. ಬಿಎಂಟಿಸಿ ಬಸ್ ನಿಲ್ದಾಣ ಎಂದ ಕೂಡಲೇ 200 ಮೀಟರ್ ವ್ಯಾಪ್ತಿಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬಾರದು ಎಂಬ ನಿಯಮವನ್ನೂ ಮಾಡುತ್ತಾರೆ. ಇದರಿಂದ ಖಾಸಗಿ ಬಸ್ ಮಾಲೀಕರು ಮತ್ತು ಕಾರ್ಮಿಕರ ಮೇಲೆ ಹೊಡೆತ ಬೀಳುತ್ತದೆ. ಖಾಸಗಿ ವಾಹನಗಳ ನಿಲುಗಡೆ ಮಾಡದಂತೆ ಅಳವಡಿಸಿರುವ ನಾಮಫಲಕವನ್ನು ನಗರಸಭೆ ಈ ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ಬೋರ್ಡ್‌ ಅಳವಡಿಕೆ ಬಗ್ಗೆ ಯಾವುದೇ ಪ್ರಕಟಣೆ, ನೋಟಿಸ್‌ ನೀಡಿಲ್ಲ. ಏಕಾಏಕಿ ನಿರ್ಧಾರ ಕೈಗೊಳ್ಳಲಾಗಿದೆ. ನಗರಸಭೆ ಅಧಿಕಾರಿಗಳು ಕೂಡಲೇ ನಿರ್ಬಂಧ ತೆರವುಗೊಳಿಸಲು ಸಂಬಂಧ ಪಟ್ಟವರಿಗೆ ಆದೇಶಿಸುವಂತೆ ಮನವಿ ಮಾಡಿದರು.

ಮುಖಂಡರಾದ ವಿಕ್ರಮ್, ಪ್ರಶಾಂತ್, ಕುಮಾರಸ್ವಾಮಿ ಮೊದಲಿಯಾರ್, ಗೀತೇಶ್, ರುದ್ರಪ್ಪ, ಹನೀಶ್, ರಾಮಕೃಷ್ಣಪ್ಪ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.