ಕನ್ನಡಪ್ರಭ ವಾರ್ತೆ ಬೆಳಗಾವಿಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲು ಪೊಲೀಸರ ಸಂಪೂರ್ಣ ಸಹಕಾರವಿದೆ. ಆದರೆ, ಹಬ್ಬದ ಹೆಸರಿನಲ್ಲಿ ನಿಯಮ ಉಲ್ಲಂಘನೆ, ಅತಿಯಾದ ಡಿಜೆ ಶಬ್ದ ಹಾಗೂ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತರುವ ಚಟುವಟಿಕೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ನೂತನ ಪೊಲೀಸ್ ಆಯುಕ್ತ ನಿಕ್ಕಂ ಪ್ರಕಾಶ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲು ಪೊಲೀಸರ ಸಂಪೂರ್ಣ ಸಹಕಾರವಿದೆ. ಆದರೆ, ಹಬ್ಬದ ಹೆಸರಿನಲ್ಲಿ ನಿಯಮ ಉಲ್ಲಂಘನೆ, ಅತಿಯಾದ ಡಿಜೆ ಶಬ್ದ ಹಾಗೂ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತರುವ ಚಟುವಟಿಕೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ನೂತನ ಪೊಲೀಸ್ ಆಯುಕ್ತ ನಿಕ್ಕಂ ಪ್ರಕಾಶ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಮೂರ್ತಿಗಳ ಆಗಮನ ಮೆರವಣಿಗೆ ರಾತ್ರಿ 10 ಗಂಟೆಯೊಳಗೆ ಪೂರ್ಣಗೊಳ್ಳಬೇಕು. ನಿಗದಿಪಡಿಸಿರುವ ಮೆರವಣಿಗೆ ಮಾರ್ಗವನ್ನು ಕೊನೆಯ ಕ್ಷಣದಲ್ಲಿ ಬದಲಿಸಲು ಅವಕಾಶವಿಲ್ಲ. ಬದಲಾವಣೆ ಅಗತ್ಯವಿದ್ದರೆ ಮೊದಲೇ ಪೊಲೀಸರೊಂದಿಗೆ ಚರ್ಚಿಸಬೇಕು. ಅತಿಯಾದ ಡಿಜೆ ಶಬ್ದಕ್ಕೂ ಕಡಿವಾಣ ಹಾಕಲಾಗುವುದು. ಲೇಸರ್‌ ಹಾಗೂ ಪ್ಲಾಸ್ಮಾ ಲೈಟ್‌ಗಳ ಬಳಕೆಗೆ ಸಂಪೂರ್ಣ ನಿರ್ಬಂಧವಿದ್ದು, ಬಳಕೆ ಕಂಡುಬಂದರೆ ವಶಕ್ಕೆ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಗಣೇಶೋತ್ಸವದ ಬಂದೋಬಸ್ತ್‌ಗಾಗಿ ಪೊಲೀಸ್ ಇಲಾಖೆ ಹಬ್ಬದ ಮುನ್ನಾದಿನ ಸಿದ್ಧತೆ ಆರಂಭಿಸುವುದಿಲ್ಲ. ಸುಮಾರು ಎರಡು ತಿಂಗಳ ಹಿಂದಿನಿಂದಲೇ ಯೋಜನೆ ರೂಪಿಸಲಾಗುತ್ತದೆ. ಯಾವ ಪ್ರದೇಶದಲ್ಲಿ ಎಷ್ಟು ಸಿಬ್ಬಂದಿ ಅಗತ್ಯ, ಯಾವ ಅಧಿಕಾರಿಯನ್ನು ಎಲ್ಲಿ ನಿಯೋಜಿಸಬೇಕು, ಯಾವ ಮಾರ್ಗದಲ್ಲಿ ಹೆಚ್ಚಿನ ಜನಸಂದಣಿ ಉಂಟಾಗಬಹುದು ಎಂಬುವುದನ್ನು ಗುಪ್ತಚರ ಮಾಹಿತಿ ಹಾಗೂ ಹಿಂದಿನ ಅನುಭವದ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಈ ಸಿದ್ಧತೆಯ ಬಳಿಕ ಮೆರವಣಿಗೆ ಹೊರಡುವ ಸಮಯದಲ್ಲಿ ಈ ಮಾರ್ಗ ಬೇಡ ಬೇರೆ ಮಾರ್ಗದಲ್ಲೇ ಹೋಗುತ್ತೇವೆಂದರೇ ಇಡೀ ಬಂದೋಬಸ್ತ್ ವ್ಯವಸ್ಥೆಯೇ ಅಸ್ತವ್ಯಸ್ತವಾಗುತ್ತದೆ. ಹೀಗಾಗಿ ಕೊನೆಯ ಕ್ಷಣದ ಬದಲಾವಣೆಗಳಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದರು.36 ಗಂಟೆ ಬಂದೋಬಸ್ತ್ ಬೇಡ:

ಬೆಳಗಾವಿಯ ಗಣೇಶ ವಿಸರ್ಜನಾ ಮೆರವಣಿಗೆ ಪೊಲೀಸರಿಗೂ ದೊಡ್ಡ ಸವಾಲಾಗಿದೆ. ಕಳೆದ ಬಾರಿ ಸುಮಾರು 36 ಗಂಟೆಗಳ ಕಾಲ ಬಂದೋಬಸ್ತ್ ಮುಂದುವರಿದಿರುವ ಮಾಹಿತಿ ಇದೆ. ಇಷ್ಟು ದೀರ್ಘ ಅವಧಿ ನಿರಂತರ ಕರ್ತವ್ಯ ನಿರ್ವಹಿಸುವುದು ಸಿಬ್ಬಂದಿಯ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯದ ಮೇಲೂ ಒತ್ತಡವುಂಟು ಮಾಡುತ್ತದೆ. ಹಿಂದೆ ಮೊದಲು ಯಾರು ವಿಸರ್ಜನೆ ಮಾಡುತ್ತಾರೆ ಎಂಬ ಪೈಪೋಟಿ ಇತ್ತು. ಈಗ ಕೊನೆಯದಾಗಿ ಯಾರು ಉಳಿಯುತ್ತಾರೆ ಎಂಬ ಪೈಪೋಟಿ ಶುರುವಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.10-15 ವರ್ಷಗಳ ಹಿಂದೆ ಡಿಜೆ ಎಂದರೆ ಒಂದೆರಡು ಸ್ಪೀಕರ್‌ಗಳಿಗೆ ಸೀಮಿತವಾಗಿತ್ತು. ಈಗ ಸ್ಪೀಕರ್‌ಗಳನ್ನು ಒಂದರ ಮೇಲೊಂದು ಜೋಡಿಸಿ ದೊಡ್ಡ ಗೋಡೆಯಂತೆ ನಿರ್ಮಿಸಲಾಗುತ್ತಿದೆ. ಅತಿಯಾದ ಶಬ್ದದ ಪರಿಣಾಮವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಡಿಜೆ ಬಳಸಿ. ಆದರೆ ಅದು ನಿಮಗೂ ಒಳ್ಳೆಯದಾಗಿರಬೇಕು. ಪೊಲೀಸರಿಗೂ ತೊಂದರೆಯಾಗಬಾರದು. ಸಮಾಜಕ್ಕೂ ಹಾನಿಯಾಗಬಾರದು ಎಂದು ಸಲಹೆ ನೀಡಿದರು.ನಿಕ್ಕಂಗೆ ಮೊದಲ ಪರೀಕ್ಷೆ:

ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ನಿಕ್ಕಂ ಪ್ರಕಾಶ ಅವರಿಗೆ ಬೆಳಗಾವಿಯಲ್ಲಿ ಎದುರಾಗಿರುವ ಮೊದಲ ದೊಡ್ಡ ಕಾನೂನು ಸುವ್ಯವಸ್ಥೆಯ ಪರೀಕ್ಷೆ ಗಣೇಶೋತ್ಸವವಾಗಿದೆ. ಹಬ್ಬದ ವೈಭವಕ್ಕೆ ಧಕ್ಕೆಯಾಗದಂತೆ, ಅತಿರೇಕಕ್ಕೂ ಅವಕಾಶ ನೀಡದೆ ಸಮತೋಲನ ಕಾಯ್ದುಕೊಳ್ಳುವುದು ಸವಾಲಾಗಿದೆ.ನಾನು ಹೊಸದಾಗಿ ಬಂದಿದ್ದೇನೆ. ಹಿಂದಿನ ಅಧಿಕಾರಿಗಳು ಮಂಡಳಿಗಳೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದಾರೆ. ಈಗ ಪೊಲೀಸರು ಮತ್ತು ಮಂಡಳಿಗಳು ಒಂದೇ ತಂಡವಾಗಿ ಕೆಲಸ ಮಾಡಬೇಕು. ಬೆಳಗಾವಿಯ ಗಣೇಶೋತ್ಸವಕ್ಕೆ ಒಳ್ಳೆಯ ಹೆಸರು ತರಬೇಕು ಎಂದರು.ಮುಂದಿನ 15-20 ದಿನಗಳು ಪೊಲೀಸರಿಗೆ ನಿದ್ದೆಯಿಲ್ಲದ ದಿನ-ರಾತ್ರಿಗಳಾಗಲಿವೆ. ಬೆಳಗಾವಿ ಮೂರು ರಾಜ್ಯಗಳ ಸಂಗಮ ಪ್ರದೇಶವಾಗಿರುವುದರಿಂದ ಇಲ್ಲಿ ಯಾವುದೇ ಅಹಿತಕರ ಘಟನೆ ನಡೆದರೂ ಅದರ ಪರಿಣಾಮ ನೆರೆಯ ರಾಜ್ಯಗಳ ಮೇಲೂ ಬೀರುವ ಸಾಧ್ಯತೆಯಿದೆ. ಹೀಗಾಗಿ ಸಾರ್ವಜನಿಕರು ಹಾಗೂ ಗಣೇಶೋತ್ಸವ ಮಂಡಳಿಗಳು ಪೊಲೀಸರ ಪರಿಸ್ಥಿತಿಯನ್ನೂ ಅರ್ಥಮಾಡಿಕೊಂಡು ಸಹಕರಿಸಬೇಕು ಎಂದು ಮನವಿ ಮಾಡಿದರು.

ಗಣೇಶೋತ್ಸವ ಮಂಡಳಿಗಳು ವಿವಿಧ ಇಲಾಖೆಗಳ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಏಕಗವಾಕ್ಷಿ ವ್ಯವಸ್ಥೆ ಆರಂಭಿಸಲಾಗಿದೆ. ಪಾಲಿಕೆ ಅಥವಾ ಜಿಲ್ಲಾಡಳಿತಕ್ಕೆ ಸಂಬಂಧಿಸಿದ ಸಮಸ್ಯೆಗಳು ಪೊಲೀಸ್ ಇಲಾಖೆಯ ನೇರ ಹೊಣೆಗಾರಿಕೆಯಲ್ಲದಿದ್ದರೂ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು.

-ನಿಕ್ಕಂ ಪ್ರಕಾಶ, ಪೊಲೀಸ್ ಆಯುಕ್ತರು.