ಪ್ರವಾಸಿಗರಿಗೆ ನಿರ್ಬಂಧ: ಇಡೀ ಜಿಲ್ಲೆಗೆ ಅನ್ವಯವಾಗುವಂತ ಆದೇಶ ಸಲ್ಲದು

| Published : Oct 25 2024, 12:45 AM IST

ಸಾರಾಂಶ

ಚಿಕ್ಕಮಗಳೂರು, ಅತಿಯಾದ ಮಳೆ ಹಾಗೂ ಇನ್ನಿತರ ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರುವ ಸಂದರ್ಭದಲ್ಲಿ ಇಡೀ ಜಿಲ್ಲೆಗೆ ಅನ್ವಯವಾಗುವಂತೆ ಏಕ ಆದೇಶ ಮಾಡಬಾರದು ಎಂದು ಜಿಲ್ಲಾ ರೆಸಾರ್ಟ್‌ ಮಾಲೀಕರ ಸಂಘದ ಅಧ್ಯಕ್ಷ ಎಸ್‌.ಎನ್‌. ರಮೇಶ್‌ ಆಗ್ರಹಿಸಿದ್ದಾರೆ.

ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಆದೇಶ ಮಾಡಲು ಡಿಸಿಗೆ ಮನವಿ: : ರಮೇಶ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅತಿಯಾದ ಮಳೆ ಹಾಗೂ ಇನ್ನಿತರ ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರುವ ಸಂದರ್ಭದಲ್ಲಿ ಇಡೀ ಜಿಲ್ಲೆಗೆ ಅನ್ವಯವಾಗುವಂತೆ ಏಕ ಆದೇಶ ಮಾಡಬಾರದು ಎಂದು ಜಿಲ್ಲಾ ರೆಸಾರ್ಟ್‌ ಮಾಲೀಕರ ಸಂಘದ ಅಧ್ಯಕ್ಷ ಎಸ್‌.ಎನ್‌. ರಮೇಶ್‌ ಆಗ್ರಹಿಸಿದ್ದಾರೆ.

ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಆದೇಶ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಗೆ ಪ್ರವಾಸಿಗರಿಗೆ ನಿರ್ಬಂಧ ಎಂಬ ಆದೇಶ ಪ್ರವಾಸಿಗರಿಗೆ ಮಾತ್ರವಲ್ಲ, ಪ್ರವಾಸೋದ್ಯಮ ಅವಲಂಬಿಸಿರುವ ರೆಸಾರ್ಟ್‌, ಹೋಂ ಸ್ಟೇ, ಹೋಟೆಲ್‌ ಉದ್ಯಮಕ್ಕೆ ತೊಂದರೆಯಾಗುತ್ತಿದೆ ಎಂದ ಅವರು, ಚಿಕ್ಕಮಗಳೂರು ಜಿಲ್ಲೆ ಭೌಗೋಳಿಕವಾಗಿ ಒಂದು ವಿಶಿಷ್ಟ ಸ್ಥಾನ ಪಡೆದಿದ್ದು, ಪ್ರಕೃತಿ ವಿಕೋಪಕ್ಕೆ ಒಳಗಾಗುವ ಸೂಕ್ಷ್ಮ ಪ್ರದೇಶಗಳಿಗೆ ಮಾತ್ರ ಅನ್ವಯವಾಗುವಂತೆ ಆದೇಶ ಹೊರಡಿಸಬೇಕೆಂದು ಮನವಿ ಮಾಡಿದರು.

ಮಳೆ ಹಾಗೂ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಎಲ್ಲಾ ಭಾಗದಲ್ಲಿಯೂ ತೊಂದರೆಯಾಗುವುದಿಲ್ಲ. ಗಿರಿ ಪ್ರದೇಶಗಳನ್ನು ಹೊರತುಪಡಿಸಿ ಬಯಲು ಪ್ರದೇಶದಲ್ಲಿರುವ ಬೆಳವಾಡಿ ಸೇರಿದಂತೆ ಇನ್ನಿತರ ಪ್ರವಾಸಿ ಸ್ಥಳದಲ್ಲಿ ಅಪಾಯದ ಪರಿಸ್ಥಿತಿ ಎದುರಾಗುವುದಿಲ್ಲ. ಇದನ್ನು ಪರಿಗಣಿಸದೆ ಜಿಲ್ಲೆಗೆ ಬರುವ ಎಲ್ಲಾ ಪ್ರವಾಸಿಗರಿಗೆ ನಿರ್ಬಂಧ ಹೇರಿದರೆ ರೆಸಾರ್ಟ್ ಉದ್ಯಮಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ ಎಂದರು.

ಪ್ರವಾಸೋದ್ಯಮ ಈ ಜಿಲ್ಲೆಯ ಪ್ರಮುಖ ಅಭಿವೃದ್ಧಿ ಮೂಲವಾಗಿದ್ದು, ಸರಾಸರಿ ತಿಂಗಳಿಗೆ 2 ರಿಂದ 2.50 ಕೋಟಿ ರು. ಮೊತ್ತದ ಹಣ ಜಿಎಸ್‌ಟಿ ಮೂಲಕ ಸರ್ಕಾರಕ್ಕೆ ಸಂದಾಯವಾಗುತ್ತಿದೆ. ರೆಸಾರ್ಟ್ ಹಾಗೂ ಹೋಟೆಲ್ ಉದ್ಯಮದಿಂದ ಸರ್ಕಾರಕ್ಕೆ ಸಾಕಷ್ಟು ತೆರಿಗೆ ಪಾವತಿಯಾಗುತ್ತಿದ್ದು, ಪ್ರವಾಸಿಗರನ್ನು ಸಂಪೂರ್ಣವಾಗಿ ನಿರ್ಬಂಧಿಸಿದರೆ ರೆಸಾರ್ಟ್, ಹೋಂ ಸ್ಟೇ ಹಾಗೂ ಹೋಟೆಲ್ ಉದ್ಯಮಕ್ಕೆ ತೊಂದರೆಯಾಗಲಿದೆ ಎಂದು ಹೇಳಿದರು.

ಅಪಾರ ಪ್ರಮಾಣದ ಬಂಡವಾಳ ಹೂಡಿ ರೆಸಾರ್ಟ್ ಹಾಗೂ ಹೋಟೆಲ್ ನಡೆಸುತ್ತಿದ್ದು ಪ್ರವಾಸಿಗರು ಬರದಿದ್ದರೆ ವ್ಯವಹಾರಕ್ಕೆ ಧಕ್ಕೆಯಾಗುತ್ತದೆ. ಇದರಿಂದ ರೆಸಾರ್ಟ್ ಮಾಲೀಕರು ಸಂಕಷ್ಟಕ್ಕೊಳಗಾಗಲಿದ್ದು, ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪೂರಕವಾದ ರೆಸಾರ್ಟ್‌ಗಳ ಬಗ್ಗೆಯೂ ಜಿಲ್ಲಾಡಳಿತದ ಸಹಕಾರ ಮುಖ್ಯವಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಹೇಮಂತ್‌ಕುಮಾರ್, ಜಂಟಿ ಕಾರ್ಯದರ್ಶಿ ಪರಮೇಶ್ ಕೀರ್ತಿ, ಖಜಾಂಚಿ ಎಂ.ಪಿ. ಚೇತನ್, ಕಾರ್ಯದರ್ಶಿ ರಂಗರಾಜ್ ಹಾಗೂ ಚಿಕ್ಕಮಗಳೂರು ಹೋಟೆಲ್‌ ಮಾಲೀಕರ ಸಂಘದ ಉಪಾಧ್ಯಕ್ಷ ಆನಂದ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಪೋಟೋ ಫೈಲ್‌ ನೇಮ್‌ 24 ಕೆಸಿಕೆಎಂ 7