ಇಂದು ಮಧ್ಯಾಹ್ನದೊಳಗೆ ಫಲಿತಾಂಶ ಸಾಧ್ಯತೆ

| Published : Jun 04 2024, 12:32 AM IST

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಇಂದು ಪ್ರಕಟಗೊಳ್ಳಲಿದ್ದು, ಮತ ಎಣಿಕೆಗೆ ಎಲ್ಲ ಅಂತಿಮ ಸಿದ್ಧತೆ ನಡೆದಿದೆ. ಬೆಳಗ್ಗೆ 6.30ಕ್ಕೆ ಭದ್ರತಾ ಕೊಠಡಿಗಳನ್ನು ಅಭ್ಯರ್ಥಿಗಳು, ಅಭ್ಯರ್ಥಿಗಳ ಏಜೆಂಟರ ಸಮಕ್ಷಮ ತೆರೆಯುವ ಮೂಲಕ ಮತ ಎಣಿಕೆ ಪ್ರಕ್ರಿಯೆ ವಿದ್ಯುಕ್ತವಾಗಿ ಆರಂಭವಾಗಲಿದೆ.

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಇಂದು ಪ್ರಕಟಗೊಳ್ಳಲಿದ್ದು, ಮತ ಎಣಿಕೆಗೆ ಎಲ್ಲ ಅಂತಿಮ ಸಿದ್ಧತೆ ನಡೆದಿದೆ. ಬೆಳಗ್ಗೆ 6.30ಕ್ಕೆ ಭದ್ರತಾ ಕೊಠಡಿಗಳನ್ನು ಅಭ್ಯರ್ಥಿಗಳು, ಅಭ್ಯರ್ಥಿಗಳ ಏಜೆಂಟರ ಸಮಕ್ಷಮ ತೆರೆಯುವ ಮೂಲಕ ಮತ ಎಣಿಕೆ ಪ್ರಕ್ರಿಯೆ ವಿದ್ಯುಕ್ತವಾಗಿ ಆರಂಭವಾಗಲಿದೆ.

ಬೆಳಗ್ಗೆ 8ರಿಂದ ಮತ ಎಣಿಕೆ ಶುರುವಾಗಲಿದೆ. ವಿಜಯನಗರ ಜಿಲ್ಲೆಯ ಭಾಗವಾದ ಹರಪನಹಳ್ಳಿ ಸೇರಿದಂತೆ ದಾವಣಗೆರೆ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ 14 ಟೇಬಲ್ ಸ್ಥಾಪಿಸಲಾಗಿದೆ. 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನರ, ಅಗತ್ಯ ಸೇವೆಗಳ ಗೈರು ಹಾಜರಿ ಮತದಾರರು, ಚುನಾವಣಾ ಕರ್ತವ್ಯ ನಿರತರು ಸೇರಿದಂತೆ 4918 ಅಂಚೆ ಮತಪತ್ರಗಳ ಎಣಿಕೆಗೆ 12 ಟೇಬಲ್ ಇರಲಿವೆ. ಪ್ರತಿ ಟೇಬಲ್ ಗೆ ಒಬ್ಬ ಸಹಾಯಕ ಚುನಾವಣಾಧಿಕಾರಿ, ಎಣಿಕೆ ಮೇಲ್ವಿಚಾರಕ, ಎಣಿಕೆ ಸಹಾಯಕರ ನೇಮಿಸಲಾಗಿದೆ. 565 ಸೇವಾ ಮತದಾರರಿಗೆ ಇಟಿಪಿಬಿಎಂಎಸ್ ತಂತ್ರಾಂಶದ ಮೂಲಕ ಮತಪತ್ರ ಕಳುಹಿಸಲಾಗಿದ್ದು, ಎಣಿಕೆ ದಿನ ಬೆಳಿಗ್ಗೆ 7.59ರವರೆಗೆ ಸ್ವೀಕೃತವಾಗುವ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಇದಕ್ಕಾಗಿ 1 ಟೇಬಲ್ ಮೀಸಲಿರಿಸಿದ್ದು, 4 ಜನ ತಾಂತ್ರಿಕ ಸಿಬ್ಬಂದಿ ನೇಮಕ ಮಾಡಲಾಗಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 667742 ಪುರುಷ, 647964 ಮಹಿಳೆಯರು, 40 ಇತರೆ ಸೇರಿ 13,15,746 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಕ್ಷೇತ್ರದಲ್ಲಿ ಶೇ.76.98ರಷ್ಟು ಮತದಾನವಾಗಿತ್ತು. ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ, ಕಾಂಗ್ರೆಸ್ ಪಕ್ಷದಿಂದ ಡಾ.ಪ್ರಭಾ ಮಲ್ಲಿಕಾರ್ಜುನ, ಪಕ್ಷೇತರರಾಗಿ ಬಿ.ಜಿ.ವಿನಯ ಕುಮಾರ ಸೇರಿದಂತೆ ಚುನಾವಣಾ 30 ಅಭ್ಯರ್ಥಿಗಳು ಕಣದಲ್ಲಿರುವ ಹಾಗೂ ನೋಟಾ ಸಹಿತ ೩೧ ಕ್ರಮಾಂಕಗಳನ್ನು ನೋಡಬೇಕಾಗಿದೆ. ಆಧ್ದರಿಂದ ಎಣಿಕೆ ಮುಕ್ತಾಯದ ಅವಧಿ ಹೆಚ್ಚಳ ಆಗಬಹುದು ಎನ್ನಲಾಗಿದೆ.ಪಟಾಕಿ, ವಿಜಯೋತ್ಸವ, ಮೆರವಣಿಗೆ ರದ್ದು:

ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಮಾತನಾಡಿ, ಪ್ರತಿ ಸುತ್ತಿನ ಎಣಿಕೆ ನಂತರ ಸಾರ್ವಜನಿಕವಾಗಿ ಧ್ವನಿವರ್ಧಕದ ಮೂಲಕ ಎಣಿಕೆ ವಿವರ ಪ್ರಚಾರ ಮಾಡಲಾಗುತ್ತದೆ. ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾದ್ಯಂತ 144 ಸೆಕ್ಷನ್ ನಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಕ್ರಮವಾಗಿ ಗುಂಪು ಸೇರುವುದು, ಮೆರವಣಿಗೆ, ಪಟಾಕಿ ಸಿಡಿಸುವುದು, ವಿಜಯೋತ್ಸವ ಆಚರಣೆ ಮಾಡುವಂತಿಲ್ಲ. ಮತ ಎಣಿಕೆ ದಿನ ಜೂನ್ 4ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದರು.

ಕ್ಷೇತ್ರದ ಮತ ಎಣಿಕೆ ಕೇಂದ್ರದ ಸುತ್ತ ಮೂರು ಹಂತದಲ್ಲಿ ಭದ್ರತೆ ಒದಗಿಸಲಾಗಿದೆ. ಮೊದಲ ಹಂತದಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆ, ಎರಡನೇ ಹಂತದಲ್ಲಿ ರಾಜ್ಯ ಸಶಸ್ತ್ರ ಮೀಸಲು ಪೊಲೀಸ್ ಪಡೆ ಹಾಗೂ ಮೂರನೇ ಹಂತದಲ್ಲಿ ಸಿವಿಲ್ ಪೊಲೀಸ್ ಭದ್ರತೆ ಇರುತ್ತದೆ. ಅಭ್ಯರ್ಥಿಗಳ ಎಣಿಕೆ ಏಜೆಂಟರು, ಎಣಿಕೆ ಸಿಬ್ಬಂದಿ ಪ್ರವೇಶಕ್ಕೆ ಗುರುತಿನ ಚೀಟಿ ನೀಡಲಾಗಿದ್ದು, ಗುರುತಿನ ಚೀಟಿ ಇಲ್ಲದ ಯಾರಿಗೂ ಒಳಗೆ ಪ್ರವೇಶ ಇರುವುದಿಲ್ಲ. ಎಲ್ಲಾ ಕಡೆ ಬ್ಯಾರಿಕೇಡ್ ವ್ಯವಸ್ಥೆ ಇದ್ದು, ಏಜೆಂಟರು, ಸಾರ್ವಜನಿಕರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಅಲ್ಲದೇ, ಎಣಿಕೆ ಕೇಂದ್ರದೊಳಗೆ ಅನುಮತಿಸಿದ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಯಾರೂ ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತು ತೆಗೆದುಕೊಂಡು ಹೋಗುವಂತಿಲ್ಲ. ಆಯುಧ, ಬೆಂಕಿ ಪೊಟ್ಟಣ, ಲೈಟರ್, ನೀರಿನ ಬಾಟಲಿ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಿದೆ. ಮೂರು ಹಂತದಲ್ಲಿ ಚೆಕ್ ಮಾಡಿ ಎಣಿಕೆ ಏಜೆಂಟರು ಹಾಗೂ ಇತರೆ ಸಿಬ್ಬಂದಿ ಒಳಬಿಡಲಾಗುತ್ತದೆ. ಅಭ್ಯರ್ಥಿಗಳ ಎಣಿಕೆ ಏಜೆಂಟರಾಗಿ ಆಗಮಿಸುವವರಿಗೆ ಪಾವತಿ ಆಧಾರದ ಮೇಲೆ ಉಪಹಾರ, ಶುದ್ಧ ಕುಡಿಯುವ ನೀರು, ಲಸ್ಸಿ, ಮಜ್ಜಿಗೆ ವ್ಯವಸ್ಥೆ ಮಾಡಿದ್ದು, ಅಗತ್ಯವಿರುವಷ್ಟು ಕೂಪನ್ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಲೋಕಸಭಾ ಕ್ಷೇತ್ರಕ್ಕೆ ರಾಜ್ಯದ ಎರಡನೇ ಹಂತದಲ್ಲಿ ಮೇ 7ರಂದು ಮತದಾನ ನಡೆದಿದ್ದು, ಸುಮಾರು 4 ವಾರದ ನಂತರ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಫಲಿತಾಂಶಕ್ಕಾಗಿ ಅಭ್ಯರ್ಥಿಗಳು, ಬೆಂಬಲಿಗರು, ಪಕ್ಷಗಳ ಕಾರ್ಯಕರ್ತರು, ಮುಖಂಡರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದು, ಎಲ್ಲರ ಕಾಯುವಿಕೆ ಮುಗಿಯುವ ಸಮಯ ಬಂದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿಯ ಕ್ಷೇತ್ರದಲ್ಲಿ ವಿಜಯಲಕ್ಷ್ಮಿ ಯಾರ ಮುಡಿಗೆ ಎಂಬ ಕುತೂಹಲಕ್ಕೆ ಮಧ್ಯಾಹ್ನ ಹೊತ್ತಿಗೆ ತೆರೆ ಬೀಳಲಿದೆ.

- - -