ಪರೀಕ್ಷೆ ಮುಗಿದ ಬೆನ್ನಲ್ಲೆ ಫಲಿತಾಂಶ ಪ್ರಕಟ: ದಾಖಲೆ ಬರೆದ ಜಾನಪದ ವಿಶ್ವವಿದ್ಯಾಲಯ

| Published : Nov 23 2025, 02:45 AM IST

ಪರೀಕ್ಷೆ ಮುಗಿದ ಬೆನ್ನಲ್ಲೆ ಫಲಿತಾಂಶ ಪ್ರಕಟ: ದಾಖಲೆ ಬರೆದ ಜಾನಪದ ವಿಶ್ವವಿದ್ಯಾಲಯ
Share this Article
  • FB
  • TW
  • Linkdin
  • Email

ಸಾರಾಂಶ

ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಇನ್ನು ಮುಂದೆ ತಿಂಗಳುಗಟ್ಟಲೆ ಕಾಯಬೇಕಿಲ್ಲ. ಫಲಿತಾಂಶಕ್ಕಾಗಿ ಅನಗತ್ಯ ಅಲೆದಾಟ ಅಗತ್ಯವೇ ಇಲ್ಲ ಎಂಬ ಸಂದೇಶವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ನೀಡಿದೆ.ಪರೀಕ್ಷೆ ಮುಗಿದ ೩ ಗಂಟೆಗಳಲ್ಲಿ ೬ ವಿಭಾಗಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ ಇಲ್ಲಿನ ಉಪನ್ಯಾಸಕರು, ಫಲಿತಾಂಶ ಪ್ರಕಟಿಸಿದ್ದಾರೆ.

ಶಿಗ್ಗಾಂವಿ: ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಇನ್ನು ಮುಂದೆ ತಿಂಗಳುಗಟ್ಟಲೆ ಕಾಯಬೇಕಿಲ್ಲ. ಫಲಿತಾಂಶಕ್ಕಾಗಿ ಅನಗತ್ಯ ಅಲೆದಾಟ ಅಗತ್ಯವೇ ಇಲ್ಲ ಎಂಬ ಸಂದೇಶವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ನೀಡಿದೆ.ಪರೀಕ್ಷೆ ಮುಗಿದ ೩ ಗಂಟೆಗಳಲ್ಲಿ ೬ ವಿಭಾಗಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ ಇಲ್ಲಿನ ಉಪನ್ಯಾಸಕರು, ಫಲಿತಾಂಶ ಪ್ರಕಟಿಸಿದ್ದಾರೆ.

ಪ್ರೇರಣೆಯಾದ ಮೌಲ್ಯಮಾಪನ ಕುಲಸಚಿವ: ಇತ್ತೀಚೆಗಷ್ಟೆ ಡಾ. ಕೆ. ಶಿವಶಂಕರ್ ಅವರು ಜಾನಪದ ವಿಶ್ವವಿದ್ಯಾಲಯಕ್ಕೆ ಮೌಲ್ಯಮಾಪನ ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಡಾ. ಶಿವಶಂಕರ ಅವರ ಕ್ರಿಯಾಶೀಲ ವೃತ್ತಿಪರತೆ ಮತ್ತು ಸಿಬ್ಬಂದಿ ಹುರಿದುಂಬಿಸುವ ಧೋರಣೆಯಿಂದಾಗಿ ಮೌಲ್ಯಮಾಪನ ವಿಭಾಗ ಅತ್ಯಂತ ಚಲನಶೀಲವಾಗಿ ಕಾರ್ಯನಿರ್ವಹಿಸುತ್ತಿತ್ತು. ಪರಿಣಾಮ ೨೦೨೪-೨೫ನೇ ಸಾಲಿನ ೨ನೇ ಹಾಗೂ ನಾಲ್ಕನೇ ಚತುರ್ಮಾಸದ ಪರೀಕ್ಷೆಗೆ ಮುನ್ನ ಉಪನ್ಯಾಸಕರೊಂದಿಗೆ ಸಭೆ ನಡೆಸಿ ಪರೀಕ್ಷೆ ಮುಗಿದ ದಿನವೇ ಫಲಿತಾಂಶ ಪ್ರಕಟಿಸುವ ನಿಟ್ಟಿನಲ್ಲಿ ಡಾ. ಶಿವಶಂಕರ ಕ್ರಿಯಾಯೋಜನೆ ರೂಪಿಸಿದ್ದರು.

ಅದರಂತೆ ಇಲ್ಲಿನ ಉಪನ್ಯಾಸಕರು ಪರೀಕ್ಷೆ ಮುಗಿದ ದಿನವೇ ಅಂದಿನ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ್ದರು. ಅದರಂತೆ ಮೌಲ್ಯಮಾಪನ ಸಿಬ್ಬಂದಿ ಸಹ ಮೌಲ್ಯಮಾಪನ ಮಾಡಿದ ಪತ್ರಿಕೆಗಳ ಅಂಕಗಳನ್ನು ಯುಯುಸಿಎಂಎಸ್ ತಂತ್ರಾಂಶದಲ್ಲಿ ದಾಖಲಿಸುವಲ್ಲಿ ಯಶಸ್ವಿಯಾದರು.

ವಿಭಾಗವಾರು ಫಲಿತಾಂಶ ಪ್ರಕಟ: ಜನಪದ ಸಾಹಿತ್ಯ ವಿಭಾಗ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಕನ್ನಡ ಮತ್ತು ಜಾನಪದ ವಿಭಾಗ, ಎಂಬಿಎ ಆರ್‌ಟಿಎಂ ವಿಭಾಗ, ಎಂಬಿಎ ಪ್ರವಾಸೋದ್ಯಮ ವಿಭಾಗಗಳ ದ್ವಿತೀಯ ಸೆಮಿಸ್ಟರ್ ಫಲಿತಾಂಶ ಪರೀಕ್ಷೆ ಮುಗಿದ ೩ ಗಂಟೆಗಳಲ್ಲಿ ಪ್ರಕಟಿಸಲಾಗಿದೆ. ಎಂಎ ಜನಪದ ವಿಜ್ಞಾನ ವಿಭಾಗದ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸಲಾಗಿದೆ.

೨೦೨೪-೨೫ನೇ ಸಾಲಿನಲ್ಲಿ ಒಟ್ಟು ೪೬೦ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಕುಲಪತಿ ಶ್ಲಾಘನೆ: ಮೌಲ್ಯಮಾಪನ ವಿಭಾಗದ ಕೆಲಸ ಕಾರ್ಯಗಳನ್ನು ಅತ್ಯಂತ ಶ್ರದ್ಧೆಯಿಂದ ತ್ವರಿತವಾಗಿ ಪೂರ್ಣಗೊಳಿಸಲು ಶ್ರಮಸಿರುವ ಮೌಲ್ಯಮಾಪನ ಕುಲಸಚಿವ ಡಾ. ಶಿವಶಂಕರ್ ಕೆ. ಹಾಗೂ ಪ್ರಾಧ್ಯಾಪಕರು, ಸಿಬ್ಬಂದಿಯನ್ನು ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅಭಿನಂದಿಸಿದ್ದಾರೆ.

ಪರೀಕ್ಷೆ ಮುಗಿದ ದಿನದಂದೇ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಿರುವುದು ದಾಖಲೆ ಮತ್ತು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ವಿಶ್ವವಿದ್ಯಾಲಯ ವಿದ್ಯಾರ್ಥಿ ಕೇಂದ್ರಿತವಾಗಿ ಕೆಲಸ ಮಾಡುತ್ತಿದೆ ಎಂದು ಜಾನಪದ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್‌ ಹೇಳಿದರು.

ತ್ವರಿತ ಫಲಿತಾಂಶ ಪ್ರಕಟ ಮಾಡಿರುವುದು ಹೆಮ್ಮೆಯ ವಿಷಯ ಮಾತ್ರವಲ್ಲ, ವಿಶ್ವವಿದ್ಯಾಲಯದಿಂದ ಈ ರೀತಿಯಾದ ಕೆಲಸವನ್ನೂ ಮಾಡಬಹುದು ಎಂಬುದನ್ನು ತೋರಿಸಿದ್ದೇವೆ. ಇದಕ್ಕೆ ನಮ್ಮ ವಿಶ್ವವಿದ್ಯಾಲಯದ ಉಪನ್ಯಾಸಕರು ಹಗಲಿರುಳು ಶ್ರಮಿಸಿದ್ದಾರೆ. ಅವರ ನಿರಂತರ ಪರಿಶ್ರಮ ಹಾಗೂ ತಾಂತ್ರಿಕ ಸಿಬ್ಬಂದಿಯ ಕಾರ್ಯ ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಲು ಇದು ಪ್ರೇರಣೆ ನೀಡಿದೆ ಎಂದು ಮೌಲ್ಯಮಾಪನ ಕುಲಸಚಿವ ಡಾ. ಶಿವಶಂಕರ ಕೆ. ಹೇಳಿದರು.