ನಮ್ಮ ಪರವಾಗಿ ಫಲಿತಾಂಶ ಬರಲಿದೆ: ಬಿಜೆಪಿ ಅಭ್ಯರ್ಥಿ ಯದುವೀರ್ ವಿಶ್ವಾಸ

| Published : Apr 28 2024, 01:27 AM IST / Updated: Apr 28 2024, 01:28 AM IST

ನಮ್ಮ ಪರವಾಗಿ ಫಲಿತಾಂಶ ಬರಲಿದೆ: ಬಿಜೆಪಿ ಅಭ್ಯರ್ಥಿ ಯದುವೀರ್ ವಿಶ್ವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಫಲಿತಾಂಶ ನಮ್ಮ ಪರವಾಗಿ ಬರುವ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಫಲಿತಾಂಶ ನಮ್ಮ ಪರವಾಗಿ ಬರುವ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಕುವೆಂಪುನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ವ್ಯವಸ್ಥೆಯಿಂದ ಚುನಾವಣೆ ಕಷ್ಟ ಆಗಲಿಲ್ಲ. ಎಲ್ಲಾ ಕಡೆ ನಮ್ಮ ಪರವಾಗಿ ಮತದಾನ ಆಗಿದೆ. ಬೂತ್ ಗಳ ಮಾಹಿತಿ ತರಿಸಿಕೊಳ್ಳುತ್ತಿದ್ದೇವೆ. ಮೊದಲಿನಿಂದಲೂ ಫಲಿತಾಂಶ ನಮ್ಮ ಪರವಾಗಿದೆ ಅನ್ನುವ ವಿಶ್ವಾಸವಿದೆ ಎಂದರು.

ಲೋಕಸಭಾ ಚುನಾವಣೆ ನನಗೆ ಹೊಸ ಅನುಭವ ನೀಡಿದೆ. ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ನಾಯಕರು, ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸೋದು ಒಂದು ವಾರ ಕಷ್ಟ ಆಯ್ತು. ಕ್ಷೇತ್ರದಾದ್ಯಂತ ಪ್ರಚಾರದ ನಡೆಸಿದಾಗ ಉತ್ತಮ ಅನುಭವವಾಗಿದೆ. ಒಳ್ಳೆಯದ್ದು, ಕೆಟ್ಟದ್ದು ಎಲ್ಲಾ ರೀತಿಯ ಅನುಭವವಾಗಿದೆ. ಕೆಟ್ಟ ಅನುಭವಗಳಿಂದ ಪಾಠ ಕಲಿಯಬೇಕು ಎಂದು ಅವರು ಹೇಳಿದರು.

ಅಭ್ಯರ್ಥಿಯಾಗಿ ಘೋಷಣೆಯಾಗುವ ಮುಂಚೆ ನಾನು ಅರೆ ಸಾಮಾಜಿಕ ಜೀವನದಲ್ಲಿದ್ದೆ. ರಾಜಕೀಯಕ್ಕೆ ಬಂದ ಮೇಲೆ ಇನ್ನಷ್ಟು ಜನರಿಗೆ ಹತ್ತಿರ ಆಗಬೇಕು. ಪ್ರಚಾರದ ಸಂದರ್ಭದಲ್ಲಿ ಮಗನ ಜೊತೆ ಹೆಚ್ಚು ಹೊತ್ತು ಇರಲು ಆಗಲಿಲ್ಲ. ಈಗ ಮತದಾನ ಪ್ರಕ್ರಿಯೆ ಮುಗಿದಿದ್ದು, ಕುಟುಂಬದೊಂದಿಗೆ ಕಾಲ ಕಳೆಯುವೆ ಎಂದರು.

ಮೈಸೂರು, ಕೊಡಗು ಎರಡು ಜಿಲ್ಲೆಯಲ್ಲೂ ರಾಜವಂಶದ ಬಗ್ಗೆ ಜನರಿಗೆ ಇರುವ ಪ್ರೀತಿಯನ್ನು ಪ್ರಚಾರದಲ್ಲಿ ಗಮನಿಸಿದ್ದೇನೆ. ಜನರು ನಮ್ಮ ಬಗ್ಗೆ ಉತ್ತಮ ಗೌರವ ಹೊಂದಿದ್ದಾರೆ. ರಾಜಕೀಯದ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸೇರಿದಂತೆ ಅನೇಕರು ಮಾರ್ಗದರ್ಶನ ಮಾಡಿದ್ದಾರೆ. ಇದರಿಂದ ನನಗೆ ಚುನಾವಣೆಯಲ್ಲಿ ವರದಾನವಾಯಿತು ಎಂದು ಅವರು ತಿಳಿಸಿದರು.