ಹುಬ್ಬಳ್ಳಿ:

ಹುಬ್ಬಳ್ಳಿ-ಮಂತ್ರಾಲಯಂ ರೈಲು ಪುನಾರಂಭಿಸಿ, ಹುಬ್ಬಳ್ಳಿ- ಹೈದ್ರಾಬಾದ್‌ ಹೊಸ ರೈಲು ಓಡಿಸಿ. ಇವು ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ರೈಲು ಬಳಕೆದಾರರ ಸಭೆಯಲ್ಲಿ ಸದಸ್ಯರಿಂದ ಬಂದ ಬೇಡಿಕೆಗಳಿವು.

ಇಲ್ಲಿನ ರೈಲ್‌ಸೌಧದಲ್ಲಿ ನಡೆದ ರೈಲ್ವೆ ಬಳಕೆದಾರರಸಲಹಾ ಸಮಿತಿ ಸಭೆಯಲ್ಲಿ, ಬೆಂಗಳೂರು-ಮುಂಬೈ ಸೂಪರ್‌ ಫಾಸ್ಟ್‌ ರೈಲನ್ನು ಪ್ರಮುಖ ಕರ್ನಾಟಕ ನಗರಗಳ ಮೂಲಕ ಸಂಚರಿಸುವಂತಾಗಬೇಕು. ಬೆಂಗಳೂರು-ತುಮಕೂರು-ದಾವಣಗೆರೆ-ಹುಬ್ಬಳ್ಳಿ-ಬೆಳಗಾವಿ-ಮೀರಜ್- ಸಾಂಗ್ಲಿ - ಪುಣೆ- ಮುಂಬೈ ಮೂಲಕ ಸಂಚರಿಸಬೇಕೆಂದು ಆಗ್ರಹಿಸಿದರು.

ಆನ್‌ಲೈನ್‌ನಲ್ಲೂ ರಿಯಾಯಿತಿ ನೀಡಿ:

ದಿವ್ಯಾಂಗ ಪ್ರಯಾಣಿಕರು ರಿಯಾಯಿತಿ ಪಡೆಯಲು ರೈಲು ನಿಲ್ದಾಣಕ್ಕೆ ತೆರಳಿ ಟಿಕೆಟ್ ಪಡೆಯಬೇಕಾಗಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಕಷ್ಟವಾಗುತ್ತಿದೆ. ಆದಕಾರಣ ಆನ್‌ಲೈನ್‌ಲ್ಲಿ ರಿಯಾಯಿತಿ ಬುಕ್ಕಿಂಗ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಹುಬ್ಬಳ್ಳಿ-ದಾದರ್ ಎಕ್ಸ್‌ಪ್ರೆಸ್ ಉನ್ನತೀಕರಿಸಬೇಕು. ಹುಬ್ಬಳ್ಳಿ- ಹೈದ್ರಾಬಾದ್‌ ನೇರ ರೈಲು ಆರಂಭಿಸಬೇಕು. ಈ ಮುಂಚೆ ಇದ್ದ ಹುಬ್ಬಳ್ಳಿ-ಮಂತ್ರಾಲಯ ನಡುವಿನ ರೈಲಿನ ಸೇವೆ ಪುನಾರಂಭಿಸಬೇಕು ಎಂದು ಒತ್ತಾಯಿಸಿದರು.


ಅಧ್ಯಕ್ಷತೆ ವಹಿಸಿದ್ದ ನೈಋತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್, ಸಭೆಯಲ್ಲಿ ವ್ಯಕ್ತವಾದ ಎಲ್ಲ ಸಲಹೆಗಳನ್ನು ಹಂತ-ಹಂತವಾಗಿ ಈಡೇರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೇ, ವಲಯದ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು.

ನಾಲ್ಕು ವಿದ್ಯುತ್‌ ಉಪಕೇಂದ್ರ ಆರಂಭಿಸಿದ್ದು 207 ಕಿಮೀ ವಿದ್ಯುದ್ದೀಕರಣ ಮಾಡಲಾಗಿದೆ. ಇದರಿಂದಾಗಿ ವಿದ್ಯುದ್ದೀಕರಣದ ಜಾಲವು 6,284 ಹಳಿ ಕಿಲೋ ಮೀಟರ್‌ಗೆ ಏರಿದೆ. ಈಗ 163 ಜೋಡಿ ರೈಲುಗಳು ವಿದ್ಯುತ್ ಚಾಲಿತ ಸಂಚರಿಸುತ್ತಿವೆ. 30 ಜೋಡಿ ರೈಲುಗಳನ್ನು ಡೀಸೆಲ್‌ನಿಂದ ವಿದ್ಯುತ್ ಚಾಲಿತಕ್ಕೆ ಪರಿವರ್ತಿಸಲಾಗಿದೆ. ಇದರಿಂದ ಸುಮಾರು ₹ 39 ಕೋಟಿ ಇಂಧನ ಉಳಿತಾಯವಾಗಿದೆ. 3,712 ಮಾರ್ಗ ಕಿಲೋ ಮೀಟರ್‌ಗಳಲ್ಲಿ ‘ಕವಚ’ ವ್ಯವಸ್ಥೆಗೆ ಮಂಜೂರಾತಿ ನೀಡಲಾಗಿದ್ದು, ಸುರಕ್ಷತೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಸದರಾದ ಇ. ತುಕಾರಾಂ, ಪ್ರಿಯಾಂಕಾ ಜಾರಕಿಹೊಳಿ, ಶಾಸಕ ಯು.ಬಿ. ಬಣಕಾರ, ಸಲಹಾ ಸಮಿತಿ ಸದಸ್ಯರಾದ ಜಿ.ಕೆ. ಆದಪ್ಪಗೌಡರ್, ಕೆ.ಬಿ. ಲಿಂಗರಾಜು, ಪಿ. ಶ್ರೀನಿವಾಸ್ ಮೂರ್ತಿ, ದೇವಾನಂದ ಎಸ್. ನಾಯಕ ಭಂಡಾರಿ, ಮಹೇಂದ್ರ ಸಿಂಘಿ, ಬಾಬುಲಾಲ್ ಜಿ. ಜೈನ್, ಡಾ. ಲಕ್ಷ್ಮಣ್ ಎಚ್., ಬಸವರಾಜ್ ಕೆ. ಎಂ., ಉಮಾ ರೆಡ್ಡಿ, ರವಿರಾಜ ಸಾಗರ್, ಆರ್.ಸಿ. ಆಂಜಿನಪ್ಪ, ಬಿ.ಎನ್. ಲಕ್ಷ್ಮೀಪತಿ ಮತ್ತಿತರರು ಉಪಸ್ಥಿತರಿದ್ದರು.