ಕಬ್ಬೂರಲ್ಲಿ ಮರುಸರ್ವೆ ನಡೆಸಿ ಒತ್ತುವರಿ ಜಾಗ ತೆರವು

| Published : Mar 20 2025, 01:15 AM IST

ಸಾರಾಂಶ

ತಾಲೂಕಿನ ಕಬ್ಬೂರು ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಮತ್ತು ರಾಜ್ಯ ರೈತ ಸಂಘದ ಹೋರಾಟ ಫಲದಿಂದಾಗಿ ಸರ್ಕಾರಿ ಗೋಮಾಳ ಜಮೀನು, ಕೆರೆ ಪ್ರದೇಶ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ಬುಧವಾರ ಆರಂಭಗೊಂಡಿದೆ.

- ಡಿಎಸ್‌ಎಸ್‌, ರೈತ ಸಂಘ, ಗ್ರಾಮಸ್ಥರ ಹೋರಾಟ ಜಯ । ಸಾವಿರಾರು ಅಡಕೆ ಮರ ನೆಲಸಮ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ತಾಲೂಕಿನ ಕಬ್ಬೂರು ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಮತ್ತು ರಾಜ್ಯ ರೈತ ಸಂಘದ ಹೋರಾಟ ಫಲದಿಂದಾಗಿ ಸರ್ಕಾರಿ ಗೋಮಾಳ ಜಮೀನು, ಕೆರೆ ಪ್ರದೇಶ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ಬುಧವಾರ ಆರಂಭಗೊಂಡಿದೆ.

ಕಬ್ಬೂರು ಗೋಮಾಳ, ಕೆರೆ ಜಾಗ ಒತ್ತುವರಿ ತೆರವಿಗೆ ಒತ್ತಾಯಿಸಿ ಡಿಎಸ್‌ಎಸ್‌- ರೈತ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ, ಪ್ರತಿಭಟಿಸಿದ್ದರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದ ಬೆನ್ನಲ್ಲೇ ಒತ್ತುವರಿ ತೆರವು ಕಾರ್ಯವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.

ಭೂ ಮಾಪನ ಇಲಾಖೆ ಭೂಮಾಪಕರು ಭೂಮಿ ಅಳತೆ ಮಾಡಿ, ಒತ್ತುವರಿ ಮಾಡಿದ್ದ 2-3 ಎಕರೆಯಷ್ಟು ಜಾಗದಲ್ಲಿ ಬೆಳೆಸಿದ್ದ ಫಲಕ್ಕೆ ಬಂದಿದ್ದ ಸಾವಿರಾರು ಅಡಕೆ ಮರಗಳನ್ನು ಜೆಸಿಬಿ ಯಂತ್ರ ಬಳಸಿ ತೆರವುಗೊಳಿಸಿದರು. ಇಲಾಖೆಯ ಈ ಕ್ರಮ ಡಿಎಸ್‌ಎಸ್‌- ರೈತ ಸಂಘಟನೆ ಹೋರಾಟಕ್ಕೆ ದೊರೆತ ಅಲ್ಪಪ್ರಮಾಣದ ಜಯ ಎಂಬುದಾಗಿ ಮುಖಂಡರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಆದೇಶದ ಮೇರೆಗೆ ಉಪ ವಿಭಾಗಾಧಿಕಾರಿ ಸಂತೋಷ ಪಾಟೀಲ್, ತಹಸೀಲ್ದಾರ್ ಡಾ.ಅಶ್ವತ್ಥ್, ಭೂ ದಾಖಲೆಗಳ ಉಪ ನಿರ್ದೇಶಕಿ ಕೆ.ಕಸ್ತೂರಿ, ಕಂದಾಯ ಅಧಿಕಾರಿ ಹಿರೇಗೌಡ, ಪಿಡಿಒ ಶೈಲಜಾ ಸಮಕ್ಷಮದಲ್ಲಿ ಭೂ ಮಾಪಕರು, ಪರಿವೀಕ್ಷಕರು ಗೋಮಾಳ ಹಾಗೂ ಕೆರೆ ಒತ್ತುವರಿಯಾದ ಜಾಗವನ್ನು ಗುರುತಿಸಿದರು.

ಡಿಎಸ್‌ಎಸ್‌ ಜಿಲ್ಲಾಧ್ಯಕ್ಷ ಮಂಜುನಾಥ ಕುಂದುವಾಡ ಈ ಸಂದರ್ಭ ಮಾತನಾಡಿ, ಗೋಮಾಳ ಜಮೀನು ಮತ್ತು ಕೆರೆಯ ನಾಲ್ಕು ಭಾಗಗಳಲ್ಲಿ ಒತ್ತುವರಿಯಾಗಿದೆ. ಈಗ ಒಂದು ಭಾಗದಲ್ಲಿ ಮಾತ್ರ ಅಳತೆ ಮಾಡಿ, ಒತ್ತುವರಿ ಜಾಗ ತೆರವುಗೊಳಿಸುವ ಕಾರ್ಯವನ್ನು ಅಧಿಕಾರಿಗಳನ್ನು ಕೈಗೊಂಡಿದ್ದಾರೆ. ಅಳತೆ ಕಾರ್ಯ ಮುಂದುವರಿದಿದ್ದು, ಸಂಪೂರ್ಣ ಅಳತೆ ಮಾಡಿದ ನಂತರ ವಸ್ತುನಿಷ್ಟವಾಗಿ ಹದ್ದುಬಸ್ತು ಮಾಡಬೇಕು. ಇಲ್ಲದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಅಧಿಕಾರಿಗಳಿಗೆ ಎಚ್ಚರಿಸಿದರು.

ಒತ್ತುವರಿ ತೆರವುಗೊಳಿಸಿ, ಹದ್ದುಬಸ್ತು ಮಾಡುವಂತೆ ಇಡೀ ಗ್ರಾಮಸ್ಥರು ಹೋರಾಟ ಮಾಡಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಪ್ರಭಾವಿಗಳ ಒತ್ತಡ, ಪ್ರಭಾವಕ್ಕೆ ಒಳಗಾಗಿ ಗ್ರಾಮಸ್ಥರ ವಿರುದ್ಧವೇ ದಬ್ಬಾಳಿಕೆ ಮಾಡುತ್ತಿರುವುದು ಸರಿಯಲ್ಲ. ನಮ್ಮೆಲ್ಲರ ಹೋರಾಟದಿಂದ ಇಂದು ಆರಂಭಿಕ ಯಶಸ್ಸು ಸಿಕ್ಕಿದೆ. ಒತ್ತುವರಿ ಜಾಗ ಅಳತೆ ಕಾರ್ಯ ಪೂರ್ಣಗೊಂಡ ನಂತರ ಸರ್ಕಾರಿ ಗೋಮಾಳ ಜಾಗದ ಮೂಲ ವಿಸ್ತೀರ್ಣ, ಕೆರೆಯ ಮೂಲ ವಿಸ್ತೀರ್ಣದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದರೂ ಮತ್ತೆ ತೀವ್ರ ಹೋರಾಟ ಮಾಡುತ್ತೇವೆ. ಅದಕ್ಕೆ ಅಧಿಕಾರಿಗಳು ಆಸ್ಪದ ಮಾಡಿಕೊಡಬಾರದು. ಗೋಮಾಳ, ಕೆರೆ ಒತ್ತುವರಿ ಬಗ್ಗೆ ಸೂಕ್ತವಾಗಿ ಸರ್ವೇ ಕೈಗೊಂಡು, ಸರ್ಕಾರಿ ಜಾಗ ಹದ್ದುಬಸ್ತು ಮಾಡಬೇಕು ಎಂದು ಒತ್ತಾಯಿಸಿದರು.

ಭೂ ಮಾಪಕರಾದ ಪ್ರಸನ್ನಕುಮಾರ, ಕೃಪಾಕರ್ ಗೌರವಿ, ಕೃಷ್ಣಮೂರ್ತಿ, ಬಿ.ಎಲ್.ಮಂಜುನಾಥ, ಪಿ.ಎಸ್.ಹನುಮಂತಪ್ಪ, ರಂಜನ್, ಪರ್ಯಾ ವೀಕ್ಷಕ ಕೆ.ಎಚ್. ರಂಗನಾಥ ಸರ್ವೇ ಕಾರ್ಯದಲ್ಲಿ ಭಾಗಿಯಾಗಿದ್ದರು. ಗ್ರಾಪಂ ಸದಸ್ಯರಾದ ಮಂಜುನಾಥ, ಕೋಟೆಪ್ಪ, ಗ್ರಾಮಸ್ಥರಾದ ಗಂಗಾಧರಣ್ಣ, ಕುಮಾರಣ್ಣ, ಚಂದ್ರಶೇಖರ, ದೇವೇಂದ್ರಪ್ಪ, ಮಂಜುನಾಥ ವೈ. ಕಬ್ಬೂರು, ರಾಜಣ್ಣ, ಪ್ರಸನ್ನ, ಚಂದ್ರಪ್ಪ, ವಿರೂಪಾಕ್ಷಪ್ಪ, ಗುರುಮೂರ್ತಿ, ರಾಮಸ್ವಾಮಿ, ಧರ್ಮಣ್ಣ, ಕೆ.ಪಿ.ರಾಮಸ್ವಾಮಿ, ನೂರಾರು ಜನರು ಸಂದರ್ಭದಲ್ಲಿದ್ದರು.

- - - -19ಕೆಡಿವಿಜಿ4.ಜೆಪಿಜಿ:

ದಾವಣಗೆರೆ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಸರ್ಕಾರಿ ಗೋಮಾಳ ಜಮೀನು, ಕೆರೆ ಒತ್ತುವರಿ ಜಾಗ ಒತ್ತುವರಿ ತೆರವುಗೊಳಿಸಲು ಭೂಮಿ ಸರ್ವೇ ನಡೆಯಿತು. ಅಧಿಕಾರಿಗಳು ಸೇರಿದಂತೆ ಡಿಎಸ್‌ಎಸ್‌, ರೈತ ಸಂಘಗಳ ಸದಸ್ಯರು, ಗ್ರಾಮಸ್ಥರು ಇದ್ದರು. -19ಕೆಡಿವಿಜಿ5.ಜೆಪಿಜಿ:

ಕಬ್ಬೂರು ಸರ್ಕಾರಿ ಗೋಮಾಳ, ಕೆರೆ ಜಾಗ ಒತ್ತುವರಿ ಮಾಡಿ, ಬೆಳೆಸಿದ್ದ ಫಲಕ್ಕೆ ಬಂದಿದ್ದ ಸಾವಿರಾರು ಅಡಕೆ ಮರಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.