ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರ
ತಾಲೂಕಿನ ಕುಪಕಡ್ಡಿ ಗ್ರಾಮದ ಹಿರಿಯ ಜೀವಿ, ಶಿಕ್ಷಣ ಪ್ರೇಮಿ ಹಾಗೂ ನಿವೃತ್ತ ಶಿಕ್ಷಣಾಧಿಕಾರಿ ಸಿದ್ದಪ್ಪ ಉಗ್ರಾಣರವರು ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಲು ಅನುಕೂಲವಾಗಲೆಂದು ಸ್ಮಾರ್ಟ್ ರೂಮ್‌ಗೆ ಅಗತ್ಯವಾದ ಸಾಮಗ್ರಿಗಳನ್ನು ದೇಣಿಗೆಯಾಗಿ ನೀಡಿ ಶಿಕ್ಷಣ ಪ್ರೇಮ ಮೆರೆದಿದ್ದಾರೆ.ತಾವು ಕಲಿತ ಶಾಲೆಗೆ ಸೇವಾ ಮನೋಭಾವದ ದೃಷ್ಟಿಯಿಂದ ಸ್ಮಾರ್ಟ್ ರೂಮ್‌ಗೆ ಅಗತ್ಯವಾದ ಸುಮಾರು ₹1.5 ಲಕ್ಷ ಮೌಲ್ಯದ ಪ್ರೋಜೆಕ್ಟರ್, ಪರದೆ, ಸೌಂಡ್ ಸಿಸ್ಟಮ್, ಲ್ಯಾಪ್‌ಟಾಪ್, ಟೆಬಲ್, ಮ್ಯಾಟ್, ವಿಂಡೋ ಕರ್ಟೇನ್ ಸೇರಿದಂತೆ ಸಂಪೂರ್ಣವಾಗಿ ಒಳ್ಳೆಯ ಸೌಲಭ್ಯಗಳನ್ನು ಒಳಗೊಂಡ ಸಾಮಗ್ರಿಗಳನ್ನು ದೇಣಿಯಾಗಿ ನೀಡಿ ಸ್ವತಃ ಮುಂದೆ ನಿಂತು ಸ್ಮಾರ್ಟ್ ರೂಮ್ ನಿರ್ಮಿಸಿ ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿದ್ದಾರೆ.
ಅದೇ ರೀತಿಯಾಗಿ ಗ್ರಾಮದ ಇನ್ನೊರ್ವ ಶಿಕ್ಷಣ ಪ್ರೇಮಿ ಹಾಗೂ ಸರ್ಕಾರಿ ಪ್ರೌಢಶಾಲೆಯ ನೂತನ ಎಸ್‌ಡಿಎಂಸಿ ಸದಸ್ಯ, ಫೋಟೋಗ್ರಾಫರ್ ಚಂದ್ರಶೇಖರ ಅಂಬಿಗೇರವರು, ಶಾಲೆಯ 8ನೇ ವರ್ಗದ ಮಕ್ಕಳು ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮಗುವಿಗೆ ಬಹುಮಾನ ವಿತರಣೆ ಮಾಡಲು ₹21,000 ದೇಣಿಗೆಯಾಗಿ ನೀಡಿದ್ದಾರೆ. ಈ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಅದರಿಂದ ಬಂದ ಬಡ್ಡಿ ಹಣದಲ್ಲಿ ಪ್ರತಿ ವರ್ಷ ಸಾಧನೆ ಮಾಡಿದ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ವಿತರಿಸಲಾಗುವುದು. ಗ್ರಾಮದಲ್ಲಿ ಛಾಯಾಗ್ರಾಹಕರಾಗಿ ಪುಟ್ಟ ಉದ್ಯೋಗ ಮಾಡುತ್ತಿದ್ದರೂ ಅವರ ಶಿಕ್ಷಣ ಪ್ರೇಮಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇಣಿಗೆ ನೀಡಿದ ಸಿದ್ದಪ್ಪ ಉಗ್ರಾಣ ಹಾಗೂ ಚಂದ್ರಶೇಖರ ಅಂಬಿಗೇರವರನ್ನು ಕುಪಕಡ್ಡಿ ಗ್ರಾಮದ ಹಿರಿಯರು, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಶಿಕ್ಷಣ ಸಂಯೋಜಕ ವಿಜಯೇಂದ್ರ ಪುರೋಹಿತ, ಸಿಆರ್‌ಪಿ ಸಂಗಮೇಶ ಜಂಗಮಶೇಟ್ಟಿ, ಜಿ.ಐ.ಗೋಡ್ಯಾಳ, ಶ್ರೀಕಾಂತ ಪಾರಗೊಂಡ, ಆನಂದ ಪವಾರ, ಅಮೀರ ಅಲಿ ನಧಾಪ, ಬಸವರಾಜ ಚಿಂಚೊಳ್ಳಿ,ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮುರಿಗೇಶ ಹಳ್ಳಿ, ಮುಖ್ಯಶಿಕ್ಷಕ ಸಿದ್ದು ಕೋಟ್ಯಾಳ ಸೇರಿದಂತೆ ಅನೇಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.