ಪ್ರಸ್ತುತ ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣಗೊಂಡು ಔದ್ಯೋಗಿಕ ಕೇಂದ್ರಗಳಾಗಿವೆ

| Published : Oct 08 2024, 01:07 AM IST

ಪ್ರಸ್ತುತ ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣಗೊಂಡು ಔದ್ಯೋಗಿಕ ಕೇಂದ್ರಗಳಾಗಿವೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮಕಾಲೀನ ಸಂದರ್ಭದಲ್ಲಿ‌ಯುವ ಜನರಿಗೆ ನಾಡು- ನುಡಿ ಕಟ್ಟಿದ ಸಾಧಕರ ಬಗ್ಗೆ

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಸ್ತುತ ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣಗೊಂಡು ಔದ್ಯೋಗಿಕ ಕೇಂದ್ರಗಳಾಗಿವೆ. ತಮ್ಮ ಸೇವಾನೋಭಾವ ತೊರೆದಿವೆ. ಇದರಿಂದ ಜೀವನ ಮೌಲ್ಯಗಳು ಕುಸಿಯುತ್ತಿವೆ ಎಂದು ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಎಸ್. ಶಿವರಾಜಪ್ಪ ವಿಷಾದಿಸಿದರು.

ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸ್ಪಂದನ ಸಾಂಸ್ಕೃತಿಕ ಪರಿಷತ್ತು ಹಾಗೂ ಅದಮ್ಯ ರಂಗಶಾಲೆ ಸಂಯುಕ್ತವಾಗಿ ಆಯೋಜಿಸಿದ್ದ ನಾಟಕ ಪ್ರದರ್ಶನದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಸಮಕಾಲೀನ ಸಂದರ್ಭದಲ್ಲಿ‌ಯುವ ಜನರಿಗೆ ನಾಡು- ನುಡಿ ಕಟ್ಟಿದ ಸಾಧಕರ ಬಗ್ಗೆ ತಿಳಿಸುವ, ಅವರ ಪರಂಪರೆಯ ಹಾದಿಯಲ್ಲಿ ಕರೆದೊಯ್ಯುವ ಮಂದಿ ವಿರಳವಾಗಿದ್ದಾರೆ. ಹೀಗಾಗಿ, ಕುಸಿಯುತ್ತಿರುವ ಮೌಲ್ಯಗಳನ್ನು ಮೇಲೆತ್ತುವ ಕಾರ್ಯ ಮಾಡಬೇಕೇ ಹೊರತು, ಪಾತಳಕ್ಕೆ ತುಳಿಯುವ ಕೆಲಸ ಮಾಡಬಾರದು ಎಂದರು.

ನಾಡು- ನುಡಿ, ಸಾಹಿತ್ಯ- ಸಂಸ್ಕೃತಿಯ ಕಟ್ಟಲು ನೂರಾರು ಮಂದಿ ದುಡಿದಿದ್ದಾರೆ. ಹಾಗೇ ಅನೇಕ ಸಂಘ ಸಂಸ್ಥೆಗಳು ಕನ್ನಡ ಏಳ್ಗೆಗಾಗಿ ಪ್ರಾಮಾಣಿಕವಾಗಿ ಕಾರ್ಯೋನ್ಮುಖವಾಗಿವೆ. ಪ್ರಶಸ್ತಿಗಳು ಮಾರಾಟವಾಗುತ್ತಿರುವ ಕಾಲದಲ್ಲಿ ಕನ್ನಡ ಪರಂಪರೆ ಕಟ್ಟಲು ಶ್ರಮಿಸಿದವರಿಗೆ ನಾಡಚೇತನ ಕೆಂಪೇಗೌಡರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನಿಯ ಎಂದು ಅವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಮಾತನಾಡಿ, ಸಮಾಜದಲ್ಲಿ‌ಎರಡು ರೀತಿಯ ಚೇತನಗಳಿವೆ. ಒಂದು ಕಾಡುವ ಚೇತನ. ಅಂದರೆ ಕೆಡುಹವವರು. ಇವರು ಸದಾ ಮಾರಕ. ಮತ್ತೊಂದು ಕಟ್ಟುವ ಚೇತನ. ಇದೇ ಸಮಾಜದ ನಿಜವಾದ ಶಕ್ತಿ. ಕಟ್ಟುವ ಚೇತನಗಳಿಗೆ ಯಾವಾಗಲೂ ಗೌರವ ಸಲ್ಲುತ್ತದೆ ಎಂದರು.

ಸಮಾಜವನ್ನು ಕಾಪಾಡುವುದು ಸಾಹಿತ್ಯ, ಸಂಗೀತ, ನಾಟಕ ಮಾತ್ರ. ಇವು ಮನುಷ್ಯನಲ್ಲಿ ಚೈತನ್ಯಶೀಲತೆ ಬೆಳೆಸುತ್ತವೆ. ಉತ್ತಮ ದಾರಿಯೆಡೆಗೆ ಮುನ್ನಡೆಸುತ್ತವೆ. ಹೀಗಾಗಿ ಮಕ್ಕಳಿಗೆ ಆಸ್ತಿ, ಅಧಿಕಾರ ಕೊಡಿಸುವ ಬದಲಿಗೆ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿರುಚಿ ಬೆಳೆಸಿದರೆ, ಅವರು ಉತ್ತಮ ಮಾನವರಾಗುತ್ತಾರೆ ಎಂದು ಅವರು ತಿಳಿಸಿದರು.

ಇದೇ ಸಾಹಿತಿ ಮಿರ್ಲೆ ಚಂದ್ರಶೇಖರ್, ಪತ್ರಕರ್ತ ಆರ್. ಕೃಷ್ಣ, ಕನ್ನಿಕಾ ಕಾವೇರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಸಿ. ಚೋಂದಮ್ಮ, ವಿಸ್ಮಯ ಪ್ರಕಾಶನದ ಮುಖ್ಯಸ್ಥ ಹಾಲತಿ ಲೋಕೇಶ್, ಜಿಲ್ಲಾ ಹಿರಿಯ ನಾಗರಕರ ಸಂಘದ ಕಾರ್ಯದರ್ಶಿ ಆರ್. ನರಸಿಂಹಮೂರ್ತಿ, ಮೈಸೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಜಿ. ಮಹೇಶ್ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಂತರ ಕಥೆಗಾರ ವಸುದೇಂದ್ರ ಅವರ ಲಲಿತ ಪ್ರಬಂಧಗಳನ್ನು ಆಧರಿಸಿದ ವಿನೋದ್ ಸಿ. ಮೈಸೂರು ರಂಗರೂಪ ನಿರ್ದೇಶನದ, ಅದಮ್ಯ ರಂಗಶಾಲೆಯ ಕಲಾವಿದರ ಅಭಿನಯದ ''''''''ನಮ್ಮಮ್ಮ ಅಂದ್ರೆ ನಂಗಿಷ್ಟ'''''''' ಎಂಬ ನಾಟಕ ಪ್ರದರ್ಶನವಾಯಿತು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸ್ಪಂದನ ಸಾಂಸ್ಕೃತಿಕ ಪರಿಷತ್ತು ಅಧ್ಯಕ್ಷ ಟಿ. ಸತೀಶ್ ಜವರೇಗೌಡ, ಅದಮ್ಯ ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ, ಪದಾಧಿಕಾರಿಗಳಾದ ಟಿ. ಲೋಕೇಶ್ ಹುಣಸೂರು, ಕೆ.ಎಸ್. ಸತೀಶ್ ಕುಮಾರ್, ಎನ್. ನವೀನ್ ಕುಮಾರ್, ಡಾ.ಬಿ. ಬಸವರಾಜು ಇದ್ದರು.