ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಗೌರವ, ಘನತೆ ಹೆಚ್ಚುವಂತೆ ಕೆಲಸ ಮಾಡಿ ಎಂದು ಗಾಂಧಿ ಭವನ ಹಾಗೂ ಪ್ರಾಚ್ಯವಸ್ತು ಸಂಗ್ರಹಾಲಯದ ನಿವೃತ್ತ ನಿರ್ದೇಶಕ ಪ್ರೊ.ಎಸ್. ಶಿವರಾಜಪ್ಪ ಸಲಹೆ ಮಾಡಿದರು.ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆಯು ವಿವಿ ಸಂಜೆ ಕಾಲೇಜು ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಿಂಡಿಕೇಟಿನ ನೂತನ ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಅವರು, ಎಲ್ಲಾ ಸದಸ್ಯರು ಬದ್ಧತೆ, ಕಾಳಜಿಯಿಂದ ಕೆಲಸ ಮಾಡಿದರೆ ಈಗಿರುವ ಹೆಸರನ್ನು ಮತ್ತಷ್ಟು ಹೆಚ್ಚಿಸಬಹುದು ಎಂದರು.
ಸಿಂಡಿಕೇಟ್ ಸದಸ್ಯ ಡಾ.ಟಿ.ಆರ್. ಚಂದ್ರಶೇಖರ್ ಮಾತನಾಡಿ, ಎಲ್ಲಾ ಅರ್ಹತೆ ಇರುವ ಮೈಸೂರು ವಿವಿಗೆ ಕೇಂದ್ರೀಯ ವಿವಿ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.ನಾವೆಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಿ, ವಿದ್ಯಾರ್ಥಿಗಳ, ಅಧ್ಯಾಪಕರು, ಅಧ್ಯಾಪಕೇತರರ ಹಿತ ಸಂರಕ್ಷಿಸುತ್ತೇವೆ ಎಂದು ಅವರು ಹೇಳಿದರು.
ಕೆ. ಗೋಕುಲ್ ಗೋವರ್ಧನ್ ಮಾತನಾಡಿ, ನಾವೆಲ್ಲಾ ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದವರು. ಉನ್ನತ ಶಿಕ್ಷಣ ಕ್ಷೇತ್ರದ ಹಿತರಕ್ಷಣೆ ಮಾಡುತ್ತೇವೆ ಎಂದರು.ಪ್ರೊ.ಟಿ.ಆರ್. ಮಾರುತಿ ಮಾತನಾಡಿ, ಈ ವೇದಿಕೆಯು ವಿದ್ಯಾರ್ಥಿಗಳಿಗೆ ಸಂವಿಧಾನದ ಅರಿವು ಮೂಡಿಸುವ ಕೆಲಸ ಮಾಡಬೇಕು. ಕುವೆಂಪು ಆಶಯಗಳು ಕಾರ್ಯರೂಪಕ್ಕೆ ಬರಬೇಕು ಎಂದು ಸಲಹೆ ಮಾಡಿದರು.
ಮಹದೇಶ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಆರಂಭಿಸಿ, ಈ ವಿವಿಯಲ್ಲಿ ಕುವೆಂಪು ಅವರಿಂದ ಮಾನಸ ಗಂಗೋತ್ರಿ ಕ್ಯಾಂಪಸ್ ಆಯಿತು. ಅದರ ಘನತೆಗೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇವೆ. ಅದೇ ರೀತಿ ವಿದ್ಯಾರ್ಥಿಗಳು ಗುರು- ಗುರಿ ಇಟ್ಟುಕೊಂಡು ಮುಂದೆ ಸಾಗಬೇಕು ಎಂದರು.ಸಿ. ನಾಗರಾಜು ಮಾತನಾಡಿ, ವಿವಿಯಲ್ಲಿ ಹಲವಾರು ಸಮಸ್ಯೆಗಳಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹರಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ಡಾ.ಜೆ. ಶಿಲ್ಪಾ ಮಾತನಾಡಿ, ಪ್ರತಿಯೊಬ್ಬರೂ ಕುವೆಂಪು ಅವರ ಅನಿಕೇತನ ಗೀತೆ ಅರ್ಥ ಮಾಡಿಕೊಂಡು ಅದರಂತೆ ಮುಂದುವರೆದರೆ ಸಾಕು ಎಂದರು. ವಿದ್ಯಾರ್ಥಿಗಳು ಮೊಬೈಲ್, ರೀಲ್ಸ್, ಸೆಲ್ಫಿ ಬಿಟ್ಟು ಪುಸ್ತಕಗಳನ್ನು ಓದುವ ಕಡೆ ಗಮನ ನೀಡಬೇಕು ಎಂದರು.ಡಾ.ಸಿ. ಬಸವರಾಜು ಜಟ್ಟಿಹುಂಡಿ ಮಾತನಾಡಿ, ಛಲವಿದ್ದಲ್ಲಿ ಏನು ಬೇಕಾದರೂ ಸಾಧಿಸಬಹುದು. ನಮ್ಮ ಅಧಿಕಾರವಧಿಯಲ್ಲಿ ಕನಿಷ್ಠ ಹತ್ತು ವರ್ಷ ಪೂರೈಸಿರುವ ತಾತ್ಕಾಲಿಕ ನೌಕರರ ಕಾಯಮಾತಿಗೆ ಪ್ರಯತ್ನಿಸುವುದಾಗಿ ಹೇಳಿದರು.
ನಟರಾಜ್ ಶಿವಣ್ಣ ಮಾತನಾಡಿ, ವಿವಿಯಲ್ಲಿ ಕಾಯಂ ಅಧ್ಯಾಪಕರ ನೇಮಕಾತಿ ಕಡೆಗೆ ಗಮನಹರಿಸುವುದಾಗಿ ಹೇಳಿದರು.ಸಮಾಜ ಕಾರ್ಯವಿಭಾಗದ ಪ್ರಾಧ್ಯಾಪಕಿ ಡಾ.ಎಚ್.ಪಿ. ಜ್ಯೋತಿ ಮಾತನಾಡಿ, ಮೈಸೂರು ವಿವಿಯನ್ನು ಕೇಂದ್ರೀಯ ವಿವಿಯಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಮನವಿ ಮಾಡಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗ್ರೀನ್ ಡಾಟ್ ಟ್ರಸ್ಟಿನ ಕಾರ್ಯದರ್ಶಿ ಸಿ.ಕೆ. ಕಾಂತರಾಜ್, ಮಾನಸ ಗಂಗೋತ್ರಿ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕಿ ಡಾ.ಎಚ್.ಪಿ. ಜ್ಯೋತಿ, ವಿವಿ ಸಂಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್. ಮಹದೇವಮೂರ್ತಿ ವಿಶೇಷ ಆಹ್ವಾನಿತರಾಗಿದ್ದರು. ಎನ್ಎಸ್ ಎಸ್ ಅಧಿಕಾರಿ ಡಾ.ದಿವಾಕರ್ ಚಾಂಡಿ, ಎನ್ ಸಿಸಿ ಅಧಿಕಾರಿ ಡಾ.ಗಿರೀಶ್ ಕುಮಾರ್, ವೇದಿಕೆಯ ಅಧ್ಯಕ್ಷ ಆರ್. ವಾಸುದೇವ, ಉಪಾಧ್ಯಕ್ಷ ಭಾಸ್ಕರ್, ಕಾರ್ಯದರ್ಶಿ ಎಸ್. ವಿನೋದ್, ಖಜಾಂಚಿ ಕೆ. ಗಣೇಶ್, ನಿರ್ದೇಶಕರಾದ ಯೋಗೇಶ್, ಡಾ.ಎಚ್. ನವೀನಕುಮಾರ್, ಚಿದಾನಂದ, ಮಂಜುನಾಥ್, ಮಂಜುನಾಥ್ ಕೆ. ಗೌಡ, ಆರ್ .ಹರೀಶ್, ಎಸ್. ರಿಷಿರಾಜ್, ಸುರೇಶ್, ಪ್ರದೀಪ್, ರೋಹಿತ್, ಶ್ರೇಯಸ್, ರವಿ, ಯೋಗೇಶ್, ಜಗದೀಶ್ ಇದ್ದರು.ಡಾ.ಮಧುಸೂದನ್, ಡಾ.ಆರ್. ನಿಂಗರಾಜು ಪ್ರಾರ್ಥಿಸಿದರು. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ವಿ.ಆರ್. ರಮೇಶ್ ಬಾಬು ನಿರೂಪಿಸಿದರು. ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಜಗದೀಶ್ ಸ್ವಾಗತಿಸಿದರು. ವಿವಿ ಸಂಜೆ ಕಾಲೇಜಿನ ಉಪನ್ಯಾಸಕಿ ಡಾ.ಬಿ.ಎಸ್. ದಿನಮಣಿ ವಂದಿಸಿದರು.
ಇತ್ತೀಚೆಗೆ ನಿಧನರಾದ ನಿವೃತ್ತ ಐಎಎಸ್ ಅಧಿಕಾರಿ, ಚಲನಚಿತ್ರ ನಟ ಕೆ. ಶಿವರಾಂ ಅವರಿಗೆ ಒಂದು ನಿಮಿಷ ಮೌನ ಆಚರಿಸಿ ,ಶ್ರದ್ಧಾಂಜಲಿ ಅರ್ಪಿಸಲಾಯಿತು.ಸನ್ಮಾನಿತರು
ಡಾ.ಟಿ.ಆರ್. ಚಂದ್ರಶೇಖರ್, ಕೆ. ಗೋಕುಲ್ ಗೋವರ್ಧನ್, ಪ್ರೊ.ಟಿ.ಆರ್. ಮಾರುತಿ, ಮಹದೇಶ್, ಸಿ. ನಾಗರಾಜು, ಡಾ.ಜೆ. ಶಿಲ್ಪಾ, ಡಾ.ಬಸವರಾಜು ಸಿ. ಜಟ್ಟಿಹುಂಡಿ, ನಟರಾಜ್ ಶಿವಣ್ಣ ಅವರನ್ನು ಸನ್ಮಾನಿಸಲಾಯಿತು. ಮತ್ತೊರ್ವ ಸದಸ್ಯರಾದ ಪ್ರೊ.ಶಬ್ಬೀರ್ ಮಹಮದ್ ಮುಸ್ತಫಾ ಗೈರಾಗಿದ್ದರು.