ಸಾರಾಂಶ
ಗುಂಡ್ಲುಪೇಟೆ ತಾಲೂಕಿನ ಹೆಗ್ಗಡಹಳ್ಳಿ ಡೇರಿ ಸಿಇಒ ಶಾಂತಮಲ್ಲಪ್ಪ ನಿವೃತ್ತಿಗೊಂಡ ಹಿನ್ನೆಲೆ ₹೫ ಲಕ್ಷ ಪರಿಹಾರದ ಚೆಕ್‌ಅನ್ನು ಚಾಮುಲ್ ನಿರ್ದೇಶಕರಾದ ನಂಜುಂಡಪ್ರಸಾದ್, ಸುನೀಲ್ ವಿತರಿಸಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಗೊಂಡ ಸಿಬ್ಬಂದಿಗೆ ಚಾಮುಲ್ ನೀಡುವ ಪರಿಹಾರದ ಹಣವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್ ಸಲಹೆ ನೀಡಿದರು.ಪಟ್ಟಣದ ಚಾಮುಲ್ ಕಚೇರಿಯಲ್ಲಿ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿವೃತ್ತಿಗೊಂಡ ಸಿಇಒ ಶಾಂತಮಲ್ಲಪ್ಪಗೆ ₹೫ ಲಕ್ಷ ಪರಿಹಾರದ ಚೆಕ್ ಅನ್ನು ಚಾಮುಲ್ ನಿರ್ದೇಶಕ ಎಂ.ಪಿ.ಸುನೀಲ್ ಜೊತೆಗೂಡಿ ವಿತರಿಸಿದ ಬಳಿ ಮಾತನಾಡಿದರು. ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಚಾಮುಲ್ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಪರಿಹಾರ ನೀಡಲಾಗುತ್ತಿದೆ. ಮರಣ ಹೊಂದಿದ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗೆ ಒಕ್ಕೂಟದ ವತಿಯಿಂದ ಪರಿಹಾರ ನೀಡಲಾಗುತ್ತಿದೆ ಎಂದರು.
ಸಹಕಾರ ಸಂಘಗಳಲ್ಲಿ ಸಿಬ್ಬಂದಿ ಇನ್ನೂ ಹೆಚ್ಚಿನ ಆಸಕ್ತಿಯಿಂದ ಕೆಲಸ ನಿರ್ವಹಿಸಿ ಸಂಘಗಳನ್ನು ಲಾಭದತ್ತ ಕೊಂಡೊಯ್ಯಬೇಕು. ಸಹಕಾರ ಸಂಘಗಳಲ್ಲಿ ಸಿಗುವ ಸೌಲಭ್ಯಗಳು ಯಾವುದೇ ಖಾಸಗಿ ಡೈರಿಗಳಲ್ಲಿ ಸಿಗುವುದಿಲ್ಲ ಎಂದರು. ಚಾಮುಲ್ ನಿರ್ದೇಶಕ ಎಂ.ಪಿ.ಸುನಿಲ್ ಮಾತನಾಡಿ, ಸಂಘಗಳಲ್ಲಿ ಹಾಲಿನ ಗುಣಮಟ್ಟ ಹಾಗೂ ಸಂಘವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುವಲ್ಲಿ ಸಂಘಗಳ ಸಿಬ್ಬಂದಿ ಪಾತ್ರ ಬಹುಮುಖ್ಯವಾಗಿದ್ದು ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಾ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಚಾಮುಲ್ ಸಹಾಯಕ ವ್ಯವಸ್ಥಾಪಕ ಜಿ.ಪ್ರಭು, ವಿಸ್ತರಣಾಧಿಕಾರಿ ಎಚ್.ಪ್ರಕಾಶ್, ಸಿದ್ದಲಿಂಗೇಶ್ ಕೋರೆ, ರೋಹಿತ್, ರಂಜಿತಾ, ಮುದ್ದಪ್ಪ ಉದಯ್, ಮಂಜೇಶ್, ಡೇರಿಗಳ ಸಿಇಒಗಳಾದ ಅಗತಗೌಡನಹಳ್ಳಿ ಮಹೇಂದ್ರ, ಹಕ್ಕಲಪುರ ನಾಗೇಶ್, ಜಯಣ್ಣ, ಕರುಣಮೂರ್ತಿ, ಫಲಾನುಭವಿ ಶಾಂತಮಲ್ಲಪ್ಪ ಹಾಜರಿದ್ದರು.