ಸಿ.ಟಿ.ರವಿ ಕೇಸ್ ತನಿಖೆಗೆ ನಿವೃತ್ತ ಜಡ್ಜ್‌: ಬಿಜೆಪಿ ಮನವಿ

| Published : Dec 25 2024, 12:49 AM IST

ಸಾರಾಂಶ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ ಆರೋಪದ ಮೇರೆಗೆ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಬಂಧನ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶ ಮಾಡಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸತ್ಯಶೋಧನಾ ತಂಡವನ್ನು ರಚನೆ ಮಾಡಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಬಿಜೆಪಿಯು ರಾಜ್ಯಪಾಲರನ್ನು ಒತ್ತಾಯಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ ಆರೋಪದ ಮೇರೆಗೆ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಬಂಧನ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶ ಮಾಡಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸತ್ಯಶೋಧನಾ ತಂಡವನ್ನು ರಚನೆ ಮಾಡಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಬಿಜೆಪಿಯು ರಾಜ್ಯಪಾಲರನ್ನು ಒತ್ತಾಯಿಸಿದೆ.

ಮಂಗಳವಾರ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ನೇತೃತ್ವದ ನಿಯೋಗವು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರನ್ನು ಭೇಟಿ ಮಾಡಿ, ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ ಆಡಳಿತವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ರಾಜ್ಯಪಾಲರು ಮಧ್ಯಪ್ರವೇಶಿಸಬೇಕು. ಘಟನೆ ಕುರಿತು ಪ್ರತ್ಯೇಕ ತನಿಖೆ ನಡೆಸಬೇಕಾಗಿದೆ ಎಂದು ಹೇಳಿದೆ.

ನಿಯೋಗದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಗಾಲಿ ಜನಾರ್ದನ ರೆಡ್ಡಿ, ಎಸ್‌.ಮುನಿರಾಜು, ಎನ್‌.ರವಿಕುಮಾರ್‌, ಎಸ್‌.ರಘು, ಕೇಶವ್ ಪ್ರಸಾದ್‌ ಮತ್ತಿತರರು ಇದ್ದರು.

ಸಿ.ಟಿ.ರವಿ ಬಂಧನವು ಕಾನೂನು ಬದ್ಧವಾಗಿಯೇ ಮಾಡಲಾಗಿದೆಯೇ ಅಥವಾ ರಾಜಕೀಯ ಪ್ರೇರಿತದಿಂದ ಕೂಡಿದೆಯೇ ಎಂಬುದರ ಕುರಿತು ತನಿಖೆ ನಡೆಸಬೇಕಾಗಿದೆ. ಸತ್ಯಾಸತ್ಯತೆ ಕುರಿತು ತನಿಖೆ ನಡೆಸಿದರೆ ಮಾತ್ರ ನಿಜಾಂಶ ರಾಜ್ಯದ ಜನರಿಗೆ ಗೊತ್ತಾಗಲಿದೆ. ಪೊಲೀಸ್‌ ಇಲಾಖೆಯು ಸರ್ಕಾರದ ಅಧೀನದಲ್ಲಿ ಬರುವುದರಿಂದ ಪೊಲೀಸ್‌ ತನಿಖೆಯಿಂದ ಸತ್ಯ ಹೊರಬರಲಿದೆ ಎಂಬ ನಂಬಿಕೆ ಇಲ್ಲ. ಹೀಗಾಗಿ ಪ್ರತ್ಯೇಕ ತನಿಖೆ ನಡೆಸುವ ಅಗತ್ಯ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ವಿಧಾನಸಭೆ ಪ್ರತಿಪಕ್ಷನಾಯಕ ಆರ್‌.ಅಶೋಕ್‌, ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಅವರಿಗೆ ರಕ್ಷಣೆ ನೀಡುವಂತೆ ಕೋರಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರಿಗೆ ಮನವಿ ಸಲ್ಲಿಸಲಾಗಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಸಿ.ಟಿ.ರವಿ ಅವರಿಗೆ ಮಾಡಿದ ಅಪಮಾನದ ಬಗ್ಗೆ ರಾಜ್ಯಪಾಲರಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಸಿ.ಟಿ.ರವಿ ಅವರಿಗೆ ಮುಸ್ಲಿಂ ಉಗ್ರವಾದಿ ಹಾಗೂ ನಕ್ಸಲರಿಂದ ಬೆದರಿಕೆ ಇದೆ. ಹೀಗಿದ್ದರೂ ಅವರನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿರುವುದು ಅನುಮಾನ ತಂದಿದೆ. ಒಬ್ಬ ಪೊಲೀಸ್‌ ಅಧಿಕಾರಿ ಸುರಕ್ಷತೆ ದೃಷ್ಟಿಯಿಂದ ಅವರನ್ನು ಗದ್ದೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ. ಹಾಗಾದರೆ ಪೊಲೀಸ್‌ ಠಾಣೆ ಸುರಕ್ಷಿತವಲ್ಲ ಎಂಬುದನ್ನು ಸರ್ಕಾರ ಜನರಿಗೆ ತಿಳಿಸಿದೆ ಎಂದು ಟೀಕಾಪ್ರಹಾರ ನಡೆಸಿದೆ.

ಘಟನೆಯು ರಾಜ್ಯ ಸರ್ಕಾರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ. ಅದಕ್ಕಾಗಿ ರಾಜ್ಯಪಾಲರು ಸಂವಿಧಾನವನ್ನು ರಕ್ಷಣೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಪೊಲೀಸ್‌ ಆಯುಕ್ತರಿಗೆ ನಿರಂತರವಾಗಿ ಫೋನ್‌ ಕರೆ ಬರುತ್ತಿದ್ದು, ಅವರಿಗೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಕರೆ ಮಾಡುತ್ತಿದ್ದರೇ ಎಂಬುದು ಗೊತ್ತಾಗಬೇಕು. ಇದರ ತನಿಖೆಯನ್ನು ನಿಷ್ಪಕ್ಷಪಾತವಾಗಿ ಮಾಡಬೇಕು ಎಂದು ಆಗ್ರಹಿಸಿದರು.

ಪೊಲೀಸ್‌ ಠಾಣೆಗಳು ಕಾಂಗ್ರೆಸ್‌ ಕಚೇರಿಯಾಗಿ ಬದಲಾಗಿದೆ. ಪೊಲೀಸರು ಜವಾಬ್ದಾರಿಯಿಂದ ನಡೆದುಕೊಂಡಿಲ್ಲ. ಅದಕ್ಕಾಗಿ ನ್ಯಾಯಾಂಗ ತನಿಖೆಗೆ ಆಗ್ರಹಿಸಲಾಗಿದೆ. ನ್ಯಾಯಾಂಗ ತನಿಖೆಯಲ್ಲಿ ಯಾವುದೇ ತೀರ್ಪು ಬಂದರೂ ಒಪ್ಪಿಕೊಳ್ಳುತ್ತೇವೆ ಎಂದರು.ಪೊಲೀಸ್ ಠಾಣೆಗಿಂತ ಕಬ್ಬಿನ ಗದ್ದೆಯೇ ಸುರಕ್ಷಿತ: ಅಶೋಕ್ಪೊಲೀಸ್ ಠಾಣೆಗಿಂತ ಕಬ್ಬಿನ ಗದ್ದೆಯೇ ಸುರಕ್ಷಿತ ಎಂಬುದನ್ನು ಈ ಸರ್ಕಾರ ತೋರಿಸಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.ಮಂಗಳವಾರ ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿ.ಟಿ.ರವಿ ಅವರಿಗೆ ಮುಸ್ಲಿಂ ಉಗ್ರವಾದಿ ಹಾಗೂ ನಕ್ಸಲರಿಂದ ಬೆದರಿಕೆ ಇದೆ. ಹೀಗಿದ್ದರೂ ಅವರನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿರುವುದು ಅನುಮಾನ ತಂದಿದೆ. ಒಬ್ಬ ಪೊಲೀಸ್‌ ಅಧಿಕಾರಿ ಸುರಕ್ಷತೆ ದೃಷ್ಟಿಯಿಂದ ಅವರನ್ನು ಗದ್ದೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ. ಅಂದರೆ ಪೊಲೀಸ್‌ ಠಾಣೆ ಸುರಕ್ಷಿತವಲ್ಲ ಎಂಬುದಾಗಿ ಈ ಸರ್ಕಾರ ಜನರಿಗೆ ತಿಳಿಸಿದೆ ಎಂದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬೆಳಗಾವಿ ಪೊಲೀಸ್ ಆಯುಕ್ತ ಎಡ ಮಾರ್ಟಿನೋ ಅಥವಾ ಬಲ ಮಾರ್ಟಿನೋ ಗೊತ್ತಿಲ್ಲ. ಆದರೆ, ಅವರು ನಡೆದುಕೊಂಡ ರೀತಿ ಸರಿಯಲ್ಲ ಎಂದು ತಿಳಿಸಿದರು.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ರವಿ ಅವರನ್ನು ಆಣೆ ಪ್ರಮಾಣಕ್ಕೆ ಆಹ್ವಾನಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅಶೋಕ್‌, ಯಾರು ಸತ್ಯ ಯಾರು ಮಿಥ್ಯ ಎಂಬುದನ್ನು ಸಂವಿಧಾನ ತೀರ್ಮಾನ ಮಾಡುತ್ತದೆ. ಸಂವಿಧಾನದ ತೀರ್ಪು ಏನೇ ಬಂದರೂ ಅದನ್ನು ಸಿ.ಟಿ.ರವಿ ಒಪ್ಪಿಕೊಳ್ಳುತ್ತಾರೆ. ಧರ್ಮಸ್ಥಳದ ಮಂಜುನಾಥ ಮಂಜುನಾಥ ಆಗಿಯೇ ಇರಲಿ ಎಂದು ಹೇಳಿದರು.ಪೊಲೀಸರ ವಿರುದ್ಧ ಹಕ್ಕುಚ್ಯುತಿ ದಾಖಲಿಸಿ: ರವಿಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳಕರ ಪ್ರಕರಣ ಸಂಬಂಧ ಬಂಧಿಸಿದಾಗ ಅಮಾನವೀಯವಾಗಿ ವರ್ತಿಸಿ ಕರ್ತವ್ಯ ಲೋಪ ಎಸಗಿರುವ ಪೊಲೀಸರ ಮೇಲೆ ಹಕ್ಕುಚ್ಯುತಿ ಪ್ರಕರಣ ದಾಖಲಿಸಬೇಕು ಮತ್ತು ನನಗೆ ನಿರ್ಭೀತನಾಗಿ ಕರ್ತವ್ಯ ನಿರ್ವಹಿಸಲು ಅನುಕೂಲಕರ ವಾತಾವರಣ ಕಲ್ಪಿಸಿಕೊಡಬೇಕು ಎಂದು ಒತ್ತಾಯಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮಂಗಳವಾರ ಮತ್ತೊಂದು ದೂರು ದಾಖಲಿಸಿದ್ದಾರೆ.ಬೆಳಗಾವಿ ಅಧಿವೇಶನದ ವೇಳೆ ಪರಿಷತ್‌ನಲ್ಲಿ ಕಲಾಪವನ್ನು ಮುಂದೂಡಿದ ಬಳಿಕ ತಮ್ಮ ಮೇಲೆ ಹಲ್ಲೆ ನಡೆಸಲಾಗಿದ್ದು, ಜೀವ ಬೆದರಿಕೆ ಹಾಕಿದ್ದಾರೆ. ಪ್ರಕರಣದ ನಂತರ ನನ್ನನ್ನು ಬಂಧಿಸಿ ಪೊಲೀಸರು ಇಡೀ ರಾತ್ರಿ ವಾಹನದಲ್ಲಿ ಸುತ್ತಾಡಿಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆಂದು ಆರೋಪಿಸಿ ಏಳು ಪುಟಗಳ ವಿವರವಾದ ದೂರನ್ನು ಸಭಾಪತಿ ಬಸವರಾಜ್‌ ಹೊರಟ್ಟಿ, ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಹಾಗೂ ಪೊಲೀಸ್‌ ಮಹಾ ನೀರಿಕ್ಷಕರಿಗೆ ಸಲ್ಲಿಸಲಾಗಿದೆ ಎಂದು ಸಿ.ಟಿ. ರವಿ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಡಿ.19ರಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ವಿಧಾನಪರಿಷತ್‌ನಲ್ಲಿ ನಾನು ಅಸಾಂವಿಧಾನಿಕ ಪದ ಬಳಕೆ ಮಾಡಿದ್ದೇನೆಂದು ಸಭಾಪತಿಗೆ ದೂರು ಸಲ್ಲಿಸಿದ್ದರು. ಈ ದೂರಿಗೆ ಸಂಬಂಧಿಸಿದಂತೆ ಸಭಾಪತಿ ನನ್ನಿಂದ ಸಮಾಜಾಯಿಷಿ ಪಡೆದು, ದಾಖಲೆಗಳನ್ನು ಪರಿಶೀಲಿಸಿ ನಂತರ ಆದೇಶ ನೀಡಿದ್ದಾರೆ.

ಕಲಾಪ ಮುಂದೂಡಿದ ನಂತರ ಸದನದೊಳಗೆ ಹಾಗೂ ಹೊರಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವ ಬೋಸರಾಜು, ವಿಧಾನಪರಿಷತ್‌ ಸದಸ್ಯರಾದ ನಜೀರ್‌ ಅಹ್ಮದ್‌, ಬಸವನಗೌಡ ಬಾದರ್ಲಿ, ಚೆನ್ನರಾಜ ಹಟ್ಟಿಹೊಳೆ ಅವರು ಅವಾಚ್ಯ ಶಬ್ಧಗಳಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ನಿಂದಿಸಿರಿಸುವುದರ ಜತೆಗೆ ಹೊರಗೆ ಬಾ ನಿನಗೆ ಗತಿ ಕಾಣಿಸುತ್ತೇವೆಂದು ಜೀವ ಬೆದರಿಕೆ ಹಾಕಿದ್ದಾರೆ. ಅವರ ಬೆಂಬಲಿಗರು ಕೂಡ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪೊಲೀಸರಿಂದ ನನ್ನ ಹಕ್ಕು ಚ್ಯುತಿಯಾಗಿದೆ. ಜೀವ ಬೆದರಿಕೆ, ಮಾನಹಾನಿಯಾಗಿದೆ. ಸಚಿವರ ಬೆಂಬಲಿಗರಿಂದ ಹಲ್ಲೆ ಯತ್ನ ನಡೆದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.ದೂರಿನಲ್ಲಿರುವ ಪ್ರಮುಖ ಆರೋಪ

1) ಡಿ. 19 ರಂದು ಸಂಜೆ 6.45ಕ್ಕೆ ಸುವರ್ಣ ಸೌಧದ ಮೆಟ್ಟಿಲ ಮೇಲೆ ಧರಣಿ ನಡೆಸುತ್ತಿದ್ದಾಗ ಪೊಲೀಸರು ಅನಾಮತ್ತಾಗಿ ಪೊಲೀಸ್‌ ವ್ಯಾನ್‌ನಲ್ಲಿ ಕರೆದೊಯ್ದರು.2) ನನ್ನನ್ನು ಪ್ರತ್ಯೇಕವಾಗಿ ಖಾನಾಪುರ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋದರು, ಯಾಕೆ ಬಂಧಿಸಿದರು, ಬಂಧನದ ಕಾರಣ ಏನು ಎಂದು ತಿಳಿಸಲಿಲ್ಲ.

3) ತನ್ನ ವ್ಯಾಪ್ತಿ ಇಲ್ಲದೆ ಇದ್ದರೂ ಆಗ ಬೆಳಗಾವಿ ಪೊಲೀಸ್ ಕಮೀಷನರ್‌ ಬಂದು ಪೊಲೀಸರಿಗೆ ಏನು ಮಾಡಬೇಕು ಎಂಬ ಸೂಚನೆ ಕೊಡುತ್ತಿದ್ದರು.4) ನನ್ನ ವಕೀಲರ ಸಂಪರ್ಕಕ್ಕೆ ಅವಕಾಶ ಕೊಡಬೇಕಾಗಿತ್ತು. ನನ್ನ ಕುಟುಂಬ ವರ್ಗಕ್ಕೂ ಮಾಹಿತಿ ನೀಡಬೇಕಾಗಿತ್ತು. ಇದ್ಯಾವ ಕ್ರಮವನ್ನೂ ಪೊಲೀಸರು ಪಾಲಿಸಲಿಲ್ಲ. ಪಾರದರ್ಶಕ, ಪ್ರಾಮಾಣಿಕವಾಗಿ ಪೊಲೀಸ್‌ ಇಲಾಖೆ ನಡೆದುಕೊಳ್ಳಲಿಲ್ಲ.

5) ನನ್ನನ್ನು ಸವದತ್ತಿ, ರಾಮದುರ್ಗ, ಯಾದವಾಡ ಕಡೆ ಓಡಾಡಿಸಿ ಕಬ್ಬಿನ ಗದ್ದೆಗಳ, ಕಲ್ಲಿನ ಕೋರೆಗಳ ನಡುವೆ ನಿಲ್ಲಿಸಿದ್ದರು. ಪೊಲೀಸರು ವ್ಯಾನಿನಿಂದ ಇಳಿದು ಹೋಗಿ ಪೋನಿನಲ್ಲಿ ಮಾತನಾಡಿ ಸೂಚನೆ ಪಡೆಯುತ್ತಿದ್ದರು.6) ಪೋಲೀಸರು ಯಾವುದೇ ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕ ಕ್ರಮಗಳನ್ನು ಪಾಲಿಸಲಿಲ್ಲ, ನನ್ನನ್ನು ಫೇಕ್‌ ಎನ್‌ಕೌಂಟರ್‌ ಮಾಡುವ ಸಾಧ್ಯತೆ ಕಾಣುತ್ತಿತ್ತು.