ವೈದ್ಯರು ದೇವರಲ್ಲ. ದೇವರ ಪ್ರತಿನಿಧಿಗಳು. ಜನರ ಆರೋಗ್ಯ ಕಾಪಾಡಿ ಆರೈಕೆ ಮಾಡುವ ಮೂಲಕ ಜೀವ ಉಳಿಸುವ ಆ ವೃತ್ತಿ ಪವಿತ್ರವಾದುದು.

ಕನ್ನಡಪ್ರಭ ವಾರ್ತೆ ಮೈಸೂರು

ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ವೈದ್ಯರು ದೇವರಾಗುತ್ತಾರೆ ಎಂದು ನಿವೃತ್ತ ವೈದ್ಯಾಧಿಕಾರಿ ಡಾ.ಎಂ.ಜಿ.ಆರ್. ಅರಸ್ ಹೇಳಿದರು.

ನಗರದ ನಮನ ಕಲಾಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕವು ಡಾ.ಬಿ.ಸಿ. ರಾಯ್ ಸ್ಮರಣಾರ್ಥ ಸೋಮವಾರ ಆಯೋಜಿಸಿದ್ದ ವೈದ್ಯರದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯರು ದೇವರಲ್ಲ. ದೇವರ ಪ್ರತಿನಿಧಿಗಳು. ಜನರ ಆರೋಗ್ಯ ಕಾಪಾಡಿ ಆರೈಕೆ ಮಾಡುವ ಮೂಲಕ ಜೀವ ಉಳಿಸುವ ಆ ವೃತ್ತಿ ಪವಿತ್ರವಾದುದು. ರೋಗಿಗಳನ್ನು ಆರೈಕೆ ಮಾಡಿ ಮರು ಜೀವ ನೀಡುವ ಶಕ್ತಿ ವೈದ್ಯರಿಗೆ ಇರುತ್ತದೆ. ಆದ್ದರಿಂದ ಅವರು ದೇವರಾಗುತ್ತಾರೆ ಎಂದರು.

ವೈದ್ಯರು ತಮ್ಮ ಅಪ್ರತಿಮ ಸೇವೆಯಿಂದ ಪ್ರಖ್ಯಾತರಾಗಿದ್ದಾರೆ. ಅವರ ಜೀವನ ಸೇವೆಗೆ ಮುಡಿಪಾಗಿರುತ್ತದೆ. ಕೆಲವರು ವೈದ್ಯರಾಗಿದ್ದವರು ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ತಮ್ಮ ಮೂಲ ವೃತ್ತಿ ಮರೆಯುತ್ತಿದ್ದಾರೆ. ಇದು ಸರಿ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಿವೃತ್ತ ವೈದ್ಯಾಧಿಕಾರಿ ಡಾ.ಎಚ್. ಹನುಮಂತಪ್ಪ, ಸಂಸ್ಕೃತ ವಿದ್ವಾಂಸೆ ಡಾ.ಕೆ. ಲೀಲಾ ಪ್ರಕಾಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ವೈದ್ಯರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಧನ್ವಂತರಿ ಸಂಬಂಧ ಅನುಭವಗಳ ಹಂಚಿಕೆ, ಚಟುಕು, ಹನಿಗವನ, ಮುಕ್ತಕ, ಕವಿಗೋಷ್ಠಿ, ಲಲಿತ ಪ್ರಬಂಧ, ಗೀತ ಗಾಯನ, ಆಧುನಿಕ ವಚನ, ಹಾಸ್ಯ ಪ್ರಸಂಗ, ನ್ಯಾನೋ ಕತೆಗಳನ್ನು ಅನಾವರಣಗೊಳಿಸಲಾಯಿತು.

ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಮ.ನ. ಲತಾ ಮೋಹನ್, ಅಂತಾರಾಷ್ಟ್ರೀಯ ಬಯೋವೆಲ್ಲಾ ತರಬೇತುದಾರ ಗುರುರಾಜ್, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಹೇಮಲತಾ ಕುಮಾರಸ್ವಾಮಿ ಇದ್ದರು.