ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಪೊಲೀಸರಿಗೆ ಸಿಕ್ಕಿರುವುದು ಜನಸೇವೆಯ ಅಧಿಕಾರ. ಆದಷ್ಟೂ ಜನರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಬೇಕು ಎಂದು ನಿವೃತ್ತ ಎಡಿಜಿಪಿ ಭಾಸ್ಕರ್ ರಾವ್ ಹೇಳಿದರು.ನಗರದ ಪೊಲೀಸ್ ಸಮುದಾಯ ಭವನ ‘ಮೈತ್ರಿ’ಯಲ್ಲಿ ಮಂಗಳವಾರ ನಡೆದ ಕೊಡಗು ಜಿಲ್ಲಾ ನಿವೃತ್ತ ಪೊಲಿಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ‘ಬೆಳ್ಳಿ ಹಬ್ಬ’ದಲ್ಲಿ ಅವರು ಮಾತನಾಡಿದರು.
ತಾವು ಈ ಹಿಂದೆ ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಕ್ಷಣಗಳನ್ನು ಸ್ಮರಿಸಿಕೊಂಡರು.ಮೈತ್ರಿ ಕಟ್ಟಡದ ಒಂದೊಂದು ಇಟ್ಟಿಗೆ, ಕಲ್ಲಿನಲ್ಲೂ ಪೊಲೀಸರ, ದಾನಿಗಳ, ಸಾರ್ವಜನಿಕರ ಬೆವರು ಅಡಗಿದೆ’ ಎಂದು ಹೇಳಿದರು.
ಲೆಫ್ಟಿನೆಂಟ್ ಜನರಲ್ ಡಾ. ಪ್ರೊ.ಬಿ.ಎನ್.ಬಿ.ಎಂ. ಪ್ರಸಾದ್ ಎಸ್‌ಎಂ., ವಿಎಸ್‌ಎಂ ಮಾತನಾಡಿಪೊಲೀಸರೇ ಆಗಲಿ, ಸೈನಿಕರೇ ಆಗಲಿ ಕರ್ತವ್ಯ ನಿಷ್ಠೆ ಇರಲೇಬೇಕು ಎಂದು ಪ್ರತಿಪಾದಿಸಿದರು.
ಇಬ್ಬರ ಸಮವಸ್ತ್ರಗಳು ಬೇರೆ ಬೇರೆಯಾದರೂ ಕಾರ್ಯ ಮಾತ್ರ ಒಂದೇ. ಇಬ್ಬರೂ ದೇಶಸೇವೆಯನ್ನೇ ಮಾಡುತ್ತಾರೆ. ಈ ದೇಶಸೇವೆ ಕರ್ತವ್ಯನಿಷ್ಠೆಯಿಂದ ಕೂಡಿರಬೇಕು ಎಂದು ಹೇಳಿದರು.ನಿವೃತ್ತ ಜಾಯಿಂಟ್ ಕಂಟ್ರೋಲರ್ ಫೈನಾನ್ಸ್ ಬಿ.ಜಿ.ಮಾದಪ್ಪ ಮಾತನಾಡಿ, ‘ನಿವೃತ್ತಿಯ ಬಳಿಕ ಸುಮ್ಮನಿರದೇ ಏನಾದರೊಂದು ಕಾರ್ಯ ಮಾಡುತ್ತಿರಬೇಕು. ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಕೊಡಗಿನಿಂದ ಪೊಲೀಸ್ ಇಲಾಖೆಗೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಯುವ ಸಮೂಹಕ್ಕೆ ಅಗತ್ಯ ಪ್ರೇರಣೆ ನೀಡುವ ಕೆಲಸ ಆಗಬೇಕು’ ಎಂದರು.ಕೊಡಗು ಜಿಲ್ಲಾ ನಿವೃತ್ತ ಪೊಲಿಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಕೆ.ಉತ್ತಪ್ಪ ಮಾತನಾಡಿ ನಿವೃತ್ತ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು, ನಿವೃತ್ತಿಯ ತಮ್ಮ ಜೀವನದಲ್ಲಿ ಹೆಚ್ಚಿನ ಸಮಯವನ್ನು ಕುಟುಂಬಕ್ಕೆ ನೀಡುವುದರೊಂದಿಗೆ ಆರೋಗ್ಯ ಸಂರಕ್ಷಣೆಗೆ ಒತ್ತು ನೀಡಬೇಕು’ ಎಂದು ಮನವಿ ಮಾಡಿದರು.
ಗೌರವಾಧ್ಯಕ್ಷ ಮುಕ್ಕಾಟಿರ ಎ.ಅಪ್ಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಹುಟ್ಟು, ಬೆಳವಣಿಗೆಗಳ ಕುರಿತು ಹೇಳಿದರು.ಬೆಳ್ಳಿ ಮಹೋತ್ಸವದ ಅಂಗವಾಗಿ ಹೊರ ತರಲಾದ ‘ಸ್ಮರಣ ಸಂಚಿಕೆ’ಯನ್ನು ಅನಾವರಣಗೊಳಿಸಲಾಯಿತು. ಬೆಳ್ಳಿ ಹಬ್ಬಕ್ಕೆ ನೆರವನ್ನು ನೀಡಿದವರನ್ನು ಹಾಗೂ ವೇದಿಕೆಯಲ್ಲಿ ಆಸೀನರಾಗಿದ್ದ ಅತಿಥಿಗಳನ್ನು ಗೌರವಿಸಲಾಯಿತು. ಇದಕ್ಕೂ ಮುನ್ನ ಕರ್ನಾಟಕ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಬಿ.ಕೆ.ಶಿವರಾಂ ಉದ್ಘಾಟಿಸಿದರು.
ಸಂಘದ ಮುಖಂಡರಾದ ಕೆ.ಎಚ್.ಜಗದೀಶ್, ವೆಂಕಟರಮಣ, ವೈ.ಡಿ.ಕೇಶವಾನಂದ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಮತ್ತಿತರರು ಹಾಜರಿದ್ದರು.