ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ:ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಆವರಿಸಿದ್ದು, ಯಾವುದೇ ಸಮಯದಲ್ಲಿ ಪೂರ್ಣಪ್ರಮಾಣದಲ್ಲಿ ಯುದ್ಧ ಘೋಷಣೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದವರು ಮತ್ತೆ ಯುದ್ಧಭೂಮಿಯಲ್ಲಿ ಹೋರಾಡಲು ಕೇಂದ್ರ ಸರ್ಕಾರದ ಆಹ್ವಾನಕ್ಕಾಗಿ ಕಾಯುತ್ತಿದ್ದಾರೆ. ಇಂಥ ಅವಕಾಶ ಸಿಕ್ಕರೆ ಅದಕ್ಕಿಂತ ಹೆಮ್ಮೆ ಮತ್ತೊಂದಿಲ್ಲ, ಹೀಗಾಗಿ ನಮಗೂ ಅವಕಾಶ ನೀಡಿದರೆ ಖಂಡಿತ ಯುದ್ಧಭೂಮಿಗೆ ತೆರಳುತ್ತೇವೆ.
ಇದು, ನಿವೃತ್ತಿಯಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಬನ್ನಿಕೊಪ್ಪದ ನಾಗರಾಜ ವೆಂಕಟಾಪುರ ಅವರ ನುಡಿ. ನಾನಂತೂ ಯುದ್ಧಭೂಮಿಗೆ ತೆರಳಲು ಸಿದ್ಧವಾಗಿದ್ದೇನೆ. ನನ್ನಂತೆ ಅನೇಕರು ಮಾತನಾಡಿಕೊಂಡಿದ್ದು, ಆಹ್ವಾನಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.ಒಂದು ಬಾರಿ ಸೇನೆಗೆ ಸೇರಿದರೆ ನಿವೃತ್ತಿ ಎನ್ನುವುದೇ ಇರುವುದಿಲ್ಲ. ನಾವು ನಿವೃತ್ತಿಯಾಗಿರುವುದು ಕೇವಲ ತಾಂತ್ರಿಕ ಪ್ರಕ್ರಿಯೇ ಅಷ್ಟೇ, ದೇಶ ಸೇವೆಗಾಗಿ ಸದಾ ಸಿದ್ಧವಾಗಿರುತ್ತೇವೆ. ದೇಶ ಯಾವುದೇ ಸಮಯದಲ್ಲಿಯೂ ನಮ್ಮನ್ನು ಆಹ್ವಾನಿಸಬಹುದು. ಹಾಗಂತ ನಾವು ನಿವೃತ್ತಿಯ ವೇಳೆಯಲ್ಲಿಯೇ ಬರೆದುಕೊಟ್ಟಿರುತ್ತೇವೆ. ಈಗ ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂದೂರ ಪ್ರಾರಂಭಿಸಿರುವ ಭಾರತ ಪೂರ್ಣ ಪ್ರಮಾಣದ ಯುದ್ಧ ಘೋಷಿಸುವ ಸಾಧ್ಯತೆ ಇದೆ. ಹೀಗಾಗಿ, ವಾಟ್ಸ್‌ಆ್ಯಪ್‌ನಲ್ಲಿ ನಿವೃತ್ತಿಯಾಗಿ 7 ವರ್ಷದೊಳಗಿನವರನ್ನ ಮತ್ತೆ ಸೇವೆಗೆ ಅಹ್ವಾನಿಸುವ ಸಂದೇಶವೊಂದು ಹರಿದಾಡುತ್ತಿದೆ. ಆದರೆ, ಈ ವರೆಗೆ ನಮಗೆ ಅಧಿಕೃತ ಆಹ್ವಾನ ಬಂದಿಲ್ಲ. ಆದರೆ, ಅದಕ್ಕಾಗಿ ಕಾಯುತ್ತಿದ್ದೇವೆ. ಬಂದರೆ ಒಂದು ನಿಮಿಷವೂ ವ್ಯಯ ಮಾಡದೆ ಸೇನೆಗೆ ಸೇರಿ ಯುದ್ಧ ಭೂಮಿಯಲ್ಲಿ ಹೋರಾಡಲು ಸಿದ್ಧವಿರುವುದಾಗಿ ಹೇಳಿದ್ದಾರೆ.
ಮತ್ತೊಬ್ಬ ನಿವೃತ್ತ ಯೋಧ ಸಿದ್ಧು ಹಳ್ಳಿ, ಇಟಗಿ ಗ್ರಾಮದವರು. ಇವರ ಪತ್ನಿ ತುಂಬು ಗರ್ಭಿಣಿ. ಆದರೂ ಇವರು ಸಹ ಸೇನೆಯ ಆಹ್ವಾನಕ್ಕಾಗಿ ಕಾಯುತ್ತಿದ್ದಾರೆ. ಇವರ ಸಹೋದರ ಈಗಾಗಲೇ ಉರಿ ಸೆಕ್ಟರ್‌ನಲ್ಲಿಯೇ ಇದ್ದಾರೆ. ನನ್ನ ಪತ್ನಿಗೆ ಗಂಡಾಗಲಿ, ಹೆಣ್ಣು ಮಗುವಾಗಲಿ. ಇಲ್ಲಿದ್ದವರು ನೋಡಿಕೊಳ್ಳುತ್ತಾರೆ. ನಾನು ಭಾರತಾಂಬೆಗೆ ಸೇವೆ ನೀಡಲು ಸಿದ್ಧಿನಿದ್ದೇನೆ ಎನ್ನುತ್ತಾರೆ.ಹೀಗೆ ಬನ್ನಿಕೊಪ್ಪದಲ್ಲಿರುವ ನಿವೃತ್ತ ಯೋಧರು ಕಳೆದೆರಡು ದಿನಗಳಿಂದ ಮತ್ತೆ ಸೇನೆಗೆ ಸೇರಿ ಸೇವೆ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ. ಕೊಪ್ಪಳದಲ್ಲಿ ವಾಸವಾಗಿರುವ ಶ್ರೀಧರ ಮಾಲಿಪಾಟೀಲ್, ಚಿತ್ರದುರ್ಗದ ಪೊಲೀಸ್ ಇಲಾಖೆಯಲ್ಲಿರುವ ಪ್ರಭು ಚೌಡಿ ಸೇರಿದಂತೆ ಅನೇಕರು ಮತ್ತೆ ದೇಶ ಸೇವೆ ಮಾಡಲು ಉತ್ಸುಕರಾಗಿದ್ದಾರೆ.
ಯುದ್ಧ ಸಂದರ್ಭದಲ್ಲಿ ಸೇನೆಯಲ್ಲಿರುವ ದೊಡ್ಡ ಹೆಮ್ಮೆ. ಈ ಯುದ್ಧದಲ್ಲಿ ಭಾಗಿಯಾದರೆ ಆಪರೇಷನ ಸಿಂದೂರ ಎನ್ನುವ ಮೆಡಲ್ ಬರುತ್ತದೆ. ಅಂಥ ಹಿರಿಮೆ, ಗರಿಮೆ ನಮಗೆ ಸಿಗುತ್ತದೆ. ಅದಕ್ಕಿಂತ ಮಿಗಿಲಾಗಿ ನಿವೃತ್ತಿಯಾಗಿರುವ ನಾವು ಯುದ್ಧದ ಸಮಯದಲ್ಲಿ ಸೇನೆಯಲ್ಲಿರುವುದು ಬಹಳ ಮುಖ್ಯ ಎನ್ನುತ್ತಾರೆ.ಧೈರ್ಯ ತುಂಬುತ್ತಿದ್ದಾರೆ:
ನಿವೃತ್ತ ಸೈನಿಕರು ಈಗ ಜಾಗೃತರಾಗಿದ್ದಾರೆ. ದೇಶಾದ್ಯಂತ ಲಕ್ಷಾಂತರ ಜನರಿದ್ದು ಅವರೆಲ್ಲರು ದೇಶ ಸೇವೆಗೆ ಸಿದ್ಧವಾಗಿದ್ದಾರೆ. ಈಗಾಗಲೇ ಅವರು ಕರ್ತವ್ಯ ನಿರತ ಯೋಧರ ಕುಟುಂಬ ಸಂಪರ್ಕಿಸಿ ಅವರಿಗೆ ಧೈರ್ಯ ತುಂಬುತ್ತಿದ್ದಾರೆ. ದೇಶಕ್ಕಾಗಿ ಹೋರಾಡುತ್ತಿರುವ ನಿಮ್ಮ ಮಗ, ನಿಮ್ಮ ಪತಿಗೆ ದೊಡ್ಡ ಅವಕಾಶ ದೊರೆತಿದೆ. ಇಂಥ ಸಂದರ್ಭ ನಮಗೆ ಸಿಗಲಿಲ್ಲ ಎನ್ನುವ ಕೊರಗು ಇದೆ. ಹೀಗಾಗಿ, ನೀವು ಧೈರ್ಯದಿಂದ ಇರಿ ಎಂದು ದೂರವಾಣಿಯಲ್ಲಿ ಧೈರ್ಯ ತುಂಬುತ್ತಿದ್ದಾರೆ.ನಾನು ಸೇನೆಯಿಂದ ನಿವೃತ್ತಿಯಾಗಿ 5 ವರ್ಷ ಕಳೆಯುತ್ತಿದೆ. ನಮಗೆ ಇಂತಹ ಯುದ್ಧದಲ್ಲಿ ಹೋರಾಡುವ ಅವಕಾಶ ಸಿಗಲಿಲ್ಲ. ಇದೀಗ ದೇಶ ಅವಕಾಶ ನೀಡಿದರೆ ಆಪರೇಷನ್ ಸಿಂದೂರನಲ್ಲಿ ಪಾಲ್ಗೊಳ್ಳುತ್ತೇವೆ.
ನಾಗರಾಜ ವೆಂಕಟಾಪುರ ನಿವೃತ್ತ ಯೋಧ, ಬನ್ನಿಕೊಪ್ಪ